ಮರಗಳ ಸುತ್ತ ಕಾಂಕ್ರೀಟ್ ತೆರವಿಗೆ ಬಿಬಿಎಂಪಿ ನಿರ್ಲಕ್ಷ್ಯ

tree concrete road
Published on

ಆರ್​​.ತುಳಸಿಕುಮಾರ್​

ಬೆಂಗಳೂರು: ಪಾದಚಾರಿ ಮಾರ್ಗ, ರಸ್ತೆಬದಿ ನೆಡಲಾಗಿರುವ ಮರಗಳ ಸುತ್ತ 1 ಮೀಟರ್ ಸುತ್ತಳತೆಯಲ್ಲಿ ಹಾಕಿರುವ ಕಾಂಕ್ರಿಟ್, ಕಲ್ಲು ಹಾಗೂ ಸಿಮೆಂಟ್ ಬ್ಲಾಕ್‌ಗಳನ್ನು ತೆರವುಗೊಳಿಸುವಂತೆ ರಾಜ್ಯ ಅರಣ್ಯ ಇಲಾಖೆ ಆದೇಶ ಹೊರಡಿಸಿದ್ದು, ಈ ಸೂಚನೆ ಪಾಲಿಸಲು ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದೆ. ಹಸಿರು ಉಳಿಸುವ ಆಶಯದೊಂದಿಗೆ ಸರ್ಕಾರ ಪರಿಸರಸ್ನೇಹಿ ಉಪಕ್ರಮ ಕೈಗೊಂಡಿದ್ದರೂ, ಪಾಲಿಕೆ ಮಾತ್ರ ಎಂದಿನಂತೆ ಉದಾಸೀನ ಹೊಂದಿರುವಂತಿದೆ.

ಇತ್ತೀಚಿಗಷ್ಟೇ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ಮರಗಳ ಹರಣದ ವಿಚಾರದಲ್ಲಿ ಆತಂಕ ವ್ಯಕ್ತಪಡಿಸಿ ರಸ್ತೆಬದಿ ಬೆಳೆಸಿರುವ ಮರಗಳ ಸುತ್ತಲಿನ ಕಾಂಕ್ರೀಟ್ ತೆಗೆದುಹಾಕಲು ನಿದೇಶಿಸಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಸರ್ಕಾರ, ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮರಗಳ ಬೆಳವಣಿಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳುವಂತೆ ಕಳೆದ ಜೂ.16ರಂದು ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಬಿಬಿಎಂಪಿ ಪ್ರತ್ಯೇಕ ಆದೇಶ ಹೊರಡಿಸಿ ಮರಗಳ ಬುಡ ಸುತ್ತಲಿನ ಬೇಡ ವಸ್ತುಗಳನ್ನು ತಕ್ಷಣವೇ ತೆರವಿಗೆ ಸೂಚಿಸಿತ್ತು. ಆದರೆ, ಈ ನಿರ್ದೇಶನ ಪಾಲಿಸಲು ಅರಣ್ಯ ಹಾಗೂ ತೋಟಗಾರಿಕೆ ವಿಭಾಗದ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಕಳೆದ ಜೂ.30ರಂದು ಪಾಲಿಕೆ ಮುಖ್ಯ ಆಯುಕ್ತರು ಜೆ.ಪಿ.ನಗರದಲ್ಲಿ ಸ್ಥಳಪರಿಶೀಲನೆ ನಡೆಸುವ ವೇಳೆ ರಸ್ತೆಬದಿ ಮರವೊಂದರ ಬಳಿ ತ್ಯಾಜ್ಯ ಸುರಿದಿದ್ದನ್ನು ವೀಕ್ಷಿಸಿದ್ದರು. ಹಿಂದೊಮ್ಮೆ ಅದೇ ಸ್ಥಳದಲ್ಲಿನ ಮರದ ಬಳಿ ಕಸಕ್ಕೆ ಬೆಂಕಿ ಹಚ್ಚಿದ್ದನ್ನೂ ಸ್ಥಳೀಯರು ದೂರು ನೀಡಿದ್ದರು. ಇಂತಹ ಕೃತ್ಯ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಜತೆಗೆ ಮರಗಳ ಸುತ್ತಲಿನ ಅನಗತ್ಯ ವಸ್ತುಗಳನ್ನು ತೆರವುಗೊಳಿಸುವಂತೆ ಅಧಿಕಾರಿ ವರ್ಗಕ್ಕೆ ತಾಕೀತು ಮಾಡಿದ್ದರು. ಆದರೂ, ಯಾವುದೇ ವಲಯದಲ್ಲೂ ಆದೇಶ ಪಾಲನೆಯಾಗುತ್ತಿಲ್ಲ ಎಂದು ಪರಿಸರ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಸಿಬ್ಬಂದಿ ಕೊರತೆಯಿಂದ ತೆರವಿಗೆ ತಡ:

ಬಿಬಿಎಂಪಿಯಲ್ಲಿ ಅರಣ್ಯ ಹಾಗೂ ತೋಟಗಾರಿಕೆ ವಿಭಾಗ ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಅದರಲ್ಲೂ ಹೆಚ್ಚಿನ ಕಡೆಗಳಲ್ಲಿ ಅರಣ್ಯ ವಿಭಾಗ ಗಿಡ ನೆಡುವುದು, ಅವುಗಳ ಆರೈಕೆ ಇತ್ಯಾದಿ ಅಂಶಗಳತ್ತ ದೃಷ್ಟಿ ಹರಿಸಿದೆ. ಆದರೆ, ಒಮ್ಮೆ ನೆಟ್ಟ ಬಳಿಕ ನಿರ್ವಹಣೆಯನ್ನು ಗುತ್ತಿಗೆ ಕಂಪನಿಗೆ ವಹಿಸುವುದರಿಂದ ಮರಗಳ ಬೆಳವಣಿಗೆ ಸರಿಯಾಗಿ ನಡೆಯುತ್ತಿದೆ ಎಂಬುದರ ಮೇಲ್ವಿಚಾರಣೆ ಮಾಡಲಾಗುತ್ತಿಲ್ಲ. ದೊಡ್ಡ ಮರಗಳಾಗಿ ಬೆಳದ ಬಳಿಕವಂತೂ ಅಂತಹ ಮರಗಳಿಗೆ ಹಾನಿ ಮಾಡುವ, ಕೊಡಲಿ ಹಾಕುವವರ ಮೇಲೆ ನಿಗಾ ಇರಿಸಲು ಸಾಧ್ಯವಾಗುತ್ತಿಲ್ಲ. ಇದೀಗ ಹೊರಡಿಸಿರುವ ಆದೇಶವನ್ನು ಪಾಲಿಸಲು ಅರಣ್ಯ ವಿಭಾಗದ ಬಳಿ ಹೆಚ್ಚಿನ ಸಿಬ್ಬಂದಿ ಇಲ್ಲ. ಈ ಕೆಲಸವನ್ನು ವಾರ್ಡ್‌ವಾರು ಇಂಜಿನಿಯರಿಂಗ್ ವಿಭಾಗದವರನ್ನು ಅವಲಂಬಿಸಿಬೇಕಾದ ಸ್ಥಿತಿ ಇದೆ. ಹಾಗಾಗಿ ಎನ್‌ಜಿಟಿ ಮತ್ತು ರಾಜ್ಯ ಸರ್ಕಾರದ ಆದೇಶ ಪಾಲಿಸಲು ಪಾಲಿಕೆಗೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಇದರ ಹೊರತಾಗಿಯೂ ಮರಗಳಿಗೆ ಹಾನಿ ಮಾಡುವವರ ವಿರುದ್ಧ ದಂಡ ವಿಧಿಸಬೇಕು. ನೋಟಿಸ್ ನೀಡಿ ಕಾಂಕ್ರಿಟ್ ತೆರವುಗೊಳಿಸದವರ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಜತೆಗೆ ಜನಜಾಗೃತಿಯನ್ನೂ ನಡೆಸಬೇಕು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.

ಸಚಿವರಿಂದ ಪರಾಮರ್ಶೆ:

ಮರಗಳ ಸುತ್ತ ಕಾಂಕ್ರೀಟ್ ಹಾಗೂ ಇನ್ನಿತರ ವಸ್ತುಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಹೊರಡಿಸಿರುವ ಆದೇಶ ಅನುಷ್ಠಾನ ಸಂಬಂಧ ಸ್ವತಃ ಸಚಿವ ಈಶ್ವರ್ ಖಂಡ್ರೆ ಗುರುವಾರದಿಂದ (ಜು.3) ಜಿಲ್ಲೆಗಳಲ್ಲಿ ಪರಾಮರ್ಶೆ ನಡೆಸಲಿದ್ದಾರೆ. ಜಿಲ್ಲೆಗಳಿಗೆ ಭೇಟಿ ನೀಡಿದ ವೇಳೆ ಅಲ್ಲಿನ ಸ್ಥಳೀಯ ಸಂಸ್ಥೆ, ಅರಣ್ಯ/ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆಲ ಸಲಹೆ-ಸೂಚನೆ ನೀಡುವವರಿದ್ದಾರೆ.

ಎನ್‌ಜಿಒ ಸಹಕಾರಕ್ಕೆ ಚಿಂತನೆ:

ಮಹಾನಗರದಲ್ಲಿ ರಸ್ತೆಬದಿಯಿರುವ ಮರಗಳ ಪೈಕಿ 2 ಲಕ್ಷಕ್ಕೂ ಅಧಿಕ ಸಂಖ್ಯೆಯ ಗಿಡಗಳು ಸಮಸ್ಯೆ ಎದುರಿಸುತ್ತಿವೆ. ಇವುಗಳಲ್ಲಿ ಬಹುತೇಕವು ಕಾಂಕ್ರೀಟ್, ಕಲ್ಲು/ಸ್ಲಾಬ್ ರೀತಿ ಕಟ್ಟೆ ಕಟ್ಟಲಾಗಿದೆ. ಇವುಗಳನ್ನು ತೆರವುಗೊಳಿಸಲು ಪಾಲಿಕೆಗೆ ವರ್ಷಗಳೇ ಹಿಡಿಯುತ್ತವೆ. ಹಾಗಾಗಿ ಪರಿಸರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎನ್‌ಜಿಒಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.

ಕಾಮಗಾರಿ ವೇಳೆ ನಿಯಮ ಪಾಲನೆ ಕಡ್ಡಾಯ:

ಬಿಬಿಎಂಪಿಯಿಂದ ಹೊಸದಾಗಿ ಕೈಗೊಳ್ಳುವ ಹಾಗೂ ಪ್ರಗತಿಯಲ್ಲಿರುವ ರಸ್ತೆ ವಿಸ್ತರಣೆ, ರಸ್ತೆ/ಫುಟ್‌ಪಾತ್ ಅಭಿವೃದ್ಧಿ, ವೈಟ್ ಟಾಪಿಂಗ್ ಸಹಿತ ಇನ್ನಿತರ ಕಾಮಗಾರಿ ವೇಳೆ ಮರಗಳ ಸುತ್ತ ಕನಿಷ್ಠ 1 ಮೀಟರ್ ಸುತ್ತಲತೆಯಲ್ಲಿ ಖಾಲಿ ಜಾಗ ಬಿಡಬೇಕು. ಈಗಾಗಲೇ ಹಾಕಿರುವ ಕಾಂಕ್ರೀಟ್, ಕಲ್ಲು, ಇತರ ವಸ್ತುಗಳನ್ನು ತೆಗೆದು ಮರ ಬೆಳವಣಿಗೆಗೆ ಅವಕಾಶ ಮಾಡಿಕೊಡುವ ಕೆಲಸ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಮರಗಳ ಸುತ್ತ ಕಾಂಕ್ರೀಟ್ ಹಾಕುವುದರಿಂದ ಅವುಗಳ ಬೆಳವಣಿಗೆ ಕುಂಠಿತವಾಗುತ್ತದೆ. ದಿನಕಳೆದಂತೆ ಮರಗಳು ಸಾಯಲೂಬಹುದು. ಇದನ್ನು ಪರಿಗಣಿಸಿಯೇ ಎನ್‌ಜಿಟಿ ಆದೇಶ ಹೊರಡಿಸಿದ್ದು, ಇದನ್ನು ಯಥಾವತ್ ರಾಜ್ಯ ಸರ್ಕಾರ ಕೂಡ ಮರು ಆದೇಶ ಹೊರಡಿಸಿದೆ. ಪಾಲಿಕೆಯವರು ತೆರವು ಮಾಡುವುದಾಗಿ ಭರವಸೆ ನೀಡಿದ್ದು, ಈ ಕೆಲಸವನ್ನು ಚುರುಕುಗೊಳಿಸಬೇಕು. ಎನ್‌ಜಿಒ ಸಹಿತ ಸಾರ್ವಜನಿಕರು ಕೈಜೋಡಿಸಿ ಪರಿಸರ ಕಾಳಜಿ ತೋರಲಿ.

- ವಿಜಯ್ ನಿಶಾಂತ್, ಟ್ರೀ ಡಾಕ್ಟರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net