ಅಂಜನಾಪುರ ಬಡಾವಣೆಯ ಸಮಸ್ಯೆ ಪರಿವೀಕ್ಷಿಸಿದ ಬಿಡಿಎ ಆಯುಕ್ತ

bda
Published on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತ ಜಿ. ಕುಮಾರ್ ನಾಯಕ್ ಅವರು ಶನಿವಾರ ಜೆ.ಪಿ.ನಗರದ 8 ಹಾಗೂ 9ನೇ ಹಂತ, ಅಂಜನಾಪುರ ಟೌನ್‌ಶಿಪ್, ಮುಂದುವರೆದ ಅಂಜನಾಪುರ ಬಡಾವಣೆ ಮತ್ತು ಆಲಹಳ್ಳಿ ಕೆರೆ ಹೊಂದಿಕೊಂಡಂತಿರುವ ಬಡಾವಣೆಗೆ ಹಠಾತ್ ಭೇಟಿ ನೀಡಿ ಪರಿವೀಕ್ಷಿಸಿದರು.

ಈ ಬಡಾವಣೆಗಳಲ್ಲಿ ಇನ್ನೂ ಕೆಲವೆಡೆ ಮೂಲಸೌಕರ್ಯ ಕಲ್ಪಿಸುವ ಕಾರ್ಯ ನಡೆಯಬೇಕಿದೆ. ವಿವಿಧ ಕಾರಣಗಳಿಂದ ಸ್ಥಗಿತಗೊಂಡಿರುವ ಈ ಕೆಲಸವನ್ನು ಮತ್ತೆ ಪುನಾರಂಭಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಆಯುಕ್ತರು ಸಂಬಂಧಿಸಿದ ಇಂಜಿನಿಯರ್‌ಗಳಿಗೆ ಸೂಚಿಸಿದರು.

ಜೆ.ಪಿ. ನಗರ 8, 9ನೇ ಹಂತ, ಅಂಜನಾಪುರ ಟೌನ್‌ಶಿಪ್, ಮುಂದುವರೆದ ಅಂಜನಾಪುರ ಬಡಾವಣೆ ನಿರ್ಮಾಣ ಮಾಡಲು 1999ರಿಂದ 2002ರಲ್ಲಿನ ಅಂತಿಮ ಅಧಿಸೂಚನೆಯಂತೆ 3,058 ಎಕರೆ 27 ಗುಂಟೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಜಮೀನಿನ ಪೈಕಿ 1,071 ಎಕರೆ 23 ಗುಂಟೆ ಜಮೀನಿನಲ್ಲಿ ಬಡಾವಣೆ ನಿರ್ಮಿಸಿ ವಿವಿಧ ಅಳತೆಯ 14,881 ಮಧ್ಯಂತರ ನಿವೇಶನಗಳನ್ನು 2,176 ಮೂಲೆ ನಿವೇಶನಗಳನ್ನು ಒಟ್ಟು 17,057 ನಿವೇಶನಗಳನ್ನು ರಚಿಸಿ, 39 ಸಿ.ಎ. ನಿವೇಶನಗಳು ಹಾಗೂ 37 ಉದ್ಯಾನವನಗಳು ಪ್ರಾಧಿಕಾರದಿಂದ ನಿರ್ಮಿಸಲಾಗಿದೆ.

ಜೆ.ಪಿ. ನಗರ 9ನೇ ಹಂತ, 7ನೇ ಬಾಕ್ ವ್ಯಾಪ್ತಿಗೆ ಒಳಪಡುವ ಆಲಹಳ್ಳಿ ಕೆರೆಯ ಹಿಂಭಾಗದಲ್ಲಿ ಅನುಮೋದಿತ ನಕ್ಷೆಯಂತೆ ಬಡಾವಣೆ ನಿರ್ಮಾಣ ಮಾಡಿ ವಿವಿಧ ಅಳತೆಯ 71 ನಿವೇಶನಗಳನ್ನು ರಚಿಸಲಾಗಿರುತ್ತದೆ. ಈ ನಿವೇಶನವು ರಸ್ತೆ ಮಟ್ಟದಿಂದ ಸುಮಾರು 5 ಅಡಿ ಆಳದಲ್ಲಿರುವುದರಿಂದ ಮಳೆ ಬಂದಾಗ ಜಲಾವೃತವಾಗುತ್ತಿರುವ ಹಿನ್ನೆಲೆಯಲ್ಲಿ ಸದರಿ ಪ್ರದೇಶವನ್ನು ಎತ್ತರಿಸಿ ಪರಿಹಾರ ಒದಗಿಸುವಂತೆ ಅಭಿಯಂತರ ಸದಸ್ಯರಿಗೆ ಸೂಚಿಸಿದರು.

ಪ್ರಸ್ತುತ ಈ ಬಡಾವಣೆಗಳಲ್ಲಿ ಸುಮಾರು 95.56 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅಂತಿಮ ಹಂತದಲ್ಲಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net