ಬಿಬಿಎಂಪಿಯ ಹೊಸ ಜಾಹೀರಾತು ನೀತಿ ಕರಡು ಪ್ರಕಟ: ಆಕ್ಷೇಪಣೆ, ಸಲಹೆ ಸಲ್ಲಿಕೆಗೆ ಕಾಲಾವಕಾಶ

BBMP
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ "ಜಾಹೀರಾತು ನೀತಿ' ಸಂಬಂಧಪಟ್ಟಂತೆ ಸರ್ಕಾರ ಶನಿವಾರ ಕರಡು ಪ್ರಕಟಿಸಿದೆ. ಕರಡು ಸಂಬಂಧಪಟ್ಟಂತೆ 30 ದಿನದೊಳಗೆ ಆಕ್ಷೇಪಣೆ, ಸಲಹೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.

ಯಾವುದೇ ಸ್ಥಳದಲ್ಲಿ ಅಥವಾ ಸಾರ್ವಜನಿಕರಿಗೆ ಕಾಣುವ ಸ್ಥಳದಲ್ಲಿ ಪ್ರದರ್ಶಿಸಲಾಗುವ ಪೋಸ್ಟರ್​, ಪ್ರಕಟಣಾ ಹಲಗೆಗಳು, ಫಲಕ, ಬ್ಯಾನರ್​, ತಾತ್ಕಾಲಿಕ ಕಾಮಾನುಗಳು, ನಾಮಫಲಕ, ನಿರ್ದೇಶನಾ ಹಲಗೆಗಳು, ಕರಪತ್ರ, ಬಾವುಟ ಸಂಬಂಧಿಸಿ ಕರಡು ತಯಾರಿಸಲಾಗಿದೆ. ಆ ಪ್ರಕಾರ, ಪ್ರತಿ ನೂರು ಮೀಟರ್​ ಉದ್ದದ ರಸ್ತೆಯ ಒಂದು ಬದಿಯ ಮೇಲೆ ಎಲ್ಲ ಜಾಹೀರಾತುಗಳ ಒಟ್ಟು ಸಮತಲ ಉದ್ದ 40 ಅಡಿ ಮೀರುವಂತಿಲ್ಲ. ಪ್ರತಿ 1 ಲಕ್ಷ ಚದರ ಅಡಿ ವರ್ತಲ ಪ್ರದೇಶದಲ್ಲಿ ಎಲ್ಲ ಜಾಹೀರಾತುಗಳ ಒಟ್ಟು ಸಮತಲ ಉದ್ದ 60 ಅಡಿ ಮೀರತಕ್ಕದಲ್ಲ ಎಂದು ಕರಡಿನಲ್ಲಿ ಉಲ್ಲೇಖಿಸಲಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತರ ಅನುಮೋದನೆ ಪಡೆದು ಕಾಲಕಾಲಕ್ಕೆ ಹೊರಡಿಸಬಹುದಾದ, ಮಾರ್ಪಡಿಸಬಹುದಾದ ಅಧಿಸೂಚನೆ ಮುಖೇನ ರಸ್ತೆ, ವೃತ್ತ ಹಾಗೂ ಪ್ರದೇಶಗಳನ್ನು ಸೂಕ್ತ ಸ್ಟ್ರೆಚ್​ಗಳಾಗಿ ವಿಂಗಡಿಸುವ ಮೂಲಕ ರಸ್ತೆ, ವೃತ್ತ, ಪ್ರದೇಶಗಳಲ್ಲಿ ಪಾವತಿ ಜಾಹೀರಾತು ಹಾಕಲು ಅನುಮತಿ ನೀಡಲಾಗಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿನ ಪಾರದರ್ಶಕತೆ (ಕೆಟಿಪಿಪಿ) ನಿಯಮದನ್ವಯ ನಡೆಸಲಾದ ಟೆಂಡರ್​ನಲ್ಲಿ ಕಡಿಮೆ ಮೊತ್ತ ಬಿಡ್​ ಮಾಡಿ ಎಲ್​-1 ಪಡೆದ ಕಂಪನಿಗಳಿಗೆ ಜಾಹೀರಾತು ಹಾಕುವ ಪರವಾನಗಿ ಹಕ್ಕು ನೀಡತಕ್ಕದ್ದು. ಜಾಹೀರಾತು ತಾಣಗಳು, ಆವರಣಗಳು, ಸ್ಥಳಗಳು, ಸಾರ್ವಜನಿಕರ ವಲಯದ ಘಟಕಗಳು, ಬಿಬಿಎಂಪಿ ಅಥವಾ ಸರ್ಕಾರಿ ಏಜೆನ್ಸಿ ಒಡೆತನದ ಜಾಗದಲ್ಲಿ ಜಾಹೀರಾತು ಪ್ರದರ್ಶಿಸಲು ಅವಕಾಶ ನೀಡಲಾಗಿದೆ.

ಅನಧಿಕೃತ ಜಾಹೀರಾತು ತೆಗೆಯುವ ಅವಕಾಶ:

ಪರವಾನಗಿ ಪಡೆದ ಜಾಹೀರಾತುದಾರರಿಗೆ ನಿಗದಿಪಡಿಸಿದ ಜಾಗದಲ್ಲಿ ಜಾಹೀರಾತು ಲಕ ಅಳವಡಿಸಬೇಕು. ಯಾವುದೇ ಪ್ರದೇಶಗಳಲ್ಲಿ ಅನಧಿಕೃತ ಜಾಹೀರಾತು ಲಕ ಬರದಂತೆ ನೋಡಿಕೊಳ್ಳುವ ಹೊಣೆಯನ್ನು ವಲಯ ಆಯುಕ್ತರಿಗೆ ನೀಡಲಾಗಿದೆ. ಜಾಹೀರಾತು ಶುಲ್ಕ, ಬಾಕಿ ಶುಲ್ಕ ವಸೂಲಿ ಮಾಡತಕ್ಕದ್ದು. ಬಿಎಂಆರ್​ಸಿಎಲ್​, ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಟಗಳಲ್ಲಿನ ಸ್ವತ್ತುಗಳಲ್ಲಿ ಜಾಹೀರಾತು ಅಳವಡಿಸಲು ಕಾರ್ಯವಿಧಾನ ಪ್ರಕಾರವೇ ನಿರ್ಧರಿಸಬೇಕು. ಬಿಬಿಎಂಪಿಯ ರಸ್ತೆಗಳಲ್ಲಿರುವ ಬಿಎಂಆರ್​ಸಿಎಲ್​ ಸ್ವತ್ತುಗಳಿಂದ ಬರುವ ಜಾಹೀರಾತು ಆದಾಯವನ್ನು ಬಿಬಿಎಂಪಿ ಮತ್ತು ಬಿಎಂಆರ್​ಸಿಎಲ್​ ನಡುವೆ ಸಮಾನವಾಗಿ ಹಂಚಿಕೊಳ್ಳತಕ್ಕದ್ದು ಎಂದು ಕರಡುನಲ್ಲಿ ಉಲ್ಲೇಖಿಸಲಾಗಿದೆ.

ಶೇ.18 ದಂಡ ಶುಲ್ಕ

ಒಂದು ತಿಂಗಳೊಳಗೆ ಜಾಹೀರಾತು ಶುಲ್ಕವನ್ನು ಎಜೆನ್ಸಿಗಳು ಬಿಬಿಎಂಪಿಗೆ ಪಾವತಿಸಬೇಕು. ಅಧಿಕೃತ ಜಾಹೀರಾತು ಬಾಕಿ ಪಾವತಿಸುವಲ್ಲಿ ವಿಳಂಬವಾದರೆ ಶೇ.18 ಬಡ್ಡಿ ಶುಲ್ಕ ವಿಧಿಸತಕ್ಕದ್ದು. ಅಲ್ಲದೆ, ಅವರ ವಿರುದ್ಧ ಕ್ರಿಮಿನಲ್​ ಕ್ರಮ ಕೈಗೊಂಡು ಬ್ಯಾಂಕ್​ ಖಾತೆ ಜಪ್ತಿ ಮಾಡಬಹುದು. ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಕರಡುನಲ್ಲಿ ತಿಳಿಸಲಾಗಿದೆ. "ಜಾಹೀರಾತು ನೀತಿ' ಸಂಬಂಧ ಆಕ್ಷೇಪಣೆ, ಸಲಹೆಗಳಿದ್ದಲ್ಲಿ ಮುಖ್ಯ ಆಯುಕ್ತರು, ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ, ನರಸಿಂಹರಾಜ ಚೌಕ, ಬೆಂಗಳೂರು-02 ಇಲ್ಲಿನ ವಿಳಾಸಕ್ಕೆ ಸಲ್ಲಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net