ನಗರ ಶುಚಿಯಾಗಿಡುವಲ್ಲಿ ಬಿಬಿಎಂಪಿ ನಿರ್ಲಕ್ಷ್ಯ

bbmp office
Published on

ಬೆಂಗಳೂರು: ಉದ್ಯಾನ ನಗರ ಖ್ಯಾತಿಯ ಬೆಂಗಳೂರು ಮಹಾನಗರವು ಹಿಂದೊಮ್ಮೆ ಸ್ವಚ್ಛ ನಗರವೂ ಆಗಿತ್ತು. ನೈರ್ಮಲ್ಯ ವಿಚಾರದಲ್ಲಿ ರಾಜ್ಯದ ಇತರ ಸ್ಥಳೀಯ ಸಂಸ್ಥೆಗಳಿಗೆ ಮಾದರಿಯಾಗಿದ್ದ ಬಿಬಿಎಂಪಿಯು ಈಗ ಅಧಿಕಾರಸ್ಥರು ಹಾಗೂ ಕಸ ಗುತ್ತಿಗೆದಾರರ ಮಧ್ಯೆ ನಡೆದಿರುವ ಶೀತಲ ಸಮರದಿಂದ ನಗರದೆಲ್ಲೆಡೆ ತ್ಯಾಜ್ಯ ವಿಷಯ ವ್ಯಾಜ್ಯ ಆಗಿ ಪರಿವರ್ತನೆಯಾಗಿದೆ.

ಬಿಬಿಎಂಪಿ ವ್ಯಾಪ್ತಿ ವಿಸ್ತರಣೆ ಆದಂತೆ ಕಸ ವಿಲೇವಾರಿ ಬೃಹತ್ ಆಗುತ್ತಿದೆ. ವೈಜ್ಞಾನಿಕ ಕ್ರಮ ಕೈಗೊಳ್ಳುವ ಹಲವು ಯೋಜನೆಗಳನ್ನು ಘೋಷಿಸಿದರೂ, ಅವು ಕಾಗದದ ಮೇಲಷ್ಟೇ ಉಳಿದಿವೆ. ರಾಜಕೀಯ ನಾಯಕರ ಪ್ರತಿಷ್ಠೆ, ಅಧಿಕಾರಿಗಳ ಇಚ್ಛಾಶಕ್ತಿ ಪ್ರದರ್ಶಿಸದಿರುವುದು ಹಾಗೂ ಗುತ್ತಿಗೆದಾರರ ಹಣದಾಹ ನಗರದ ತ್ಯಾಜ್ಯ ಸಮಸ್ಯೆಯನ್ನು ಜೀವಂತ ಇಟ್ಟಿದೆ. ಇದನ್ನು ಸಾರ್ವಜನಿಕರು ಸಹಿತ ಎಲ್ಲ ಪಕ್ಷಗಳ ಮುಖಂಡರು ದನಿಗೂಡಿಸಿದ್ದಾರೆ.

ವಿಶೇಷವೆಂದರೆ, ಸ್ವತ: ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರು ನಗರದಲ್ಲಿ ತ್ಯಾಜ್ಯ ವಿಲೇವಾರಿ ಮಾಫಿಯಾ ಹಿಡಿತದಲ್ಲಿದೆ. ಯಾವ ಪಕ್ಷ ಅಧಿಕಾರಕ್ಕೂ ಬಂದರೂ, ಈ ಗುತ್ತಿಗೆದಾರರನ್ನು ಸರಿದಾರಿಗೆ ತರಲು ಸಾಧ್ಯವಾಗಿಲ್ಲ ಎಂದು ಶಾಸನಸಭೆಯ ಒಳಗೆ ಹಾಗೂ ಹೊರಗೂ ಹೇಳಿದ್ದರು. ಹೈಕೋರ್ಟ್ ಕೂಡ ಕಸ ವಿಲೇವಾರಿ ವ್ಯವಸ್ಥೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಹಲವಾರು ಬಾರಿ ಆದೇಶಿಸಿದ್ದರೂ, ಈವರೆಗೂ ಸಮಸ್ಯೆ ಪರಿಹಾರ ಕಂಡಿಲ್ಲ.

ಹಳಿ ತಪ್ಪಿದ ಕಸ ಸಂಗ್ರಹ:

ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ 5 ಸಾವಿರ ಟನ್‌ಗೂ ಅಧಿಕ ಪ್ರಮಾಣದ ಕಸ ಸಂಗ್ರಹವಾಗುತ್ತಿದೆ. ಇದರಲ್ಲಿ ಹೆಚ್ಚಿನ ಭಾಗ ಮನೆ ಮನೆಯಿಂದ ಸಂಗ್ರಹಿಸಲಾಗುತ್ತಿದೆ. ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಅವುಗಳನ್ನು ವಿಂಗಡಿಸಿ ಡಂಪಿಂಗ್ ಯಾರ್ಡ್‌ಗೆ ರವಾನಿಸಬೇಕು. ಆದರೆ, ಆಟೋ ಟಿಪ್ಪರ್‌ಗಳಿಂದ ಸಂಗ್ರಹಿಸುವ ಇಂತಹ ಕಸದಲ್ಲಿ ಅರ್ಧದಷ್ಟು ಮಿಶ್ರಣ ರೂಪದಲ್ಲೇ ಭೂ ಭರ್ತಿ ಕೇಂದ್ರಕ್ಕೆ ರವಾನೆಯಾಗುತ್ತಿದೆ. ಉಳಿದ ತ್ಯಾಜ್ಯವನ್ನು ಸಂಸ್ಕರಣ ಮಾಡಿ ಕಾಂಪೋಸ್ಟ್ ಗೊಬ್ಬರ, ವಿದ್ಯುತ್ ತಯಾರಿಸುವ ಕಾರ್ಯವೂ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಕಳೆದ ಎರಡು ವರ್ಷದಿಂದ ಕಸ ಸಂಗ್ರಹಕ್ಕೆ ಹೊಸ ರೂಪ ನೀಡುವುದಾಗಿ ಸರ್ಕಾರ ಹೇಳುತ್ತಿದ್ದರೂ, ಅದಿನ್ನೂ ಕಾಗದದ ಮೇಲಷ್ಟೇ ಉಳಿದಿದೆ. ಎರಡು ಬಾರಿ ಟೆಂಡರ್ ಸಿದ್ಧಪಡಿಸಿದ್ದ ವೇಳೆ ಬೃಹತ್ ಮೊತ್ತವನ್ನು ನಮೂದಿಸಿದ್ದರಿಂದ ನ್ಯಾಯಾಲಯದ ಕದ ತಟ್ಟಲಾಗಿತ್ತು. ಚುನಾಯಿತ ಜನಪ್ರತಿನಿಧಿಗಳು ಬೇಕೆಂದೇ ಅಧಿಕಾರಿಗಳ ಮೂಲಕ ಟೆಂಡರ್ ಮೊತ್ತವನ್ನು ಹಿಗ್ಗಿಸಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲಾಗುತ್ತಿದೆ ಎಂದು ಪ್ರತಿಪಕ್ಷ ಭಾರಿ ಪ್ರತಿಭಟನೆ ಕೂಡ ಮಾಡಿತ್ತು.

ಪ್ರಶಸ್ತಿಯಿಂದ ದೂರ ಸರಿದ ಬಿಬಿಎಂಪಿ:

2024-25ನೇ ಸಾಲಿನ ರಾಷ್ಟ್ರೀಯ ಸ್ವಚ್ಛ ಸರ್ವೇಕ್ಷಣಾ ರಾಂಕಿಂಗ್ ಪಟ್ಟಿಯಲ್ಲಿ ಬಿಬಿಎಂಪಿ ಕಳಪೆ ಸಾಧನೆ ಮಾಡಿದೆ. ಕೇಂದ್ರ ಸರ್ಕಾರದ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಈ ಬಾರಿ 10 ಲಕ್ಷಕ್ಕಿಂತ ಮೇಲ್ಪಟ್ಟ ವಿಭಾಗದಲ್ಲಿ ಸ್ಪರ್ಧಿಸಿದ್ದ 40 ನಗರಗಳ ಪೈಕಿ ಬಿಬಿಎಂಪಿ 36ನೇ ಸ್ಥಾನವನ್ನು ಪಡೆದಿದೆ. ಪ್ರಶಸ್ತಿಗೆ ವಿವಿಧ ಮಾನದಂಡಗಳನ್ನು ಆಧಾರವಾಗಿಟ್ಟುಕೊಂಡು ಪುರಸ್ಕಾರ ಪ್ರಕಟಿಸುವ ಪರಿಪಾಠ ಇದೆ. ಇವುಗಳಲ್ಲಿ ಒಂದೆರಡು ಅಂಶಗಳಲ್ಲಿ ಮಾತ್ರ ಸಾಧನೆ ಮಾಡಿದ್ದರೂ, ಉಳಿದವುಗಳಲ್ಲಿ ಬಿಬಿಎಂಪಿ ವೈಫಲ್ಯ ಕಂಡಿದೆ.

ಹೊಸ ಟೆಂಡರ್ ಆಹ್ವಾನ:

ತ್ಯಾಜ್ಯ ಸಂಗ್ರಹ, ಸಾಗಣೆ, ವಿಲೇವಾರಿ ಹಾಗೂ ಸಂಸ್ಕರಣೆಗಾಗಿ ಸಮಗ್ರ ರೂಪ ನೀಡುವ ಘನತ್ಯಾಜ್ಯ ನಿರ್ವಹಣೆಗೆ ಖಾಸಗಿ ಸಹಭಾಗಿತ್ವ ಹೊಂದಲು ಹೊಸದಾಗಿ ಟೆಂಡರ್ ಆಹ್ವಾನಿಸಲಾಗಿದೆ. ಎರಡು ಪ್ಯಾಕೇಜ್‌ಗಳಲ್ಲಿ ಒಟ್ಟು 3,724 ಕೋಟಿ ರೂ. ವೆಚ್ಚದ ಟೆಂಡರ್ ಇದಾಗಿದ್ದು, ಪಿಪಿಪಿ ಮಾದರಿಯಲ್ಲಿ ಕಾರ್ಯನಿರ್ವಹಿಸಲಾಗುತ್ತದೆ. 2030ರ ವೇಳೆ ನಗರದ ಜನಸಂಖ್ಯೆ 1.7 ಕೋಟಿ ದಾಟಲಿದ್ದು, ಆಗ ನಿತ್ಯ 6 ಸಾವಿರಕ್ಕೂ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗಲಿರುವುದನ್ನು ಪರಿಗಣಿಸಲಾಗಿದೆ. ಈ ಹಿಂದೆಯೇ 4 ಪ್ಯಾಕೇಜ್‌ಗಳಲ್ಲಿ ಕರೆದಿದ್ದ ಟೆಂಡರ್‌ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆ, ಈಗ 2 ಪ್ಯಾಕೇಜ್‌ಗಳಲ್ಲಿ ಮರುಟೆಂಡರ್ ಕರೆಯಲಾಗಿದೆ. ಒಂದು ಬಾರಿ ಬಂಡವಾಳ ಹೂಡಿಕೆ ಆಧರಿಸಲಾಗಿದೆ. ಟಿಪ್ಪಿಂಗ್ ಆಧಾರದಲ್ಲಿ ವಿಲೇವಾರಿ, ಸಂಸ್ಕರಣೆ ಮಾಡಲು ಟೆಂಡರ್ ಆಹ್ವಾನಿಸಿದ್ದು, ಮುಂಬರುವ ಆ.14 ಬಿಡ್ ದಾಖಲಿಸಲು ಅಂತಿಮ ದಿನವಾಗಿರುತ್ತದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

'ಡರ್ಟಿ ಸಿಟಿ' ಪಟ್ಟಿಯಲ್ಲಿ ತುಮಕೂರು!

ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ಮಿಷನ್ ಅಡಿಯಲ್ಲಿ (3-10 ಲಕ್ಷ ಜನಸಂಖ್ಯೆ ವಿಭಾಗ) ರಾಜ್ಯದ ಮೈಸೂರು ಹಾಗೂ ದಾವಣಗೆರೆ ಪಾಲಿಕೆ ಅತ್ಯುತ್ತಮ ಸಾಧನೆ ತೋರಿದ್ದರೂ, ತುಮಕೂರು ನಗರಪಾಲಿಕೆ ಡರ್ಟಿ ಸಿಟಿ ಪಟ್ಟಿಗೆ ಸೇರಿ ಅಚ್ಚರಿ ಮೂಡಿಸಿದೆ. ಈ ಪಟ್ಟಿಯಲ್ಲಿ ಮಥುರಾ ದಂಡು ಪ್ರದೇಶ, ಈರೋಡ್, ಕೊಲ್ಲಂ ಹಾಗೂ ಸೇಲಂ ಸೇರಿದೆ. ಜತೆಗೆ 10 ಲಕ್ಷ ಮೇಲ್ಪಟ್ಟ ಜನಸಂಖ್ಯೆ ಹೊಂದಿರುವ ನಗರಗಳ ಪೈಕಿ ಮೆಟ್ರೋಪಾಲಿಟನ್ ನಗರವಾದ ಚೆನ್ನೈ ಕೂಡ ಡರ್ಟಿ ಸಿಟಿ ಕುಖ್ಯಾತಿಗೆ ಒಳಗಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net