

ಆರ್.ತುಳಸಿಕುಮಾರ್
ಬೆಂಗಳೂರು: ರಾಜಧಾನಿಯ ಉತ್ತರ ಭಾಗದಲ್ಲಿ ಬಿಡಿಎ ಹೊಸ ಬಡಾವಣೆ ರಚಿಸಲು ಭೂಸ್ವಾಧೀನ ಮಾಡಿಕೊಳ್ಳುವ ಉದ್ದೇಶದಿಂದ, ಆ ಪ್ರದೇಶದಲ್ಲಿ ಸಾರ್ವಜನಿಕರು ನಿರ್ಮಿಸುವ ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಂತೆ ಬೆಸ್ಕಾಂಗೆ ಪತ್ರ ಬರೆದು ವಿವಾದವನ್ನು ಹುಟ್ಟುಹಾಕಿದೆ.
ಪ್ರಸ್ತುತ ಪ್ರಾಧಿಕಾರವು ಡಾ. ಕೆ.ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಇದರ ಕಾಮಗಾರಿ ಆರಂಭಿಕ ಹಂತದಲ್ಲಿರುವಾಗಲೇ ಮುಂದುವರಿದ ಕಾರಂತ ಲೇಔಟ್ ರಚಿಸಲು ಮುಂದಾಗಿದೆ. ಜತೆಗೆ ಹೊಸದಾಗಿ ರಚಿಸಲು ಉದ್ದೇಶಿಸಿರುವ ಇನ್ನಿತರ ಲೇಔಟ್‌ಗಳಿಗೂ ಭೂಸ್ವಾಧೀನಪಡಿಸಿಕೊಳ್ಳಲು ಅಗತ್ಯ ಜಮೀನು ಗುರುತಿಸುವ ಪ್ರಕ್ರಿಯೆಯಲ್ಲಿ ಮಗ್ನವಾಗಿದೆ. ಈ ಮಧ್ಯೆ ಉದ್ದೇಶಿತ ಯೋಜನೆಗೆ ಗುರುತಿಸಲಾಗುತ್ತಿರುವ ಜಮೀನಿನಲ್ಲಿ ರೆವಿನ್ಯೂ ಬಡಾವಣೆಗಳನ್ನು ರಚಿಸಿ ಅಲ್ಲಿ ಕಟ್ಟಡಗಳನ್ನು ನಿರ್ಮಿಸಿದಲ್ಲಿ ಉದ್ದೇಶಿತ ಲೇಔಟ್‌ಗೆ ತೊಡಕಾಗುವ ಸಾಧ್ಯತೆ ಇದೆ. ಇದಕ್ಕೆ ಕಡಿವಾಣ ಹಾಕಲು ಭೂಸ್ವಾಧೀನ ಮಾಡಿಕೊಳ್ಳಲಿರುವ ಪ್ರದೇಶಗಳಲ್ಲಿ ಅನುಮೋದಿತ ಲೇಔಟ್ ಹೊರುತುಪಡಿಸಿ ಅನಧಿಕೃತ ಬಡಾವಣೆಗಳಲ್ಲಿ ಮನೆ ನಿರ್ಮಿಸಿಕೊಳ್ಳುವವರಿಗೆ ವಿದ್ಯುತ್ ಸಂಪರ್ಕ ಸಹಿತ ಯಾವುದೇ ನಾಗರಿಕ ಸೌಲಭ್ಯಗಳನ್ನು ನೀಡಬಾರದು ಎಂಬುದಾಗಿ ಬಿಡಿಎ ಆಯುಕ್ತರು ಇತ್ತೀಚಿಗೆ ಬೆಸ್ಕಾಂ ಎಂಡಿಗೆ ಪತ್ರ ಬರೆದು ವಿನಂತಿಸಿದ್ದಾರೆ.
ಆಯುಕ್ತರು ಲಕ್ಷ್ಮಣರೇಖೆ ದಾಟಿದರೇ?:
ಅಚ್ಚರಿಯ ವಿಷಯವೇನೆಂದರೆ, ಬಿಡಿಎ ಆಯುಕ್ತರು ಈ ರೀತಿ ಅನ್ಯ ಸಂಸ್ಥೆಗೆ ಪತ್ರ ಬರೆದು ಸಾರ್ವಜನಿಕರಿಗೆ ಆ ಇಲಾಖೆಯಿಂದ ಯಾವುದೇ ಮೂಲಸೌಲಭ್ಯ ನೀಡಬೇಡಿರೆಂದು ಸಲಹೆ ಅಥವಾ ವಿನಂತಿ ಮಾಡುವ ಅಧಿಕಾರ ಇಲ್ಲ. ಅದರಲ್ಲೂ ಹೊಸದಾಗಿ ರಚಿಸುವ ಬಡಾವಣೆಗೆ ಇನ್ನೂ ಭೂಸ್ವಾಧೀನವಾಗದ ಜಾಗವನ್ನು ಭವಿಷ್ಯದಲ್ಲಿ ವಶಕ್ಕೆ ತೆಗೆದುಕೊಳ್ಳುವುದಾಗಿ ಊಹಿಸಿ ಜನರಿಗೆ ಸೌಲಭ್ಯ ನೀಡದಂತೆ ಸೂಚಿಸಿರುವ ಪ್ರಾಧಿಕಾರದ ಆಯುಕ್ತರು ಲಕ್ಷ್ಮಣರೇಖೆ ದಾಟಿದಂತಿದೆ.
ಬೆಸ್ಕಾಂ ಕೂಡ ಸರ್ಕಾರದ ನೇರ ನಿರ್ದೇಶನ ಇಲ್ಲದೆ ಬೇರೆ ಇಲಾಖೆ/ಸಂಸ್ಥೆಯ ಮನವಿ ಪುರಸ್ಕರಿಸುವಂತಿಲ್ಲ. ಭಾರತೀಯ ವಿದ್ಯುಚ್ಛಕ್ತಿ ಕಾಯ್ದೆಯ ನಿಯಮ 43ರ ಪ್ರಕಾರ ಗ್ರಾಹಕರೊಬ್ಬರು ತಾನು ನಿರ್ಮಿಸಿರುವ ಮನೆಗೆ ವಿದ್ಯುತ್ ಸಂರ್ಪಕ ಕಲ್ಪಿಸುವಂತೆ ಕೋರಿ ಯಾವುದೇ ಎಸ್ಕಾಂಗೆ ಅರ್ಜಿ ಸಲ್ಲಿಸಿದರೆ ಅದನ್ನು ಸಂಸ್ಥೆಯು ಮಾನ್ಯ ಮಾಡಬೇಕು. ಅರ್ಜಿದಾರನ ಸ್ವತ್ತು ಅನುಮೋದಿತ ಅಥವಾ ಖಾಸಗಿ ಲೇಔಟ್‌ಗೆ ಸೇರಿದೆಯೆ ಎಂಬುದನ್ನು ಪರಾಮರ್ಶಿಸುವಂತಿಲ್ಲ. ವಾಸದ ಮನೆ ಮೊದಲು ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಿದ ಬಳಿಕ ಕಟ್ಟಡ ಪೂರ್ಣಗೊಳ್ಳುತ್ತಿದ್ದಂತೆ ಕಾಯಂ ಆಗಿ ಸಂಪರ್ಕ ನೀಡಬೇಕಾಗುತ್ತದೆ.
ಹೀಗಾಗಿ ಬಿಡಿಎ ಆಯುಕ್ತರು ಬರೆದಿರುವ ಪತ್ರದನ್ವಯ ಬೆಸ್ಕಾಂ ಅಧಿಕಾರಿಗಳು ಉದ್ದೇಶಿತ ಬಡಾವಣೆಗಳು ನಿರ್ಮಾಣವಾಗುವ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಳ್ಳುವವರಿಗೆ ವಿದ್ಯುತ್ ಸಂಪರ್ಕ ತಡೆಹಿಡಿಯುವಂತಿಲ್ಲ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ಬಿಡಿಎಯಿಂದಲೇ ನಿಯಮ ಉಲ್ಲಂಘನೆ:
ಹೊಸ ಬಡಾವಣೆ ನಿರ್ಮಾಣ ಸಂಬಂಧ ಬಿಡಿಎ ನಿಯಮಗಳನ್ನು ಉಲ್ಲಂಸಿದೆ ಎಂಬ ಆಕ್ಷೇಪ ಕೇಳಿಬಂದಿದೆ. ಐದಾರು ವರ್ಷಗಳ ಹಿಂದೆಯೇ ನಗರದ ಸುತ್ತ ಕಾರಂತ ಲೇಔಟ್ ಸೇರಿ 5 ಬಡಾವಣೆಗಳನ್ನು ನಿರ್ಮಿಸುವುದಾಗಿ ಬಿಡಿಎ ಹೇಳಿತ್ತು. ಆದರೆ, ನಗರದ ಹೊರವಲಯವು ಹಸಿರು ಪ್ರದೇಶಕ್ಕೆ ಒಳಪಟ್ಟಿರುವುದು, ಭೂಮಿ ಬೆಲೆ ಹೆಚ್ಚಳದಿಂದ ಲೇಔಟ್ ನಿರ್ಮಾಣದ ವೆಚ್ಚ ಹೆಚ್ಚಳ ಹಾಗೂ ‘ವರ್ಟಿಕಲ್ ಡೆವಲಪ್ಮೆಂಟ್’ ಮಾದರಿ ಅಳವಡಿಸಿಕೊಂಡ ಪರಿಣಾಮ ಆ ಪ್ರಸ್ತಾಪವನ್ನು ಕೈಬಿಡಲಾಯಿತು. ಕಾರಂತ ಲೇಔಟ್‌ಅನ್ನು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದರಿಂದ ಇದುವೇ ಕಡೆಯ ಬಡಾವಣೆ ಎಂದೂ ಪ್ರಾಧಿಕಾರ ಹೇಳಿತ್ತು. ಈಗ ಮುಂದುವರಿದ ಕಾರಂತ ಲೇಔಟ್ ಜತೆಗೆ ಏರ್‌ಪೋರ್ಟ್ ಸುತ್ತ ಇನ್ನೂ ಕೆಲ ಬಡಾವಣೆಗಳನ್ನು ನಿರ್ಮಿಸುವ ಸಂಬಂಧ ಸರ್ವೇ ಆರಂಭಿಸಿದೆ. ಈ ಪ್ರದೇಶದಲ್ಲಿ ಕೃಷಿ ಭೂಮಿ, ಕಿರು ಅರಣ್ಯವೂ ಇದೆ. ಒಂದು ವೇಳೆ ಬಡಾವಣೆ ನಿರ್ಮಾಣವಾದಲ್ಲಿ ಅಲ್ಲಿ ವಾಸಿಸುವ ಜನರಿಗೆ ನೀರು ಪೂರೈಕೆ ಸಾಧ್ಯವಿಲ್ಲದಿದ್ದರೂ, ಲೇಔಟ್ ರಚಿಸುವ ಹಿಂದೆ ರಿಯಲ್ ಎಸ್ಟೇಟ್ ಲಾಬಿ ಕೆಲಸ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಬಿಡಿಎ ಭವಿಷ್ಯದಲ್ಲಿ ಬಡಾವಣೆ ರಚಿಸುವುದಾಗಿ ಹೇಳಿ ಅಲ್ಲಿನ ಜನರು ಮನೆ ಕಟ್ಟಿಕೊಳ್ಳಲು ವಿದ್ಯುತ್ ಸಂಪರ್ಕ ನೀಡಬಾರದೆಂದು ಬೆಸ್ಕಾಂಗೆ ಪತ್ರ ಬರೆದಿರುವುದು ವ್ಯಕ್ತಿಯ ಜೀವಿಸುವ ಹಕ್ಕನ್ನು ಕಸಿಯುವ ಯತ್ನವಾಗಿದೆ. ಇಂತಹ ಕಾನೂನುಬಾಹಿರ ಕೆಲಸಕ್ಕೆ ಮುಂದಾಗಿರುವ ಬಿಡಿಎ ಅಧಿಕಾರಿಗಳಿಗೆ ಸರ್ಕಾರ ಬುದ್ಧಿ ಹೇಳಲಿ. ರೈತರ ಜಮೀನನ್ನು ಕಸಿದು ಉಳ್ಳವರಿಗಾಗಿ ಮಹಲು ಕಟ್ಟಿಕೊಡಲು ಲೇಔಟ್ ನಿರ್ಮಿಸುವ ಚಾಳಿಯನ್ನು ಬಿಡಿಎ ಕೈಬಿಡಲಿ.
- ರಮೇಶ್ ರಾಮಗೊಂಡನಹಳ್ಳಿ, ರೈತ ಮುಖಂಡ
ಮುಂದುವರಿದ ಕಾರಂತ ಲೇಔಟ್ ಹಾಗೂ ಇತರ ಪ್ರದೇಶದಲ್ಲಿ ಮನೆ ನಿರ್ಮಿಸುವವರಿಗೆ ವಿದ್ಯುತ್ ಸಂಪರ್ಕ ನೀಡಬಾರದೆಂಬ ಒಕ್ಕಣೆ ಉಳ್ಳ ಬಿಡಿಎ ಪತ್ರ ನಮ್ಮ ಸಂಸ್ಥೆಗೆ ರವಾನೆಯಾಗಿದೆ. ಆದರೆ, ಬಿಡಿಎ ಮನವಿಯನ್ನು ಬೆಸ್ಕಾಂ ನಿಯಮಗಳಡಿ ಜಾರಿ ಮಾಡಲು ಸಾಧ್ಯವಿಲ್ಲ. ಯಾರೇ ವ್ಯಕ್ತಿ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದರೆ ಅದನ್ನು ಪರಿಶೀಲಿಸಿ ಸೌಲಭ್ಯ ನೀಡಲು ನಮ್ಮ ಸಂಸ್ಥೆ ಬದ್ಧವಾಗಿದೆ.
- ಹೆಸರು ಹೇಳಲಿಚ್ಛಿಸದ ಬೆಸ್ಕಾಂ ಅಧಿಕಾರಿ