ಸತತ ಪ್ರಯತ್ನವೇ ಸಾಧನೆಗೆ ರಹದಾರಿ, ಸ್ಪರ್ಧಾಕಾಂಕ್ಷಿಗಳಿಗೆ ಬಿಸಿಎಂ ಉಪ ನಿರ್ದೇಶಕ ಆಶಾಪುರ ಕಿವಿಮಾತು

kalpavruksha
ವಿಜಯಪುರದ ಕಲ್ಪವೃಕ್ಷ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತ ತಂಡಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಈರಣ್ಣ ಆಶಾಪುರ ಬಹುಮಾನ ವಿತರಿಸಿದರು. ಪರಶುರಾಮ ಭಾಸಗಿ, ಅಂಬಣ್ಣ ಡೊಂಗ್ರೋಜಿ ಮತ್ತಿತರರಿದ್ದಾರೆ.
Published on

ವಿಜಯಪುರ: ಸ್ಪಷ್ಟವಾದ ಗುರಿ, ದೃಢವಾದ ಸಂಕಲ್ಪ, ಸತತ ಪ್ರಯತ್ನ ಹಾಗೂ ಕಠಿಣ ಪರಿಶ್ರಮದ ಮೂಲಕ ಮಾತ್ರ ಸಾಧನೆ ಸಾಧ್ಯ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಈರಣ್ಣ ಆಶಾಪುರ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಗಾಂಧಿ ವೃತ್ತದ ಬಳಿ ಇರುವ ಕಲ್ಪವೃಕ್ಷ ಗ್ರಂಥಾಲಯದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಯಾಗುತ್ತಿರುವ ವಿದ್ಯಾರ್ಥಿಗಳೊಂದಿಗೆ ಮಂಗಳವಾರ ಸಂಜೆ ಸಂವಾದ ನಡೆಸಿದ ಅವರು, ಸಾಧನೆ ಎಂಬುದು ಸುಲಭವಾಗಿ ಧಕ್ಕುವಂತಹುದಲ್ಲ. ಅದೊಂದು ತಪಸ್ಸು ಎಂದರು.

ಯಾವುದೇ ಕ್ಷೇತ್ರದಲ್ಲಿ ಸಾಧನೆಗೈಯ್ಯಲು ಸಾಕಷ್ಟು ಪೂರ್ವ ತಯಾರಿ ಅಗತ್ಯ. ಸಿದ್ಧತೆಯಿಲ್ಲದೇ ಯುದ್ಧಕ್ಕೆ ಅಣಿಯಾಗುವುದು ಅವಮಾನಕ್ಕೆ ಎಡೆಮಾಡಿಕೊಡುತ್ತದೆ. ಮಾತ್ರವಲ್ಲ, ಸೋಲು ಎದುರಿಸಬೇಕಾಗುತ್ತದೆ. ಹೀಗಾಗಿ ಯಾವುದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಅದಕ್ಕಾಗಿ ಸೂಕ್ತ ಮಾರ್ಗದರ್ಶನ ಪಡೆದು ತರಬೇತಿ ನಡೆಸಬೇಕು. ಅದಕ್ಕಾಗಿ ಪೂರಕ ವಾತಾವರಣ ನಿರ್ಮಿಸಿಕೊಳ್ಳಬೇಕು. ಸಕಾರಾತ್ಮಕ ಧೋರಣೆಯೊಂದಿಗೆ ಪ್ರಯತ್ನ ಮಾಡಬೇಕು. ಸಾಧನೆ ಹಾದಿಯಲ್ಲಿ ಕಷ್ಟಗಳು, ನೋವುಗಳು, ಅವಮಾನಗಳು ಸಹಜ. ಎದೆಗುಂದದೆ ಮುನ್ನಡೆದಾಗ ಮಾತ್ರ ಗುರಿ ತಲುಪಲು ಸಾಧ್ಯ ಎಂದರು.

ವಿಜಯವಾಣಿ ಜಿಲ್ಲಾ ವರದಿಗಾರ ಪರಶುರಾಮ ಭಾಸಗಿ ಮಾತನಾಡಿ, ಸ್ಪರ್ಧಾಕಾಂಕ್ಷಿಗಳಿಗಾಗಿಯೇ ವಿಜಯವಾಣಿ ಪತ್ರಿಕೆ ಕೇವಲ 1 ರೂಪಾಯಿಗೆ ವಿದ್ಯಾರ್ಥಿ ಮಿತ್ರ ಸಂಚಿಕೆಯನ್ನು ನೀಡುತ್ತಿದೆ. ಪೊಲೀಸ್, ಬ್ಯಾಂಕಿಂಗ್ ಪರೀಕ್ಷೆ, ಎಸ್‌ಡಿಸಿ, ಎಫ್‌ಡಿಸಿ ಸೇರಿದಂತೆ ಐಎಎಸ್, ಕೆಎಎಸ್ ಮುಂತಾದ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿ ಮಿತ್ರ ಸಹಕಾರಿಯಾಗಿದೆ. ಬಹುತೇಕ ಸ್ಪರ್ಧಾಕಾಂಕ್ಷಿಗಳ ಮನಗೆದ್ದಿರುವ ವಿದ್ಯಾರ್ಥಿ ಮಿತ್ರವನ್ನು ಗ್ರಂಥಾಲಯದ ವಿದ್ಯಾರ್ಥಿಗಳೆಲ್ಲರೂ ತಮ್ಮ ಮಿತ್ರವನ್ನಾಗಿಸಿಕೊಳ್ಳಬೇಕೆಂದರು.

ಸಂಸ್ಥೆ ಮುಖ್ಯಸ್ಥ ಅಂಬಣ್ಣ ಡೊಂಗ್ರೋಜಿ ನಿರ್ವಹಿಸಿದರು. ರಮೇಶ ಹಿರೇಕುರುಬರ ಪ್ರಾರ್ಥಿಸಿದರು. ಷಣ್ಮುಖ ದತ್ತಾಬಾಗ ನಿರೂಪಿಸಿದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net