ಬಿಬಿಎಂಪಿ ವಿಭಜನೆ ವಿಚಾರ ಕೈಬಿಡುವಂತೆ ಒತ್ತಾಯ

Kempegowda Jayanthi
Published on

ಬೆಂಗಳೂರು: ಬಿಬಿಎಂಪಿ ವಿಭಜನೆ ವಿಚಾರ ಕೈಬಿಡುವಂತೆ ಒತ್ತಾಯಿಸಿ ಬೆಂಗಳೂರು ನಿರ್ಮಾಪಕ ಕೆಂಪೇಗೌಡ ಕೇಂದ್ರ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ನಾಡಪ್ರಭು ಕೆಂಪೇಗೌಡ ಮತ್ತು ಅವರ ವಂಶಸ್ಥರಿಂದ ನಿರ್ಮಾಣಗೊಂಡಿರುವ ಬೆಂಗಳೂರು ಇಂದು ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದು, ಆಧುನಿಕ ತಂತ್ರಜ್ಞಾನ, ವೈಜ್ಞಾನಿಕ ಕ್ಷೇತ್ರದ ಬೆಳವಣಿಗೆ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ದಾಪುಗಾಲು ಹಾಕುತ್ತಿರುವುದಕ್ಕೆ ಕಾರಣ ಆಡಳಿತತ್ಮಾಕವಾಗಿ ಒಂದೇ ಆಗಿರುವುದೇ ಆಗಿದೆ.
ಯಾವುದೇ ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಾ ಬಿಬಿಎಂಪಿ ವಿಭಜನೆ ಮಾಡುವ ಆಲೋಚನೆ ಮಾಡುವುದು ಮಹಾನಗರದ ಹೆಸರಿಗೆ ಕಂಟಕಪ್ರಾಯವಾಗಿರುತ್ತದೆ. ಬೆಂಗಳೂರಿನ ಸಮಸ್ಯೆಗಳನ್ನು ನಿಭಾಯಿಸಲಾಗದೆ ವಿಭಜಿಸುವುದಾದರೆ, ಕರ್ನಾಟಕ ರಾಜ್ಯದಲ್ಲಿಯೂ ಅನೇಕ ಸಮಸ್ಯೆಗಳು ಕಾಡುತ್ತಿದೆ. ಆಗಂತ ರಾಜ್ಯವನ್ನು ವಿಭಜಿಸಲು ಸಾಧ್ಯವೇ. ಬೆಂಗಳೂರಿನ ನಗರದಲ್ಲಿನ ಬಹುತೇಕ ಸಮಸ್ಯೆಗಳಿಗೆ ದಕ್ಷತೆಯ ಕೊರತೆ ಪ್ರಮುಖ ಕಾರಣವಾಗಿದೆ. ಇದು ವಿರೋಧ ಪಕ್ಷಗಳ, ವಿಚಾರವಂತರ, ಸಂಘಸಂಸ್ಥೆಗಳ ಹಾಗೂ ಬೆಂಗಳೂರು ನಿರ್ಮಾಪಕ ಕೇಂಪೆಗೌಡ ಕೇಂದ್ರ ಸಮಿತಿಯ ನಿಲುವಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ನಿಲುವು ಭಿನ್ನವಾಗಿದ್ದು, ಆಡಳಿತಾತ್ಮಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ವಿಭಜನೆ ವಿಚಾರದಲ್ಲಿ ಹಠವಾದ ನಿಲುವನ್ನು ಹೊಂದಿದ್ದು, ಮೊಂಡುತನ ಮಾಡದೆ ಸಮಗ್ರ ಬೆಂಗಳೂರು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈಗ ಬಂದಿರುವ ಮುಂದೆ ಬರಬಹುದಾದ ಎಲ್ಲಾ ಸಮಸ್ಯೆಗಳಿಗೆ ಒಂದು ರಾಜಕೀಯೇತರ ಉಚ್ಚ ಸಮಿತಿಯೊಂದನ್ನು ನಗರ ಮಟ್ಟದಲ್ಲಿ ರಚಿಸಿ ಅದರಿಂದ ಮಾರ್ಗದರ್ಶನ ಪಡೆದು ರಾಜಧಾನಿ ಬೆಂಗಳೂರನ್ನು ವಿಭಜನೆ ಮಾಡುವ ವಿಚಾರವನ್ನು ಈಗಲೇ ಕೈಬಿಟ್ಟು ಆಡಳಿತದಲ್ಲಿ ಚುರುಕು ಮುಟ್ಟಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಮತ್ತು ಆಡಳಿತದಲ್ಲಿ ಸುಧಾರಣೆ ಕಂಡುಕೊಳ್ಳು ಸರ್ಕಾರವು ಮನಸ್ಸು ಮಾಡಬೆಕು ಎಂದು ಬೆಂಗಳೂರು ನಿರ್ಮಾಪಕ ಕೆಂಪೇಗೌಡ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮರಿಮಲ್ಲಯ್ಯ ಮತ್ತು ಸಿ.ನಾಗೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net