ಗ್ರಾಮೀಣ ಮಕ್ಕಳಿಗೆ ಬಿಸಿಎಂ ಬುನಾದಿ

h15-bcm 1
Published on

ಮರಿದೇವ ಹೂಗಾರ ಹುಬ್ಬಳ್ಳಿ

ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ‘ಬುನಾದಿ’ ತರಬೇತಿ ಜಾರಿಗೆ ತಂದಿದೆ. ಗ್ರಾಮೀಣ ಭಾಗದ ಮಕ್ಕಳು, ವಿಜ್ಞಾನಿ ಸೇರಿದಂತೆ ಉನ್ನತ ಹುದ್ದೆಗೇರುವ ಕನಸಿಗೆ ರೆಕ್ಕೆಪುಕ್ಕ ಕಟ್ಟುತ್ತಿದೆ.

ರಾಜ್ಯಾದ್ಯಂತ 29 ಕೇಂದ್ರಗಳಲ್ಲಿ ಈಗಾಗಲೇ 8,300 ಮಕ್ಕಳು ಬುನಾದಿ (8, 9, 10ನೇ ತರಗತಿ) ತರಬೇತಿ ಪಡೆಯುದ್ದಾರೆ. ಕಲಿಕೆಯಲ್ಲಿ ಅತ್ಯಂತ ಹಿಂದುಳಿದ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡಿದ್ದು, ಶಿಸ್ತುಬದ್ಧ ಪಾಠ, ವ್ಯಕ್ತಿತ್ವ ವಿಕಸನ, ಭವಿತವ್ಯದ ಕುರಿತ ಚಿಂತನೆಗಳು ಮಕ್ಕಳಲ್ಲಿ ಗರಿಗೆದರಲು ಆರಂಭಿಸಿವೆ.

ಬಿಸಿಎಂ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ ಪ್ರವೇಶ ಪಡೆದಿರುವ ಹಾಗೂ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಈ ತರಬೇತಿ ಶುರುವಾಗಿದೆ. ಪ್ರತಿ ಜಿಲ್ಲೆಗೆ ಒಂದು ಕೇಂದ್ರವಿದೆ (ಕೆಲವೆಡೆ 2 ಕೇಂದ್ರಗಳಿವೆ).

ಅಲ್ಲಿ 300 ಮಕ್ಕಳಿಗೆ (150 ಬಾಲಕರು, 150 ಬಾಲಕಿಯರು) ವಿಜ್ಞಾನ, ಗಣಿತ, ಇಂಗ್ಲಿಷ್ ಹಾಗೂ ವ್ಯಕ್ತಿತ್ವ ವಿಕಸನ ವಿಷಯಗಳನ್ನು ಬೋಧಿಸಲಾಗುತ್ತಿದೆ.

ಶೈಕ್ಷಣಿಕ ಗುಣಮಟ್ಟ, ಕಲಿಕಾ ಸುಧಾರಣೆ ತರುವುದು, ವಿಜ್ಞಾನಿಗಳಾಗಲು ಪ್ರೋತ್ಸಾಹಿಸುವುದು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಎದೆಗುಂದದೆ ಸ್ಪರ್ಧೆಯೊಡ್ಡುವಂತಾಗಲು ಏ. 24ರಿಂದ ‘ಬುನಾದಿ’ ಶುರುವಾಗಿದೆ. ಕನಿಷ್ಠ ಐವರು ವಿದ್ಯಾರ್ಥಿಗಳಾದರೂ ಇಸ್ರೋ ಹಾಗೂ ನಾಸಾದಂಥ ಕ್ಷೇತ್ರದಲ್ಲಿ ಸಾಧನೆ ಮಾಡಲು ವಸತಿ ಸಹಿತ ತರಬೇತಿ (ಬೇಸಿಗೆ ರಜೆ ಅವಧಿ) ಕೊಡಲಾಗುತ್ತಿದೆ ಎನ್ನುತ್ತಾರೆ ಬಿಸಿಎಂ ಇಲಾಖೆಯ ಧಾರವಾಡ ಜಿಲ್ಲಾ ಅಧಿಕಾರಿ ಎಸ್.ವಿ. ಹಳಕಟ್ಟಿ.

ಕರ್ಜಗಿ, ಚೇತನ್​ರಾಮ್ಂದ ಬೋಧನೆ: ನುರಿತ ಮತ್ತು ಅನುಭವ ಹೊಂದಿದ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ. ಅಗತ್ಯವಿರುವ ವಿಷಯಗಳನ್ನು ಆನ್​ಲೈನ್ ಮೂಲಕವೂ ಬೋಧಿಸಲಾಗುತ್ತಿದೆ.

ಖ್ಯಾತ ಶಿಕ್ಷಣ ತಜ್ಞರಾದ ಡಾ. ಗುರುರಾಜ ಕರ್ಜಗಿ, ಚೇತನ್​ರಾಮ್ ಅವರಂಥವರು ವ್ಯಕ್ತಿತ್ವ ವಿಕಸನ ತರಬೇತಿ ನೀಡುತ್ತಿದ್ದಾರೆ. ಎಸ್​ಎಸ್​ಎಲ್​ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳು, ತರಬೇತಿಯಲ್ಲಿರುವ ಮಕ್ಕಳೊಂದಿಗೆ ಪ್ರತಿ ಶನಿವಾರ ಆನ್​ಲೈನ್ ಮೂಲಕ ಸಂವಾದ ನಡೆಯುತ್ತಿದೆ.

ಸಂಜೆ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮದೊಂದಿಗೆ ವಿದ್ಯಾರ್ಥಿಗಳಲ್ಲಡಗಿರುವ ಪ್ರತಿಭಾ ಕಲೆ ಪ್ರದರ್ಶಿಸಲು ವಿವಿಧ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತಿದೆ. ಭಾನುವಾರ ಸಂಜೆ ಮಕ್ಕಳ ಚಲನಚಿತ್ರ ವೀಕ್ಷಣೆಯ ಭಾಗ್ಯವೂ ಲಭಿಸಿದೆ.

ತುಳಸಿ ಮದ್ದಿನೇನಿ ಪರಿಕಲ್ಪನೆ: ಬಿಸಿಎಂ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರು ಕೆಲವೆಡೆ ಬಿಸಿಎಂ ಹಾಸ್ಟೆಲ್​ಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಮಕ್ಕಳ ಕಲಿಕಾ ಗುಣಮಟ್ಟ ಅಷ್ಟೊಂದು ಕಂಡುಬಂದಿರಲಿಲ್ಲ.

ಅಂಕ ಪಡೆದು ವಸತಿ ಶಾಲೆ ಸೇರುವುದಲ್ಲ. ಪಠ್ಯವನ್ನು ಮತ್ತಷ್ಟು ಆಳವಾಗಿ ಅಧ್ಯಯನ ಮಾಡಬೇಕು. ಪ್ರತಿಯೊಂದು ಸ್ಪರ್ಧೆಯನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಲು ‘ಬುನಾದಿ’ ಎಂಬ ಪರಿಕಲ್ಪನೆ ಹೊರತಂದರು. ಅವರ ಉದ್ದೇಶವಿಷ್ಟೇ, ಗ್ರಾಮೀಣ ಭಾಗದ ಮಕ್ಕಳೂ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂಬುದು.

ಗ್ರಾಮೀಣ ಭಾಗದ ಅದೆಷ್ಟೋ ಮಕ್ಕಳು ಪ್ರತಿಭಾವಂತರು ಇರುತ್ತಾರೆ. ಎಸ್​ಎಸ್​ಎಲ್​ಸಿ ನಂತರ ಭವಿಷ್ಯದ ದೃಷ್ಟಿಕೋನದಿಂದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ಕಬ್ಬಿಣದ ಕಡಲೆ ಎಂದು ಭಾವಿಸುತ್ತಾರೆ. ಇದನ್ನು ಹೋಗಲಾಡಿಸುವ ಉದ್ದೇಶದ ಜತೆಗೆ ಗ್ರಾಮೀಣ ಭಾಗದ ಮಕ್ಕಳೂ ವಿಜ್ಞಾನಿಗಳಾಗಬೇಕೆಂದು ನಮ್ಮ ಇಲಾಖೆಯ ಹೆಬ್ಬಯಕೆ.

-ತುಳಸಿ ಮದ್ದಿನೇನಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net