ಐಟಿ-ಬಿಟಿ ಸಂಸ್ಥೆಗಳೊಂದಿಗೆ ಮತದಾನ ಜಾಗೃತಿ; ಮತಪ್ರಮಾಣ ಏರಿಸಲು ಬಿಬಿಎಂಪಿಯಿಂದ ಉಪಕ್ರಮ

tushar girinath
Published on

ಬೆಂಗಳೂರು: ಪ್ರಜಾಪ್ರಭುತ್ವದ ಯಶಸ್ಸು ಚುನಾವಣೆಯಲ್ಲಿ ಗರಿಷ್ಠ ಮತದಾನದೊಂದಿಗೆ ಆಂತರಿಕವಾಗಿ ಸಂಬಂಧ ಹೊಂದಿದೆ ಎಂದು ಬೆಂಗಳೂರು ಜಿಲ್ಲಾ ಚುನಾವಣಾ ಅಧಿಕಾರಿ, ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ಧಾರೆ.

ಸ್ವೀಪ್ ಕಾರ್ಯಕ್ರಮದಡಿ ORRCA ಸಹಯೋಗದೊಂದಿಗೆ ಮಾನ್ಯತಾ ಬಿಸಿನೆಸ್ ಪಾರ್ಕ್‌ನಲ್ಲಿ ಮಂಗಳವಾರ ನಡೆದ ಮಾತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲ ಐಟಿ-ಬಿಟಿ ಸಂಸ್ಥೆ, ಕೈಗಾರಿಕಾ ಪ್ರದೇಶಗಳಲ್ಲಿ ಮತದಾನ ಜಾಗೃತಿ ವೇದಿಕೆ ಸಿದ್ದಪಡಿಸಿಕೊಂಡು ಆ ಮೂಲಕ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದ್ದಾರೆ.

ಮತದಾನ ಮಾಡುವ ಉದ್ದೇಶಕ್ಕಾಗಿ ಐಟಿ-ಬಿಟಿ ಸಂಸ್ಥೆ, ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ರಜೆಯನ್ನು ನೀಡಲಾಗುತ್ತದೆ. ಎಲ್ಲರೂ ಮತದಾನ ಮಾಡಬೇಕೆಂಬ ಉದ್ದೇಶದಿಂದ ರಜೆಯನ್ನು ನೀಡಲಾಗುತ್ತದೆ. ಆದರೆ, ಅದನ್ನು ಸಾಕಷ್ಟು ಮಂದಿ ದುರುಪಯೋಗಪಡಿಸಿಕೊಳ್ಳುತ್ತಾರೆ. ಈ ಸಂಬಂಧ ಮತದಾನ ದಿನ್ನು ಅನ್ಯಕಾರ್ಯಗಳಿಗೆ ಬಳಸಿಕೊಳ್ಳದೆ ಮತಗಟ್ಟೆಗಳಿಗೆ ಭೇಟಿ ನೀಡಿ ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ.

10 ದಿನ ಮುನ್ನ ಮತಚೀಟಿ

ಮತದಾನ ಪಟ್ಟಿಯಲ್ಲಿ ಹೆಸರಿರುವವರಿಗೆ 10 ದಿನದ ಮುಂಚಿತವಾಗಿಯೇ ಮತಚೀಟಿಯನ್ನು ಮನೆಗೆ ತಲುಪಿಸಲಾಗುವುದು. ಜೊತೆಗೆ ಓಟರ್ ಹೆಲ್ಪ್ ಲೈವ್ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಂಡು ಅದರ ಮೂಲಕ ಮತದಾನ ಮಾಡುವ ಮತಗಟ್ಟೆಯ ಮಾಹಿತಿ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ತುಷಾರ್​ ಗಿರಿನಾಥ್​ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಸಂಗಪ್ಪ, ವಲಯ ಆಯುಕ್ತ ಪಿ.ಎನ್.ರವೀಂದ್ರ, ಸ್ವೀಪ್ ನೋಡಲ್ ಅಧಿಕಾರಿ ಸಿದ್ದೇಶ್ವರ್, ಜಂಟಿ ಆಯುಕ್ತೆ ಪಲ್ಲವಿ, ಮತದಾನ ಜಾಗೃತಿ ಮೂಡಿಸುವ ನಮ್ಮ ಬೆಂಗಳೂರು ಐಕಾನ್ಸ್‌ಗಳಾದ ಮಾಸ್ಟರ್ ಆನಂದ್ ಮೋಹನ್ ಕುಮಾರ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net