ಜೆ.ಬಿ.ಕಾವಲ್‌ನಲ್ಲಿ ಏಕಾಏಕಿ ಮನೆಗಳನ್ನು ಒಡೆದ ಬಿಡಿಎ

bda demolish
Published on

ಬೆಂಗಳೂರು: ಡಾ. ಕೆ.ಶಿವರಾಮ ಕಾರಂತ ಬಡಾವಣೆಗೆ ಹೊಂದಿಕೊಂಡಿರುವ ಜಾರಕ್ ಬಂಡೆ ಕಾವಲ್ ಗ್ರಾಮ ವ್ಯಾಪ್ತಿಯ ಖಾಸಗಿ ಲೇಔಟ್‌ನಲ್ಲಿದ್ದ 20ಕ್ಕೂ ಹೆಚ್ಚು ಮನೆಗಳನ್ನು ಬಿಡಿಎ ಏಕಾಏಕಿ ನೆಲಸಮ ಮಾಡಿದೆ. ನಾಲ್ಕಾರು ಜೆಸಿಬಿಗಳ ಜತೆಯಲ್ಲಿ ಬಂದ ಬಿಡಿಎ ಇಂಜಿನಿಯರ್‌ಗಳು ಮನೆಗಳ ಮಾಲೀಕರ ಗಮನಕ್ಕೆ ತಾರದೆ ಕಾಂಪೌಂಡ್ ಸೇರಿ ನಿರ್ಮಾಣ ಹಂತದಲ್ಲಿದ್ದ ಮನೆಗಳನ್ನು ಭಾಗಶ: ಕೆಡವಿಹಾಕಲಾಗಿದೆ.

ಕಳೆದ ತಿಂಗಳು ಯಲಹಂಕದ ಜೆ.ಬಿ.ಕಾವಲ್‌ನ ಅನ್ನಪೂಣೇಶ್ವರಿ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿದ್ದ 15ಕ್ಕೂ ಹೆಚ್ಚು ಮನೆಗಳ ಮಾಲೀಕರಿಗೆ ಬಿಡಿಎ ಇಂಜಿನಿಯರ್ ನೋಟಿಸ್ ನೀಡಿದ್ದರು. ಸದರಿ ಜಮೀನು ಕಾರಂತ ಲೇಔಟ್‌ಗೆ ಸೇರಿರುವುದರಿಂದ ಮನೆಗಳನ್ನು ನಿರ್ಮಿಸುವಂತಿಲ್ಲ. ಇದಕ್ಕೆ ಸಮಜಾಯಿಸಿ ನೀಡದಿದ್ದಲ್ಲಿ ಮನೆಗಳನ್ನು ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು. ಅದರಂತೆ ಶುಕ್ರವಾರ ಬೆಳಗ್ಗೆಯೇ ಕೆಲ ಪೊಲೀಸ್ ಪೇದೆಗಳ ಜತೆ ಆಗಮಿಸಿದ ಪ್ರಾಧಿಕಾರದ ಇಂಜಿನಿಯರ್‌ಗಳು ಲೇಔಟ್‌ನಲ್ಲಿದ್ದ ಹಲವು ಮನೆಗಳ ಕಾಂಪೌಂಡ್ ಕೆಡವಿಸಿದ್ದಾರೆ. ಬಳಿಕ ಕೆಲ ಮನೆಗಳನ್ನು ಭಾಗಶ: ಒಡೆದುಹಾಕಲಾಗಿದೆ. ಮನೆ ಮಾಲೀಕರ ಆಕ್ಷೇಪದ ನಡುವೆಯೂ ನೆಲಸಮಗೊಳಿಸುವ ಕಾರ್ಯವನ್ನು ಕೈಬಿಡುವಂತೆ ಗೋರೆದರೂ ಜೆಸಿಬಿಗಳು ಕಟ್ಟಡಗಳ ಮೇಲೆ ಗರ್ಜಿಸಿದವು ಎಂದು ಸ್ಥಳೀಯರು ದೂರಿದ್ದಾರೆ.

ಈ ವಿಚಾರವಾಗಿ ಬಿಡಿಎ ಆಯುಕ್ತರನ್ನು ಸಂಪರ್ಕಿಸಿದಾಗ, ಮನೆಗಳನ್ನು ಕೆಡವಿರುವ ವಿಚಾರ ಗೊತ್ತಿಲ್ಲ. ಯಾರು ನಿಮಗೆ ಮಾಹಿತಿ ಅವರನ್ನೇ ಕೇಳಿ ಎಂದು ಹಾರಿಕೆಯ ಉತ್ತರ ನೀಡಿದರು. ಭೂಸ್ವಾಧೀನ ವಿಭಾಗದ ಅಧಿಕಾರಿಗಳನ್ನು ವಿಚಾರಿಸಿದಾಗ, ಖಾಸಗಿ ಲೇಔಟ್ ಜಾಗ ಕಾರಂತ ಬಡಾವಣೆ ವ್ಯಾಪ್ತಿಗೆ ಸ್ವಾಧೀನ ಪಡಿಸಿಕೊಂಡಿಲ್ಲ. ಹಾಗಾಗಿ ಮನೆಗಳನ್ನು ನಾವು ಒಡೆಯಲು ಹೇಳಿಲ್ಲ ಎಂದು ಸಮಜಾಯಿಸಿ ನೀಡಿದರು.

ಬಿಡಿಎ ತಕರಾರು ಏಕೆ?:

ಅನ್ನಪೂರ್ಣೇಶ್ವರಿ ಬಡಾವಣೆಯು 2020ರಲ್ಲೇ ಡಿಸಿ ಪರಿವರ್ತನೆಯಾಗಿ ಅನುಮೋದಿತ ಲೇಔಟ್ ಪ್ರಮಾಣಪತ್ರ ಪಡೆದಿದೆ. ಆ ಸಂದರ್ಭದಲ್ಲೇ ಸದರಿ ಜಾಗವು ಕಾರಂತ ಬಡಾವಣೆಗೆ ಸ್ವಾಧೀನ ಪಡಿಸಿಕೊಂಡ ಜಾಗ ಅಲ್ಲವೆಂಬುದನ್ನು ದೃಢಪಡಿಸಲಾಗಿತ್ತು. ಆದರೆ, ಬಿಡಿಎನ ಭೂಸ್ವಾಧೀನ ವಿಭಾಗ ಹಾಗೂ ಕಾರಂತ ಲೇಔಟ್ ಉಸ್ತುವಾರಿ ವಹಿಸಿರುವ ಕೆಲ ಇಂಜಿನಿಯರ್‌ಗಳು ಖಾಸಗಿ ಬಡಾವಣೆಗಳಿಗೆ ನೋಟಿಸ್ ನೀಡಿ ಬೆದರಿಕೆ ಒಡ್ಡುತ್ತಿದ್ದಾರೆಂಬ ದೂರು ಕೇಳಿಬಂದಿತ್ತು. ಇದನ್ನು ಬಿಡಿಎ ಮುಖ್ಯಸ್ಥರ ಗಮನಕ್ಕೂ ತಂದಾಗ ಅಂತಹ ನೋಟಿಸ್ ಜಾರಿ ಮಾಡಲು ಯಾರಿಗೂ ನಿರ್ದೇಶನ ನೀಡಿಲ್ಲವೆಂದು ಸಮಜಾಯಿಸಿ ನೀಡಲಾಗಿತ್ತು.

ಆದರೀಗ ಏಕಾಏಕಿ ಅನುಮೋದಿತ ಲೇಔಟ್‌ನಲ್ಲಿದ್ದ ಮನೆಗಳನ್ನು ಒಡೆದುಹಾಕಿದ್ದರೂ, ಬಿಡಿಎ ಮಾತ್ರ ಈ ಕಾರ್ಯಾಚರಣೆಗೂ ತಮಗೂ ಸಂಬಂಧವಿಲ್ಲ ಎಂದು ಸಮರ್ಥಿಸಿಕೊಂಡಿದೆ. ಜಿಲ್ಲಾಡಳಿತ ಕೂಡ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೊಂಡಿಲ್ಲವೆಂದು ಸ್ಪಷ್ಟನೆ ನೀಡಿದೆ. ಹೀಗಿರುವಾಗ 3ನೇ ವ್ಯಕ್ತಿ ಹತ್ತಾರು ಮಂದಿ ಪೊಲೀಸ್, ಅಧಿಕಾರಿಗಳು ಹಾಗೂ ಜೆಸಿಬಿ ಯಂತ್ರಗಳೊಂದಿಗೆ ಆಗಮಿಸಿ ಖಾಸಗಿ ಸ್ವತ್ತನ್ನು ನೆಲಸಮ ಮಾಡಬಹುದೆ ಎಂದು ಅನ್ನಪೂರ್ಣೇಶ್ವರಿ ಬಡಾವಣೆಯ ಸೈಟ್ ಮಾಲೀಕರು ಪ್ರಶ್ನಿಸಿದ್ದಾರೆ.

ಜೆ.ಬಿ.ಕಾವಲ್ ವ್ಯಾಪ್ತಿಯ ಲೇಔಟ್‌ನಲ್ಲಿ ಮನೆಗಳನ್ನು ಒಡೆದುಹಾಕುವಂತೆ ನಮ್ಮ ಕಡೆಯಿಂದ ಯಾವ ಆದೇಶವನ್ನೂ ನೀಡಿಲ್ಲ. ಯಾರು ಮನೆಗಳನ್ನು ನೆಲಸಮ ಮಾಡಿದ್ದಾರೆಂದು ತಿಳಿದಿಲ್ಲ. ಈ ವಿಚಾರವಾಗಿ ಇನ್ನಷ್ಟೇ ಮಾಹಿತಿ ಪಡೆಯುತ್ತೇನೆ.

- ಅನಿಲ್, ಯಲಹಂಕ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net