ಬಿಸಿಎಂ ಹಾಸ್ಟೆಲ್ ನನ್ನ ಬದುಕಿಗೆ ದೇವಾಲಯ: ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್

7
Published on

ಮೈಸೂರು: ಬಿ.ಸಿ.ಎಂ. ಹಾಸ್ಟೆಲ್ ಇಲ್ಲದಿದ್ದರೆ ನಾವು ಉನ್ನತ ಹುದ್ದೆಗೆ ಏರದೆ ಹಳ್ಳಿಗಳಲ್ಲಿ ರೈತರಾಗಿ ಇರಬೇಕಾಗಿತ್ತು ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಹೇಳಿದರು.

ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಕುವೆಂಪುನಗರದ ಬಿಸಿಎಂ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ, ಬಿಸಿಎಂ ಹಾಸ್ಟೆಲ್‌ನಲ್ಲಿ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಹಿತಿ ಎಚ್‌ಎಸ್‌ವಿ ಅವರಿಗೆ ಗೀತ ನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾವೆಲ್ಲ ಈ ಮಟ್ಟಕ್ಕೆ ಬೆಳೆಯಲು ಡಿ.ದೇವರಾಜ ಅರಸು ಕಾರಣರಾಗಿದ್ದಾರೆ. ಬಿಸಿಎಂ ಹಾಸ್ಟೆಲ್ ಇಲ್ಲದಿದ್ದರೆ ನಾವು ಉನ್ನತ ಹುದ್ದೆಗೆ ಏರದೆ ಹಳ್ಳಿಗಳಲ್ಲಿ ರೈತರಾಗಿರಬೇಕಾಗಿತ್ತು. ಸರ್ಕಾರ ನಿಮಗೆ ಎಲ್ಲ ಸವಲತ್ತುಗಳನ್ನು ನೀಡಿದ್ದು, ಸದುಪಯೋಗಮಾಡಿಕೊಂಡು ಚೆನ್ನಾಗಿ ಓದಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ನಾನು ನನ್ನ ಪೂರ್ಣ ಶಿಕ್ಷಣವನ್ನು ಬಿಸಿಎಂ ಹಾಸ್ಟೆಲ್‌ನಲ್ಲಿಯೇ ಓದಿ ಇಂದು ಜಿಲ್ಲಾಧಿಕಾರಿಯಾಗಿದ್ದೇನೆ. ಆದ್ದರಿಂದ ಬಿಸಿಎಂ ಹಾಸ್ಟೆಲ್ ನನ್ನ ಬದುಕಿಗೆ ದೇವಾಲಯವಿದ್ದಂತೆ. ಆದ್ದರಿಂದ ಎಲ್ಲರೂ ಶ್ರದ್ಧೆಯಿಂದ ಪರಿಶ್ರಮಪಟ್ಟು ವ್ಯಾಸಂಗ ಮಾಡಬೇಕು. ನೀವು ಸಮಾಜದಿಂದ ಸಾಕಷ್ಟು ಪಡೆದಿದ್ದೀರಿ. ನಿಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕು. ವಿದ್ಯಾರ್ಥಿನಿಲಯಕ್ಕೆ ಒಳ್ಳೆಯ ಹೆಸರು ತರಬೇಕು. ಬಿಸಿಎಂ ಹಾಸ್ಟೆಲ್‌ನ ಅನ್ನದ ಋಣವನ್ನು ಸಾಯೋವರೆಗೂ ತೀರಿಸಲು ಸಾಧ್ಯವಿಲ್ಲ. ವಾರ್ಡನ್‌ಗಳು ಮತ್ತು ಅಡುಗೆಯವರನ್ನು ಪ್ರೀತಿಸಬೇಕು. ಪರಿಸರದ ಬಗ್ಗೆ ಕಾಳಜಿ ಇರಬೇಕು. ಪರಿಸರ ಪ್ರೇಮಿ ಪ್ರಜ್ಞಾವಂತ ಪ್ರಜೆಗಳಾಗಿ ನಿಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.

ಮೈಸೂರು ಜಿಲ್ಲಾ ಬಿಸಿಎಂ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಕರ್ನಾಟಕ ರಾಜ್ಯ ಹಾಲು ಮಹಾಮಂಡಲದ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಮಾತನಾಡಿ, ಪ್ರತಿಭೆ ಯಾರ ಸ್ವತ್ತು ಅಲ್ಲ. ಬಿಸಿಎಂ ಹಾಸ್ಟೆಲ್‌ನಲ್ಲಿ ಓದಿದವರು ಎಲ್ಲ ರಂಗಗಳಲ್ಲಿಯೂ ಕೆಲಸ ಮಾಡಿ ಹೆಸರುಗಳಿಸಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿಗಳೆಲ್ಲ ಕಷ್ಟಪಟ್ಟು ಓದಿ ಅಧಿಕಾರಿಗಳಾಗಬೇಕು. ಆದ್ದರಿಂದ ನೀವು ಸಹ ಐಎಎಸ್, ಕೆಎಎಸ್, ವೈದ್ಯರು, ಇಂಜಿನಿಯರ್‌ಗಳು ಆಗಬಹುದು. ಈ ಬಾರಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ 38 ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಿದ್ದೇವೆ. ಪಿಯುಸಿಯಲ್ಲಿ ಶೇ.98 ಪಡೆದ 5 ಜನ ವಿದ್ಯಾರ್ಥಿಗಳಿಗೆ ಜೆಇಇ, ನೀಟ್‌ಗೆ ಸಂಘದಿಂದ ತರಬೇತಿ ಕೊಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ದಡದ ಹಳ್ಳಿಯ ಅಂಗವಿಕಲನಿಗೆ ಎಲೆಕ್ಟ್ರಿಕ್ ಟ್ರೈಸಿಕಲ್ ನೀಡಲಾಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ಹುಣಸೂರು ತಹಸೀಲ್ದಾರ್ ಮಂಜುನಾಥ್, ಬಿಸಿಎಂ ಜಿಲ್ಲಾ ಅಧಿಕಾರಿ ರಾಘವೇಂದ್ರ, ಕೆಎಎಸ್ ಹಿರಿಯ ಅಧಿಕಾರಿ ಚೈತ್ರಾ ಶಿವಸ್ವಾಮಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ್, ಕಾರ್ಯದರ್ಶಿ ಬಿ.ಪಿ.ರಾಜೇಶ್, ಜಂಟಿ ಕಾರ್ಯದರ್ಶಿ ರಮೇಶ್‌ಗೌಡ, ಖಜಾಂಚಿ ಕೆ.ರುಕ್ಮಾಂಗದ, ತಾಲೂಕು ಕಲ್ಯಾಣಾಧಿಕಾರಿಗಳಾದ ಚಂದ್ರಕಲಾ, ಡಾ.ಜಗದೀಶ್, ಡಾ.ರವಿಕುಮಾರ್, ನಂದೀಶ, ಚೌಡೇಗೌಡ, ಮಧುಸೂದನ್, ತಮ್ಮಯ್ಯ, ಅಹಿಂದ ಮುಖಂಡರಾದ ಜವರಪ್ಪ, ಎಂ.ಟಿ. ರವಿಕುಮಾರ್, ನಿಲಯಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net