ನಲವತ್ತು ಹೆಣ್ಮಕ್ಕಳಿಗೆ ಮೂರೇ ಬಕೆಟ್!

dj mlk bheti
Published on

ಮೊಳಕಾಲ್ಮೂರು: ಸ್ನಾನ ಮಾಡಲು ಮೂರೇ ಬಕೆಟ್, ಶೌಚಕ್ಕೆ ತೆರಳಲು ಪರದಾಟ, ಮೆನ್ಯು ಪ್ರಕಾರ ತಿಂಡಿ, ಊಟ ಇಲ್ಲ, ಬಾಳೆ ಹಣ್ಣು, ಮೊಟ್ಟೆ ಕನಸು, ಸೊಳ್ಳೆ ಕಾಟದ ನಡುವೆ ದಿನ ದೂಡುವುದು ನಿಜಕ್ಕೂ ಯಾತನಮಯ…!

ಹೌದು, ಮೊಳಕಾಲ್ಮೂರಿನ ಬಿಸಿಎಂ ಮೆಟ್ರಿಕ್ ನಂತರ ವಿದ್ಯಾರ್ಥಿನಿಯರ ವಸತಿ ನಿಲಯದ ಅವ್ಯವಸ್ಥೆ ಇದು. ಹಾಸ್ಟೆಲ್ ಸಮಸ್ಯೆಗಳ ದೂರಿನ ಅನ್ವಯ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತಹಸೀಲ್ದಾರ್ ಟಿ.ಜಗದೀಶ್, ಮಂಗಳವಾರ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದಾಗ ಕಂಡು ಬಂದ ಸತ್ಯದ ಸಂಗತಿ.

ವಸತಿ ನಿಲಯದಲ್ಲಿ ಪಿಯು ಹಾಗೂ ಪದವಿ ಓದುತ್ತಿರುವ 40 ಹೆಣ್ಣು ಮಕ್ಕಳು ಇದ್ದಾರೆ. ಸರ್ ನಮ್ಮ ಸ್ಥಿತಿ ಹೇಳತೀರದಾಗಿದೆ.

ಇಂತಹ ಕಷ್ಟದ ಶಿಕ್ಷಣ ನಮಗೆ ಬೇಕಿಲ್ಲ. ಮೆನ್ಯು ಪ್ರಕಾರ ಹಾಸ್ಟೆಲ್ ಸಿಬ್ಬಂದಿ ಎಂದಿಗೂ ತಿಂಡಿ, ಊಟ ನೀಡುತ್ತಿಲ್ಲ. ಮೊಟ್ಟೆ, ಬಾಳೆ ಹಣ್ಣು ಯಾವತ್ತೂ ಕೊಟ್ಟಿಲ್ಲ. ಸೋಪು, ಪೇಸ್ಟ್ ಹಾಗೂ ಕೊಬ್ಬರಿ ಎಣ್ಣೆ ಕಿಟ್ ಬಾಕ್ಸ್ ಕಳೆದ 6 ತಿಂಗಳಿಂದ ನೀಡಿಲ್ಲ. ನೈಟ್‌ಡ್ರೆಸ್ ಇಲ್ಲ. ಮನೆಯಿಂದಲೇ ತಂದು ಉಪಯೋಗಿಸುತ್ತಿದ್ದೇವೆ. ಸಿಬ್ಬಂದಿಗೆ ಕೇಳಿದರೆ ಸ್ಟಾಕ್ ಬಂದಿಲ್ಲ ಎನ್ನುತ್ತಾರೆ ಎಂದು ದೂರಿದರು.

ಕಳೆದ 2 ವರ್ಷದಿಂದ ಹೊದಿಕೆ ಕೊಟ್ಟಿಲ್ಲ. ಸೊಳ್ಳೆಗಳ ಕಾಟ ತಡೆಯಲಾಗದು. ಬಳಕೆಗೆ ಸಮರ್ಪಕ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಇದೆ. ಪ್ರತಿದಿನ ಕಾಲೇಜಿಗೆ 2ರಿಂದ 3 ಕಿ.ಮೀ ನಡೆದುಕೊಂಡು ಹೋಗುವುದು ಕಷ್ಟಕರವಾಗಿದೆ. ಈ ನೋವು ಯಾರಿಗೆ ಹೇಳಬೇಕು. ನೀವು ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು.

ಹಾಸ್ಟೆಲ್ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡ ತಹಸೀಲ್ದಾರ್, ಈ ಅವ್ಯವಸ್ಥೆಗೆ ಕಾರಣ ಯಾರು ಎಂದು ಪ್ರಶ್ನೀಸಿದರು. ಉತ್ತರಿಸಿದ ಮಹಿಳೆ, ಸರ್ ನನಗೆ ಏನೂ ಗೊತ್ತಿಲ್ಲ. ನಾನು ಇಲ್ಲಿ ಹೆಡ್ ಕುಕ್ ಮಾತ್ರ, ನನ್ನ ಮೇಲೆ ಒತ್ತಡ ಹಾಕಿ ಈ ಜವಾಬ್ದಾರಿ ವಹಿಸಿದ್ದಾರೆ. ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಶೇಖರ್ ಹೇಳಿದಂತೆ ನಾನು ಕೆಲಸ ನಿರ್ವಹಿಸುತ್ತಿದ್ದೇನೆ ಎಂದರು.

ವಿದ್ಯಾರ್ಥಿನಿಯರ ಹಾಜರಿ ಪುಸ್ತಕ, ಹಾಸ್ಟೆಲ್‌ನ ಸಂಪೂರ್ಣ ನಿರ್ವಹಣೆ ಕಡತ ಅವರಲ್ಲಿದೆ. ನನಗೆ ಮೇಲುಸ್ತುವಾರಿ ಜವಾಬ್ದಾರಿ ಮಾತ್ರ ವಹಿಸಿದ್ದಾರೆ, ನಾನು ಅಸಹಾಯಕಳು ಎಂದು ಅಳಲು ತೋಡಿಕೊಂಡರು.

ಈ ಕುರಿತು ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ತಹಸೀಲ್ದಾರ್, ಹಾಸ್ಟೆಲ್‌ನ ಪರಿಸ್ಥಿತಿ ಬಗ್ಗೆ ಸಮಗ್ರ ಮಾಹಿತಿ ನೀಡಿ, ಈ ಸಂಬಂಧ ಲಿಖಿತವಾಗಿ ವರದಿ ಸಲ್ಲಿಸುವುದಾಗಿ ಹೇಳಿದರು.

ತಾಲೂಕಿನಲ್ಲಿ ಬಿಸಿಎಂ ಮೆಟ್ರಿಕ್ ಪೂರ್ವ ಹಾಗೂ ನಂತರದ 6 ವಸತಿ ನಿಲಯಗಳಿವೆ. ಕಾಯಂ ವಾರ್ಡನ್ ಇಲ್ಲದೇ ಇರುವುದರಿಂದ ಎಲ್ಲ ನಿರ್ವಹಣೆ ಉಸ್ತುವಾರಿ ವಹಿಸಿಕೊಂಡಿರುವ ವಿಸ್ತರಣಾಧಿಕಾರಿ ಕರ್ತವ್ಯ ಲೋಪ ಕಂಡು ಬರುತ್ತಿದೆ. ತಪ್ಪಿತಸ್ಥ ಅಧಿಕಾರಿ ವಿರುದ್ಧ ಸೂಕ್ಯ ಕ್ರಮ ಕೈಗೊಳ್ಳಲಾಗುವುದು.ಟಿ.ಜಗದೀಶ್, ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net