

- ಸಂದೀಪ್ ಸಾಲ್ಯಾನ್ ಬಂಟ್ವಾಳ
ಬಿ.ಸಿ.ರೋಡು ನಗರ ಸುಂದರೀಕರಣ ಯೋಜನೆಗೆ ಸೋಮವಾರ ಚಾಲನೆ ಸಿಕ್ಕಿದೆ. ಮೇಲ್ಸೆತುವೆಯ ಅಡಿಭಾಗದಲ್ಲಿ ಜೆಸಿಬಿ ಮೂಲಕ ಮಣ್ಣು ಸಮತಟ್ಟುಗೊಳಿಸುವ ಕಾರ್ಯ ನಡೆದಿದ್ದು, ಶೌಚಗೃಹ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಅವ್ಯವಸ್ಥೆಯ ಆಗರವಾಗಿದ್ದ ಬಂಟ್ವಾಳ ತಾಲೂಕು ಕೇಂದ್ರ ಸ್ಥಾನ ಬಿ.ಸಿ.ರೋಡನ್ನು ಸುಂದರಗೊಳಿಸಬೇಕೆನ್ನುವುದು ಶಾಸಕ ರಾಜೇಶ್ ನಾಕ್ ಅವರ ಬಹುದಿನಗಳ ಕನಸು. ಉತ್ತಮ ವಿನ್ಯಾಸದ ನಗರವನ್ನಾಗಿ ರೂಪಿಸಬೇಕೆನ್ನುವ ಉದ್ದೇಶದಿಂದ ಆರಂಭಗೊಂಡಿರುವ ಯೋಜನೆ ಇದು.
ಅಕ್ಟೋಬರ್ 21ರಂದು ಕಂದಾಯ ಸಚಿವ ಆರ್.ಅಶೋಕ್ ಈ ಮಹತ್ವದ ಯೋಜನೆಗೆ ಬಿ.ಸಿ.ರೋಡಿನಲ್ಲಿ ಶಿಲಾನ್ಯಾಸ ನೆರೆವೇರಿಸಿದ್ದರು. ಬಳಿಕ ಈ ಬಗ್ಗೆ ಶಾಸಕರು ಹಾಗೂ ಸಂಸದರ ನೇತೃತ್ವದಲ್ಲಿ ಸಂಬಂಧಪಟ್ಟ ಇಲಾಖಾಧಿಕಾರಿಗಳೊಂದಿಗೆ ಸಭೆಗಳು ನಡೆದು ಶೀಘ್ರ ಅನುಷ್ಠಾನಕ್ಕಾಗಿ ಪ್ರಯತ್ನ ನಡೆಸಲಾಗಿತ್ತು. ಆದರೆ ಆ ಬಳಿಕ ರಾಷ್ಟ್ರೀಯ ಹೆದ್ದಾರಿ ಸಹಿತ ವಿವಿಧ ಇಲಾಖೆಗಳ ಅನುಮತಿ ಪಡೆಯಲು ಹಾಗೂ ಕರೊನಾ ಲಾಕ್‌ಡೌನ್‌ನಿಂದಾಗಿ ಯೋಜನೆ ಅನುಷ್ಠಾನಕ್ಕಾಗಿ ಸ್ವಲ್ಪ ಹೆಚ್ಚಿನ ಕಾಲಾವಕಾಶ ಬೇಕಾಯಿತು.
ಪೇಂಟಿಂಗ್, ಗಾರ್ಡನ್; ಮೊದಲ ಹಂತದ ಕಾಮಗಾರಿಯಾಗಿ ಶೌಚಗೃಹ ನಿರ್ಮಾಣ ಆರಂಭಗೊಂಡಿದೆ. ಪುರುಷರು ಹಾಗೂ ಮಹಿಳೆಯರಿಗೆ ತಲಾ ಎರಡರಂತೆ ಒಟ್ಟು 4 ಶೌಚಗೃಹ ನಿರ್ಮಾಣಗೊಳ್ಳಲಿದೆ. ಪುರುಷರಿಗೆ 6 ಹಾಗೂ ಮಹಿಳೆಯರಿಗೆ 4 ಸೇರಿದಂತೆ ಒಟ್ಟು 10 ಮೂತ್ರದೊಡ್ಡಿ ನಿರ್ಮಾಣಗೊಳ್ಳಲಿದೆ. ಅಂಗವಿಕಲರಿಗೂ ಅನುಕೂಲವಾಗುವ 1 ಶೌಚಗೃಹ ಇರಲಿದೆ. ಬಳಿಕ ಮೇಲ್ಸೆತುವೆಯ ಅಡಿ ಭಾಗದಲ್ಲಿ ಇಂಟರ್‌ಲಾಕ್ ಅಳವಡಿಸುವ ಕೆಲಸ, ಪೇಂಟಿಂಗ್, ಗಾರ್ಡನ್, ಪಾರ್ಕಿಂಗ್ ಕಾಮಗಾರಿಗಳು ಜತೆಯಾಗಿ ನಡೆಯಲಿದೆ.
ಕಾಂಕ್ರೀಟ್ ರಸ್ತೆ: ಮುಖ್ಯರಸ್ತೆಯಿಂದ ಕೈಕುಂಜೆ ಸಂಪರ್ಕ ರಸ್ತೆಯ ಹಳೇ ರಂಗಮಂದಿರದವರೆಗಿನ ರಸ್ತೆಯನ್ನು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ರಸ್ತೆ ವಿಭಜಕ, ಬೀದಿದೀಪಗಳಿರುವ ಆಕರ್ಷಕ ರಸ್ತೆಯಾಗಿ ಮೂಡಿಬರಲಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ವೃತ್ತ ನಿರ್ಮಾಣಗೊಳ್ಳಲಿದ್ದು, ಈ ಬಗ್ಗೆ ಕೆಎಸ್‌ಆರ್‌ಟಿಸಿ ಮೂಲಕ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅನುಮತಿ ಸಿಕ್ಕ ಕೂಡಲೇ ವೃತ್ತ ನಿರ್ಮಾಣದ ಕಾರ್ಯ ಆರಂಭಗೊಳ್ಳಲಿದೆ. ಮುಂದಿನ ಹಂತಲ್ಲಿ ಬಸ್ ಬೇ, ಸಿಸಿ ಕ್ಯಾಮರಾ ಅಳವಡಿಕೆ, ದ್ವಿಚಕ್ರ ವಾಹನಗಳಿಗ್ ಪಾರ್ಕಿಂಗ್, ಸರ್ವೀಸ್ ರಸ್ತೆಯಲ್ಲಿ ಪುಟ್‌ಪಾತ್ ಮೊದಲಾದ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.
ಬಿ.ಸಿ.ರೋಡು ನಗರ ಸುಂದರೀಕರಣ ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮೊದಲ ಕಾರ್ನರ್‌ನಲ್ಲಿ ಶೌಚಗೃಹ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಎನ್.ಎಚ್. ಹಾಗೂ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆದು ಕೆಲಸ ನಿರ್ವಹಿಸಬೇಕಾಗಿರುವುದರಿಂದ ಸ್ವಲ್ಪ ಕಾಲವಕಾಶ ಬೇಕಾಯಿತು.
- ರಾಜೇಶ್ ನಾಕ್, ಶಾಸಕರು, ಬಂಟ್ವಾಳ ವಿಧಾನಸಭಾ ಕ್ಷೇತ್ರ