ಆಟದಮೈದಾನ ಹಸ್ತಾಂತರಿಸಲು ಬಿಡಿಎ ತಗಾದೆ

bdaplayground
Published on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೆಂಗೇರಿ ಉಪನಗರದಲ್ಲಿ ಹೊಂದಿರುವ ಬೃಹತ್ ಆಟದಮೈದಾನವನ್ನು ಬಿಬಿಎಂಪಿ ಸುಪರ್ದಿಗೆ ವಹಿಸಲು ತಕರಾರು ಎತ್ತಿದ್ದು, ಸಿ.ಎ. ನಿವೇಶನದ ಗುತ್ತಿಗೆ ಮೌಲ್ಯ ಪಾವತಿಸುವಂತೆ ಪಟ್ಟು ಹಿಡಿದಿದೆ.

ಕೆಂಗೇರಿ ಉಪನಗರದ ಮುಖ್ಯರಸ್ತೆಯಲ್ಲಿ 2 ಎಕರೆ 23 ಗುಂಟೆ (10,444 ಚದರ ಮೀ.) ವಿಸ್ತೀರ್ಣದ ಬೃಹತ್ ಆಟದಮೈದಾನ ಇದೆ. ಇದನ್ನು ಸದ್ಯ ಬಿಡಿಎ ನಿರ್ವಹಿಸುತ್ತಿದೆ. ಈ ಪ್ಲೇಗ್ರೌಂಡ್‌ನ್ನು ಅಭಿವೃದ್ಧಿಪಡಿಸುವಂತೆ ಸ್ಥಳೀಯರ ಒತ್ತಾಯದ ಮೇರೆಗೆ ಪಾಲಿಕೆಗೆ ಹಸ್ತಾಂತರಿಸುವಂತೆ ಶಾಸಕ ಎಸ್.ಟಿ.ಸೋಮಶೇಖರ್ 2021ರಲ್ಲಿ ಸಚಿವರಾಗಿದ್ದ ವೇಳೆ ಬಿಡಿಎಗೆ ಪತ್ರ ಬರೆದಿದ್ದರು. ಇದನ್ನಾಧರಿಸಿ ಪ್ರಾಧಿಕಾರವು ಪ್ಲೇಗ್ರೌಂಡ್ ಬಿಟ್ಟುಕೊಡಲು ಸದರಿ ಆಟದಮೈದಾನದ ಜಾಗಕ್ಕೆ ಸಿ.ಎ. ನಿವೇಶನಕ್ಕೆ 30 ವರ್ಷದ ಒಟ್ಟಾರೆ ಗುತ್ತಿಗೆ ಮೌಲ್ಯ ಪಾವತಿಸಿದ್ದಲ್ಲಿ 9.61 ಕೋಟಿ ರೂ. (ಜಿಎಸ್‌ಟಿ ಸೇರಿ) ಅಥವಾ ವರ್ಷಾಸನ ಗುತ್ತಿಗೆ ಮೌಲ್ಯ ಪಾವತಿಸಿದ್ದಲ್ಲಿ ಪ್ರತೀ ವರ್ಷ 1.74 ಕೋಟಿ ರೂ. (ಜಿಎಸ್‌ಟಿ ಸೇರಿ) ಹಾಗೂ ಹೆಚ್ಚುವರಿ ಗುತ್ತಿಗೆ ಮೌಲ್ಯ 31,500 ರೂ. ಪಾವತಿಸಿದ್ದಲ್ಲಿ ನೋಂದಣಿ ಮಾಡಿಕೊಡುವುದಾಗಿ ತಿಳಿಸಿತ್ತು.

ಈ ಪತ್ರ ಸ್ವೀಕರಿಸಿದ ಪಾಲಿಕೆ ಆಯುಕ್ತರು ದೊಡ್ಡ ಮೊತ್ತವನ್ನು ನೋಡಿ ಹೌಹಾರಿದ್ದಾರೆ. ಜತೆಗೆ ಈ ವಿಷಯವಾಗಿ ಇತರ ಅಧಿಕಾರಿಗಳೊಂದಿಗೆ ಚರ್ಚಿಸಿ ಆಟದಮೈದಾನಕ್ಕಾಗಿ ಇಷ್ಟು ಬೃಹತ್ ಹಣವನ್ನು ಭರಿಸಬಹುದೇ ಎಂಬುದನ್ನು ವಿಮರ್ಶೆ ಮಾಡಿದ್ದಾರೆ. ಈ ದಿನದವರೆಗೆ ಪಾಲಿಕೆ ಹಣ ಭರಿಸದ ಕಾರಣ ಬಿಡಿಎ ಅಧಿಕಾರಿಗಳು ಬದಲಿ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾಲಿಕೆ ನಿಲುವಿಗೆ ಸಿಗದ ಸ್ಪಂದನೆ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಬಡಾವಣೆಯಲ್ಲಿನ ಉದ್ಯಾನ ಅಥವಾ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಿದ ಬಳಿಕ ಇಲ್ಲವೇ ಇಂತಿಷ್ಟು ಕಾಲಮಿತಿ ನಂತರ ಸ್ಥಳೀಯಾಡಳಿತಕ್ಕೆ ಹಸ್ತಾಂತರಿಸಬೇಕು. ಈ ನಿಯಮ ಎಲ್ಲ ಖಾಸಗಿ ಲೇಔಟ್‌ಗಳಿಗೆ ಅನ್ವಯಿಸುವ ರೀತಿ ಬಿಡಿಎಗೂ ಅನ್ವಯವಾಗುತ್ತದೆ. ಈ ನಿಯಮದಂತೆ ಬಿಬಿಎಂಪಿ ಕೆಂಗೇರಿ ಉಪನಗರದ ಆಟದಮೈದಾನವನ್ನು ಹೇಗಿದೆಯೋ ಹಾಗೆಯೆ ಬಿಟ್ಟುಕೊಡುವಂತೆ ಮನವಿ ಮಾಡಿದೆ. ಆದರೆ, ಬಿಡಿಎ ಅಧಿಕಾರಿಗಳು ಮಾತ್ರ ತಮ್ಮ ನಿಲುವಿನಿಂದ ಹಿಂದೆ ಸರಿದಿಲ್ಲ. ಹೀಗಾಗಿ ಬೃಹತ್ ಪ್ಲೇಗ್ರೌಂಡ್‌ಗಾಗಿ ಬಿಡಿಎ ಹಾಗೂ ಬಿಬಿಎಂಪಿ ಮಧ್ಯೆ ಜಟಾಪಟಿ ಏರ್ಪಟ್ಟಂತಿದೆ.

ಏಕೈಕ ಪ್ಲೇಗ್ರೌಂಡ್:

ಕೆಂಗೇರಿ ಉಪನಗರವು ಬೆಂಗಳೂರಿನ ಮೊದಲ ಸ್ಯಾಟಲೈಟ್ ಟೌನ್ ಆಗಿ ಅಭಿವೃದ್ಧಿಗೊಂಡಿದೆ. 40 ವರ್ಷಗಳ ಹಿಂದೆಯೇ ಲೇಔಟ್ ರಚನೆಗೆ ಯೋಜನೆ ಸಿದ್ಧಗೊಂಡರೂ 1990ರಿಂದೀಚಿಗೆ ಹೆಚ್ಚು ಮುನ್ನೆಲೆಗೆ ಬಂದಿದೆ. ಸದ್ಯ ಕೆಂಗೇರಿ ಉಪನಗರದಲ್ಲಿರುವ 2.23 ಎಕರೆ ವಿಸ್ತೀರ್ಣದ ಆಟದಮೈದಾನವೇ ಅತಿ ದೊಡ್ಡ ಪ್ಲೇಗ್ರೌಂಡ್ ಆಗಿದೆ. ಇದನ್ನೀಗ ಸ್ಟೇಡಿಯಂ ಆಗಿ ಅಭಿವೃದ್ಧಿಪಡಿಸಲು ಶಾಸಕ, ಸಂಸದರು ಮುಂದಾಗಿದ್ದಾರೆ. ಇದಕ್ಕೆ ಸಾರ್ವಜನಿಕರು ಕೂಡ ಬೆಂಬಲವಾಗಿ ನಿಂತಿದ್ದರೂ, ಬಿಡಿಎ ಮಾತ್ರ ಇದು ಆಟದಮೈದಾನ ಅಲ್ಲ, ಸಿ.ಎ. ನಿವೇಶನವೆಂದು ತಗಾದೆ ಎದ್ದಿದೆ.

ಅರ್ಜಿ ಸಮಿತಿಗೆ ದೂರು:

ಆಟದಮೈದಾನವನ್ನು ಸಿ.ಎ.ನಿವೇಶನವೆಂದು ತಪ್ಪಾಗಿ ನಮೂದಿಸಿ ಅದಕ್ಕೆ ಪಾಲಿಕೆಯಿಂದ ದೊಡ್ಡ ಮೊತ್ತವನ್ನು ಪಾವತಿಸುವಂತೆ ಪತ್ರ ಬರೆದಿದ್ದು ತಪ್ಪು. ಈ ವಿಚಾರವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳದೆ ಬಿಡಿಎ ಅಧಿಕಾರಿಗಳು ಸ್ವಯಂ ನಿರ್ಧಾರ ಕೈಗೊಂಡಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ಮನಸೋಇಚ್ಛೆಗೆ ಬಳಸಲು ಹುನ್ನಾರ ಮಾಡಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಹಾಗೂ ಪ್ಲೇಗ್ರೌಂಡ್‌ನ್ನು ಬಿಡಿಎ ಬಡಾವಣೆ ನಕ್ಷೆಯಲ್ಲಿ ಅಳವಡಿಸುವಂತೆ ನಿರ್ದೇಶಿಸಬೇಕು ಎಂದು ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆಯು ವಿಧಾನಸಭೆಯ ಅರ್ಜಿ ಸಮಿತಿಗೆ ದೂರು ದಾಖಲಿಸಿದೆ.

ನಿಯಮ ಹೇಳುವುದೇನು?:

* ಬಿಡಿಎ ಕಾಯ್ದೆ 1976ರ ಸೆಕ್ಷನ್ 32ರ ಪ್ರಕಾರ ಬಡಾವಣೆ ನಿರ್ಮಿಸುವಾಗ ಒಟ್ಟು ವಿಸ್ತೀರ್ಣದಲ್ಲಿ ಶೇ.15 ಪ್ರದೇಶವನ್ನು ಪಾರ್ಕ್, ಮುಕ್ತ ಜಾಗ ಹಾಗೂ ಪ್ಲೇಗ್ರೌಂಡ್‌ಗಾಗಿ ಮೀಸಲಿಡಬೇಕು.

* ಈ ರೀತಿ ಶೇ.15 ಜಾಗವನ್ನು ಮೀಸಲಿಡುವ ನಿಯಮವನ್ನು ಖಾಸಗಿ ಡೆವಲಪರ್ಸ್‌ ಕಡ್ಡಾಯವಾಗಿ ಪಾಲಿಸಬೇಕು. ಇದೇ ನಿಯಮ ಬಿಡಿಎಗೂ ಅನ್ವಯವಾಗುತ್ತದೆ.

* ಬಡಾವಣೆ ನಿರ್ಮಿಸಿದ ಬಳಿಕ ಉದ್ಯಾನ, ಆಟದಮೈದಾನವನ್ನು ಅಭಿವೃದ್ಧಿಪಡಿಸಿ ಮುಂದಿನ ನಿರ್ವಹಣೆಗಾಗಿ ಸ್ಥಳೀಯಾಡಳಿತದ (ಈ ಪ್ರಕರಣದಲ್ಲಿ ಬಿಬಿಎಂಪಿ) ಸುಪರ್ದಿಗೆ ವಹಿಸಬೇಕು.

* ಈ ರೀತಿ ಸುಪರ್ದಿಗೆ ಪಡೆದ ಪಾರ್ಕ್, ಪ್ಲೇಗ್ರೌಂಡ್‌ನ್ನು ಪಾಲಿಕೆ ಮುಂದಿನ ಅಭಿವೃದ್ಧಿ ಕೈಗೊಂಡು ನಿರ್ವಹಣೆ ಜವಾಬ್ದಾರಿ ವಹಿಸಬೇಕು.

ಕೆಂಗೇರಿ ಉಪನಗರದಲ್ಲಿರುವ ಪ್ಲೇಗ್ರೌಂಡ್‌ನ್ನು ಸ್ಟೇಡಿಯಂ ಆಗಿ ಅಭಿವೃದ್ಧಿಪಡಿಸಲು ಅವಕಾಶ ಇದೆ. ಈ ಆಶಯದ ಹಿನ್ನೆಲೆಯಲ್ಲಿ ಶಾಸಕರು ಬಿಡಿಎಗೆ ಪತ್ರ ಬರೆದು ಆಟದಮೈದಾನವನ್ನು ಪಾಲಿಕೆಗೆ ಹಸ್ತಾಂತರಿಸಲು ಸೂಚಿಸಿದ್ದಾರೆ. ಈ ಅಂಶ ಗ್ರಹಿಸದ ಬಿಡಿಎ ಅಧಿಕಾರಿಗಳು ದಾಖಲಾತಿ ಪರಿಶೀಲಿಸದೆ ಎಲ್ಲರನ್ನು ದಿಕ್ಕುತಪ್ಪಿಸಲು ಯತ್ನಿಸುತ್ತಿದ್ದಾರೆ.

- ಬಿ.ಎಂ.ಶಿವಕುಮಾರ್, ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆಯ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net