

ತುಮಕೂರು : ಬಿಜೆಪಿ ವರಿಷ್ಠರು ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇನೆ. ಸಂಘಟನೆ ಹಾಗೂ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವುದನ್ನು ಪಕ್ಷ ಕಲಿಸಿದೆ ಎಂದು ನೂತನ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ನಗರದ ಸಿದ್ಧಗಂಗಾ ಮಠಕ್ಕೆ ಗುರುವಾರ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದ ನಂತರ, ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸಚಿವ ಸ್ಥಾನ ನಿರೀಕ್ಷೆ ಮಾಡಿರಲಿಲ್ಲ. ಹಾಗಾಗಿ ಇಂತಹುದೇ ಖಾತೆ ಬೇಕು ಎಂಬ ಅಪೇಕ್ಷೆಯನ್ನೂ ಹೊಂದಿಲ್ಲ. ವರಿಷ್ಠರು, ಮುಖ್ಯಮಂತ್ರಿ ನನ್ನ ಮೇಲೆ ವಿಶ್ವಾಸ ಇಟ್ಟು ಯಾವುದೇ ಖಾತೆ ನೀಡಿದರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ಪರಿಶ್ರಮದಿಂದ ಬೆಳೆದಿರುವ ಪಕ್ಷದ ಕಾರ್ಯಕರ್ತನಿಗೆ ಈಗ ಹೊಸ ಜವಾಬ್ದಾರಿ ಕೊಟ್ಟಿದ್ದಾರೆ. ಪಕ್ಷದ ವರಿಷ್ಠರು, ಮುಖ್ಯಮಂತ್ರಿ ಹಾಗೂ ವಾಜಿ ಮುಖ್ಯಮಂತ್ರಿಗಳ ಅಪೇಕ್ಷೆ ಪೂರ್ಣಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಬಿಜೆಪಿಯಲ್ಲಿ ಯಾವುದೇ ಜಾತಿ ಕೋಟಾ ಇಲ್ಲ. ಮಾಧ್ಯಮದವರು ಅದಕ್ಕೆ ಹೊಸ ಬಣ್ಣ ಹಚ್ಚುವ ಪ್ರಯತ್ನ ವಾಡುತ್ತಿದ್ದಾರೆ ಎಂದ ಅವರು, ಸುರೇಶ್‌ಕುವಾರ್ ಜಾಗದಲ್ಲಿ ನನ್ನ ಆಯ್ಕೆ ನಡೆದಿದೆ ಎಂಬುದು ಮಾಧ್ಯಮಗಳ ಸೃಷ್ಟಿ. ಅವರಷ್ಟು ಅನುಭವ, ಸಾಮರ್ಥ್ಯ, ಹೋರಾಟ ಶಕ್ತಿ ನನಗಿಲ್ಲ. ನನ್ನನ್ನು ಸಂಪುಟಕ್ಕೆ ಸೇರ್ಪಡೆ ವಾಡಿಕೊಳ್ಳಲು ಅವರನ್ನು ಕೈಬಿಟ್ಟಿದ್ದಾರೆ ಎಂಬುದು ಸರಿಯಲ್ಲ ಎಂದರು.
ಕರೊನಾ 3ನೇ ಅಲೆ ಬರಲಿದೆ ಎಂಬ ಬಗ್ಗೆ ತಜ್ಞರು ನೀಡಿರುವ ವರದಿ ಹಿನ್ನೆಲೆಯಲ್ಲಿ ಕೋವಿಡ್ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಮುಖ್ಯಮಂತ್ರಿಗಳು ನನಗೆ ಯಾದಗಿರಿ ಜಿಲ್ಲೆಯ ಹೊಣೆ ನೀಡಿದ್ದಾರೆ. ನಾಳೆ ಅಥವಾ ನಾಡಿದ್ದು ಅಲ್ಲಿನ ಶಾಸಕರು, ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ಪರಿಸ್ಥಿತಿ, ತಯಾರಿ ಬಗ್ಗೆ ಚರ್ಚಿಸುತ್ತೇನೆ ಎಂದರು. ಯಾವ ಜಿಲ್ಲೆಯ ಉಸ್ತುವಾರಿ ಬಯಸುತ್ತೀರಾ ಎಂಬ ಪ್ರಶ್ನೆಗೆ, ಇನ್ನು ಆ ಬಗ್ಗೆ ಚರ್ಚೆಯಾಗಿಲ್ಲ ಎಂದರು.
ಮೇಯರ್ ಬಿ.ಜಿ.ಕೃಷ್ಣಪ್ಪ, ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಹೆಬ್ಬಾಕ, ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಮತ್ತಿತರರು ಇದ್ದರು.