ಅಪಾಯಕಾರಿ ಮರಗಳ ತೆರವಿಗೆ ಬಿಬಿಎಂಪಿ ನಿರ್ಲಕ್ಷ್ಯ

trees
Published on

ಬೆಂಗಳೂರು: ನಗರದಲ್ಲಿ ಮಳೆಗಾಲದ ವೇಳೆ ಸಂಭವಿಸಬಹುದಾದ ಸಮಸ್ಯೆಯನ್ನು ಮೊರಲೇ ಅರಿತು ಅಪಾಯಕಾರಿ ಸ್ಥಿತಿಯಲ್ಲಿರುವ ಮರ, ಕೊಂಬೆಗಳನ್ನು ತೆರವುಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಸೂಚನೆ ನೀಡಿದ್ದರೂ, ಅರಣ್ಯ ವಿಭಾಗ ಮಾತ್ರ ಎಂದಿನಂತೆ ನಿರ್ಲಕ್ಷ್ಯ ವಹಿಸಿದೆ. ಇದರಿಂದಾಗಿ ಪಾಲಿಕೆ ವ್ಯಾಪ್ತಿಯ ಹಲವೆಡೆ ಮರ, ಕೊಂಬೆಗಳು ಜನ ಹಾಗೂ ವಾಹನಗಳ ಮೇಲೆ ಬಿದ್ದು ಪ್ರಾಣಕ್ಕೆ ಸಂಚಕಾರ ತೊಂದೊಡ್ಡು ಪ್ರಕರಣಗಳು ಹೆಚ್ಚುತ್ತಿವೆ.

ರಾಜಧಾನಿಯಲ್ಲಿ ಪ್ರತೀವರ್ಷವೂ ಮಳೆಗಾಲದ ವೇಳೆ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಉರುಳಿ 2-3 ಮಂದಿ ಸಾವನ್ನಪ್ಪುತ್ತಿದ್ದಾರೆ. ಜತೆಗೆ ವಾಹನಗಳ ಮೇಲೆ ಮರಗಳು ಉರುಳಿ ಹತ್ತಾರು ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಅವಘಡಗಳನ್ನು ತಪ್ಪಿಸಲು ಅರಣ್ಯ ವಿಭಾಗ ಅಪಾಯಕಾರಿ ಮರ/ಕೊಂಬೆಗಳನ್ನು ಗುರುತಿಸಿ ತೆರವು ಮಾಡಬಹುದಾಗಿದೆ. ಆದರೆ, ಸಿಬ್ಬಂದಿ ಕೊರತೆ, ಶಿಥಿಲ ಮರಗಳನ್ನು ಗುರುತಿಸಿ ತೆರವು ಮಾಡದಿರುವುದು ಸಮಸ್ಯೆಯನ್ನು ಜೀವಂತ ಇರಿಸಿದೆ.

ಇತ್ತೀಚಿಗೆ ಸಿಎ ಹಾಗೂ ಡಿಸಿಎಂ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ವೇಳೆ ಅಪಾಯಕಾರಿ ಮರ/ಕೊಂಬೆಗಳನ್ನು ತೆರವು ಮಾಡುವ ಕೆಲಸವನ್ನು ನಿರಂತರವಾಗಿ ಕೈಗೊಳ್ಳಲು ಪಾಲಿಕೆಗೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಮುಖ್ಯ ಆಯುಕ್ತರು ಪ್ರತ್ಯೇಕ ಸಭೆಗಳನ್ನು ನಡೆಸಿ ಎಲ್ಲ ವಲಯಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದರು. ಇದರ ಹೊರತಾಗಿಯೂ ಅರಣ್ಯ ವಿಭಾಗ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸದ ಕಾರಣ ಜನರು ಬವಣೆಗೆ ಒಳಗಾಗುವ ಸ್ಥಿತಿ ನಿರ್ಮಾಣವಾಗಿದೆ.

ದಕ್ಷಿಣ, ಪಶ್ಚಿಮ ವಲಯದಲ್ಲೇ ಹೆಚ್ಚು ಸಮಸ್ಯೆ:

ಬಿಬಿಎಂಪಿಯ ಎಂಟು ವಲಯಗಳ ಪೈಕಿ ದಕ್ಷಿಣ ಹಾಗೂ ಪಶ್ಚಿಮ ವಲಯದಲ್ಲಿ ಹೆಚ್ಚಿನ ಮರಗಳಿವೆ. ಅಲ್ಲದೆ ಬೆಂಗಳೂರಿನ ಹಳೆಯ ಪ್ರದೇಶಗಳು ಈ ವಲಯಗಳಲ್ಲೇ ಬರುತ್ತಿದ್ದು, ಉದ್ಯಾನ ಹಾಗೂ ಮರ-ಗಿಡಗಳ ಸಂಖ್ಯೆ ಸಾಕಷ್ಟಿವೆ. ಇವುಗಳಲ್ಲಿ ದಶಕಗಳಷ್ಟು ವಯಸ್ಸಾದ ವೃಕ್ಷಗಳೂ ಉಂಟು. ಹಾಗಾಗಿ ಹಳೆಯ ಮರಗಳು ವಿವಿಧ ಕಾರಣಗಳಿಂದ ಅಪಾಯಕಾರಿಯಾಗಿ ಪರಿಣಮಿಸಿದೆ. ರಸ್ತೆ ಬದಿ ನೆಟ್ಟ ಮರಗಳು ಸರಿಯಾಗಿ ಬೆಳವಣಿಗೆ ಕಾಣದೆ ಅಡ್ಡಾದಿಡ್ಡಿಯಾಗಿ ಬೆಳೆದು ಕಟ್ಟಡಗಳ ಮೇಲೆ ಚಾಚಿಕೊಂಡು ಸಮಸ್ಯೆ ಸೃಷ್ಟಿಯಾಗಿದೆ. ವಿದೇಶಿ ಪ್ರಭೇದ ಮರಗಳು ಟೊಳ್ಳಾಗಿದ್ದು, ಇವುಗಳನ್ನು ಪತ್ತೆ ಮಾಡಿ ತೆರವುಗೊಳಿಸದಿರುವುದು ಮಳೆಗಾಲದಲ್ಲಿ ಸಣ್ಣ ಗಾಳಿಗೆ ನೆಲಕ್ಕುರುಳುವಂತಾಗಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಮರ ತೆರವಿಗೆ ನಿಯಮ ಅಡ್ಡಿ:

ರಾಜಧಾನಿಯಲ್ಲಿ ಹಸಿರಿನ ಪ್ರಮಾಣ ಕಡಿಮೆ ಇರುವ ಕಾರಣ ಮರಗಳನ್ನು ಬೇಕಾಬಿಟ್ಟಿಯಾಗಿ ತೆರವು ಮಾಡಲು ಅರಣ್ಯ ವಿಭಾಗ ಅನುಮತಿ ನೀಡುತ್ತಿಲ್ಲ. ಅಂತಹ ಪ್ರಕರಣಗಳಿದ್ದಲ್ಲಿ ಸ್ಥಳಪರಿಶೀಲನೆ ನಡೆಸಿದ ಬಳಿಕವೇ ತೆರವು ಮಾಡಲಾಗುತ್ತದೆ. ಕೆಲವೊಮ್ಮೆ ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಆಕ್ಷೇಪಿಸುವುದುಂಟು. ಹೈಕೋರ್ಟ್ ಕೂಡ ಅನಗತ್ಯವಾಗಿ ಮರ ತೆರವು ಮಾಡದಂತೆ ತಾಕೀತು ಮಾಡಿದ್ದರೂ, ಅಪಾಯಕಾರಿ ಆಗಿರುವುದನ್ನು ದೃಢಪಡಿಸಿಕೊಂಡೇ ತೆರವುಗೊಳಿಸಬೇಕು. ಜತೆಗೆ ಒಂದು ಮರ ಕತ್ತರಿಸಿದರೆ ನಾಲ್ಕು ಸಸಿಗಳನ್ನು ನೆಡವುದನ್ನು ಕಡ್ಡಾಯಗೊಳಿಸಲಾಗಿದೆ.

ಇನ್ನೊಂದೆಡೆ, ಮನೆಗಳ ಮುಂದೆ ನೆಟ್ಟಿರುವ ಮರಗಳು ಬೆಳೆದು ಹೆಮ್ಮರವಾದ ನಂತರ ಅದರ ಕೊಂಬೆಗಳು ಕಟ್ಟಡದೊಳಕ್ಕೆ ಚಾಚಿಕೊಳ್ಳುತ್ತವೆ. ಇಂತಹ ಕೊಂಬೆಗಳನ್ನು ಕತ್ತರಿಸಲು ಅನುಮತಿ ಪಡೆಯಬೇಕಿದೆ. ಇಲ್ಲದಿದ್ದರೆ ದಂಡ ಹಾಕುವ ಪದ್ಧತಿ ಇದೆ. ಕೆಲ ಪ್ರದೇಶಗಳಲ್ಲಿ ಕೊಂಬೆ ತೆರವು ಮಾಡಲು ಸ್ಥಳೀಯರಿಂದ ಹಣ ನೀಡುವಂತೆ ಪಾಲಿಕೆ ಸಿಬ್ಬಂದಿ ಒತ್ತಾಯಿಸುತ್ತಾರೆ ಎಂಬ ಆರೋಪವೂ ಇದೆ. ಇದರಿಂದಾಗಿ ಮರ ತೆರವು ಕಾರ್ಯ ಜಟಿಲವಾಗಿದೆ ಎನ್ನುತ್ತಾರೆ ಮಾಜಿ ಕಾರ್ಪೊರೇಟರ್‌ಗಳು.

ಮರ ಸರ್ವೆ ತಂದ ಇಕ್ಕಟ್ಟು:

ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ ಮರಗಳ ಗಣತಿ ಪ್ರಗತಿಯಲ್ಲಿದೆ. 2-3 ವರ್ಷದಿಂದ ಕುಂಟುತ್ತಾ ಸಾಗಿರುವ ಈ ಸರ್ವೆಯಿಂದಾಗಿ ಅಪಾಯಕಾರಿ ಮರಗಳನ್ನು ತೆರವು ಮಾಡಲು ಹಿಂದೇಟು ಹಾಕಲಾಗುತ್ತಿದೆ. ಗಣತಿ ವೇಳೆ ಗುರುತಿಸಿದ ಮರಗಳನ್ನು ಆಡಿಟ್ ಮುಗಿದ ನಂತರ ತಾಳೆ ಹಾಕಿದಾಗ ಸಂಖ್ಯೆಯಲ್ಲಿ ವ್ಯತ್ಯಾಸ ಬಂದಲ್ಲಿ ಸಮಸ್ಯೆಯಾಗುತ್ತದೆ ಎಂಬ ಕಾರಣ ಮರ ತೆರವು ಮಾಡಲಾಗುತ್ತಿಲ್ಲ ಎಂಬ ಮಾತು ಕೇಳಿಬಂದಿದೆ. ಇದನ್ನು ಪಾಲಿಕೆ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ.

ಸಿಬ್ಬಂದಿ ಇಲ್ಲದೆ ಸಮಸ್ಯೆ:

ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತೆರವು ಮಾಡಲು ಅರಣ್ಯ ವಿಭಾಗ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಪ್ರತಿ ವಲಯದಲ್ಲೂ ತೆರವು ಕಾರ್ಯಾಚರಣೆಗೆ ತಂಡವಿದ್ದರೂ, ಬಹುತೇಕ ಮಂದಿ ಗುತ್ತಿಗೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯವಾಗಿ ಇವರನ್ನು ಮಳೆಗಾಲದಲ್ಲಷ್ಟೇ ಬಳಸಿಕೊಳ್ಳುವ ಕಾರಣ ಇತರ ದಿನಗಳಲ್ಲಿ ಮರ ಬಿದ್ದಲ್ಲಿ ತೆರವು ಮಾಡಲು ಸಿಬ್ಬಂದಿಯೇ ಇರುವುದಿಲ್ಲ.

ಸಾಗಣೆ, ಸಂಗ್ರಹಕ್ಕೆ ಗೋದಾಮು ಇಲ್ಲ:

ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿವರ್ಷದ ಮಳೆಗಾಲದ ವೇಳೆ ನಿತ್ಯ 20ಕ್ಕೂ ಹೆಚ್ಚು ಮರದ ಕೊಂಬೆ ಬಿದ್ದು ತೆರವುಗೊಳಿಸುವಂತೆ ಸಹಾಯವಾಣಿಗೆ ಕರೆ ಬರುತ್ತಿವೆ. ಮರಗಳು ನೆಲಕ್ಕುರುಳುವ ಪ್ರಕರಣಗಳು ಭಾರಿ ಮಳೆ, ಬಿರುಗಾಳಿಯನ್ನು ಆಧರಿಸಿರುತ್ತದೆ. ಇಂತಹ ಪ್ರಕರಣಗಳಲ್ಲಿ ಕೊಂಬೆಗಳನ್ನು ಬೇಗನೆ ತೆರವು ಮಾಡಿದರೂ, ಬಿದ್ದ ಮರವನ್ನು ಸಾಗಿಸಲು ವಿಳಂಬವಾಗುತ್ತಿದೆ. ಒಂದೇ ದಿನ ಹೆಚ್ಚಿನ ಮರಗಳು ಬಿದ್ದಲ್ಲಿ ಅವುಗಳನ್ನು ವಲಯದ ಗೋದಾಮಿಗೆ ಸಾಗಿಸಿ ಲೆಕ್ಕ ಇಡಬೇಕು. ನಂತರದ ದಿನಗಳಲ್ಲಿ ಹರಾಜು ಹಾಕಿ ಮಾರಾಟ ಮಾಡಲಾಗುತ್ತದೆ. ಕೆಲವೊಮ್ಮೆ ಹರಾಜು ಕೂಗಲು ಜನ ಬಾರದಿದ್ದಲ್ಲಿ ಗೋದಾಮು ತುಂಬಿ ಹೊರಗೆ ಸಂಗ್ರಹಿಸಲು ಜಾಗ ಇರುವುದಿಲ್ಲ. ಹಾಗಾಗಿ ರಸ್ತೆಬದಿಯೇ ಮರಗಳ ಅವಶೇಷ ಉಳಿಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net