

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಎ-ಖಾತಾ ನೀಡುವ ಸಲುವಾಗಿ ರಾಜ್ಯ ಸರ್ಕಾರವು ಆದೇಶದ ಹೊರಡಿಸಿದ್ದು, ಇದರನ್ವಯ ನಾಗರಿಕರು ಎ-ಖಾತಾಗೆ ಅರ್ಜಿ ಸಲ್ಲಿಸುವ ಸಲುವಾಗಿ ಶೀಘ್ರ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸುವುದಾಗಿ ಪಾಲಿಕೆ ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ಇತ್ತೀಚಿಗಷ್ಟೇ ಸರ್ಕಾರ ಸ್ವತ್ತುಗಳಿಗೆ ಎ ಹಾಗೂ ಬಿ ಖಾತಾ ಎಂಬ ಪ್ರತ್ಯೇಕ ದಾಖಲೆ ವಿತರಣೆಯಿಂದ ಸಮಸ್ಯೆಯಾಗುತ್ತಿದ್ದು, ಇದಕ್ಕೆ ಕೊನೆಯಾಡಲು ಎಲ್ಲ ಸ್ವತ್ತುಗಳಿಗೆ ಸಮಾನ ಖಾತಾ ರೂಪದಲ್ಲಿಯೇ ಎ ಖಾತಾ ನೀಡಲು ಸಚಿವಸಂಪುಟದಲ್ಲಿ ನಿರ್ಧರಿಸಲಾಗಿತ್ತು. ಇದರನ್ವಯ ಬಿಬಿಎಂಪಿಯು ತನ್ನ ವಿವಿಧ ವಿಭಾಗಗಳ ಅಧಿಕಾರಿಗಳಿಗೆ ಸೂಚನೆ ನೀಡಿ ವ್ಯವಸ್ಥಿತವಾಗಿ ಕಾರ್ಯಕ್ರಮ ರೂಪಿಸಲು ಸೂಚಿಸಿದೆ.
ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಮುಖ್ಯ ಆಯುಕ್ತರು, 15 ದಿನಗಳಲ್ಲಿ ಆನ್‌ಲೈನ್ ಮೂಲಕ ಎ ಖಾತಾ ನೀಡುವ ಸಂಬಂಧ ಎಲ್ಲ ಸಿದ್ಧತೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದಾರೆ.
ಮಧ್ಯವರ್ತಿ ಮೊರೆ ಹೋಗಬೇಡಿ:
ಬಿ-ಖಾತಾವನ್ನು ಎ-ಖಾತಾಕ್ಕೆ ಪರಿವರ್ತನೆ ಮಾಡುವುದು ಅಥವಾ ಈಗ ಯಾವುದೇ ಖಾತಾ ಇಲ್ಲದಿದ್ದರೆ ಹೊಸದಾಗಿ ಎ-ಖಾತಾಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಸೌಲಭ್ಯವನ್ನು ಪಡೆಯಲು ಬಿಬಿಎಂಪಿ ಕಚೇರಿಗೆ ಹೋಗುವ ಅಥವಾ ಮಧ್ಯವರ್ತಿಗಳನ್ನು ಸಂಪರ್ಕಿಸುವ ಅಗತ್ಯ ಇಲ್ಲ. ಜತೆಗೆ ಯಾರಿಗೂ ಲಂಚ ನೀಡದೆ ಆನ್‌ಲೈನ್ ಮೂಲಕ ಎ-ಖಾತಾ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ನಾಗರಿಕರು 15 ದಿನ ಕಾಯಬೇಕು ಎಂದು ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ತಿಳಿಸಿದ್ದಾರೆ.