

ಬೆಂಗಳೂರು: ನಗರದ ಹೊರ ವಲಯದಲ್ಲಿರುವ ರಾಜಕಾಲುವೆಗಳ ಬದಿಯ ಬಫರ್ ಪ್ರದೇಶದಲ್ಲಿ ರಸ್ತೆ ನಿರ್ಮಿಸುವ ಯೋಜನೆಗೆ ಬಿಬಿಎಂಪಿ ಮರುಚಾಲನೆ ನೀಡಿದೆ. ಸ್ಥಳೀಯ ರಸ್ತೆ ಜಾಲವನ್ನು ವೃದ್ಧಿಸುವ ಜತೆಗೆ ಸಂಚಾರ ಸಿಕ್ಕುಗೆ ಪರಿಹಾರ ಒದಗಿಸಲು ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ.
ಕಳೆದ ಸಾಲಿನ ಬಜೆಟ್‌ನಲ್ಲಿ ಬಿಬಿಎಂಪಿಯು ರಾಜಕಾಲುವೆಗಳ ಬದಿ ರಸ್ತೆ ನಿರ್ಮಿಸುವ ಘೋಷಣೆ ಮಾಡಿತ್ತು. ಒಟ್ಟು 300 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲು ಸರ್ಕಾರದ ಅನುಮತಿ ಪಡೆಯಲಾಗಿದೆ. ಮೊದಲ ಹಂತದಲ್ಲಿ ನಾಲ್ಕು ಕಡೆ ಯೋಜನೆ ಜಾರಿಗೆ ಮುಂದಾಗಿದ್ದರೂ, ಯಲಹಂಕದ ಕೋಗಿಲು ಕ್ರಾಸ್‌ನಿಂದ ಜಕ್ಕೂರು ಕೆರೆ-ರಾಚೇನಹಳ್ಳಿ ಕೆರೆಯವರೆಗೆ ರಸ್ತೆ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಆದರೆ, ಯಲಹಂಕ ಕೆರೆ ಕೋಡಿ ಬಳಿ ರಾಜಕಾಲುವೆ ಒತ್ತುವರಿಯಿಂದ ಕೋಗಿಲು ಕ್ರಾಸ್ ಜಲಾವೃತಗೊಂಡು ಏರ್‌ಪೋರ್ಟ್ ರೋಡ್‌ನ ಸರ್ವಿಸ್ ರಸ್ತೆಯುದ್ದಕ್ಕೂ ಭಾರಿ ಸಮಸ್ಯೆಯನ್ನು ತಂದೊಡ್ಡಿತ್ತು. ಈ ಕಾರಣದಿಂದ ಯೋಜನೆಗೆ ಆರಂಭಿಕ ವಿಘ್ನ ಎದುರಾಗಿ ತಾತ್ಕಾಲಿಕವಾಗಿ ಕೆಲಸವನ್ನು ಸ್ಥಗಿತಗೊಳಿಸಲಾಗಿತ್ತು.
ಈಗ ಯೋಜನೆಯನ್ನು ಮರುಜಾರಿಗೊಳಿಸಲು ಪಾಲಿಕೆ ಮುಂದಾಗಿದ್ದು, ಹೆಬ್ಬಾಳ ಕೆರೆ ಬಳಿಯಿರುವ ಸರೋವರ ಲೇಔಟ್‌ನಿಂದ ನಾಗವಾರ ಕೆರೆವರೆಗಿನ ರಾಜಕಾಲುವೆ ಬದಿ 3 ಕಿ.ಮೀ. ಉದ್ದಕ್ಕೂ ರಸ್ತೆ ನಿರ್ಮಿಸಲು ಟೆಂಡರ್ ಆಹ್ವಾನಿಸಲಾಗಿದೆ. ಗುತ್ತಿಗೆ ವಹಿಸುವ ಕಂಪನಿಯೇ ಜಾಗ ಗುರುತು ಮಾಡಿ ಅಂದಾಜು ವೆಚ್ಚವನ್ನು ತಯಾರಿ ಕಾಮಗಾರಿ ಕೈಗೊಳ್ಳಬೇಕಿದೆ. ಸಿವಿಲ್ ಕಾಮಗಾರಿಗೆ ಪ್ರತ್ಯೇಕ ಟೆಂಡರ್ ಹೊರಡಿಸಲಿದ್ದು, ಆ ಮುನ್ನ ರಸ್ತೆ ನಿರ್ಮಿಸಲು ಬೇಕಾದ ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತದೆ.
ಖಾಸಗಿ ಸ್ವತ್ತಿಗೆ ಟಿಡಿಆರ್:
ಪ್ರಸ್ತುತ ಗುರುತಿಸಿರುವ ಹೆಬ್ಬಾಳ-ನಾಗವಾರ ಭಾಗದ ರಾಜಕಾಲುವೆ ಉದ್ದಕ್ಕೂ ಬರ್ ಪ್ರದೇಶ ಹೆಚ್ಚಿನ ಒತ್ತುವರಿಗೆ ಒಳಗಾಗಿಲ್ಲ. ಜತೆಗೆ ಖಾಸಗಿ ಸ್ವತ್ತುಗಳು ಹೆಚ್ಚಿಲ್ಲ. ಕೆಲವು ಕಟ್ಟಡಗಳಿದ್ದು, ಅವುಗಳು ಒತ್ತುವರಿ ಆಗಿದ್ದಲ್ಲಿ ತೆರವುಗೊಳಿಸಲಾಗುತ್ತದೆ. ಖಾಸಗಿ ಸ್ವತ್ತುಗಳನ್ನು ಭೂಸ್ವಾಧೀನ ಮಾಡಿಕೊಂಡು ಟಿಡಿಆರ್ ನೀಡಲು ಪಾಲಿಕೆ ನಿರ್ಧರಿಸಿದೆ. ಬಫರ್ ಜಾಗದಲ್ಲಿ ರಸ್ತೆ ನಿರ್ಮಿಸಲು ಸಾಧ್ಯವಾಗದಿದ್ದಲ್ಲಿ ಕಿರು ಮೇಲ್ಸೇತುವೆ ನಿರ್ಮಿಸುವ ಉದ್ದೇಶವೂ ಇದೆ. ಈ ಭಾಗದಲ್ಲಿ 7.5 ಕಿ.ಮೀ. ವರೆಗೂ ರಸ್ತೆ ನಿರ್ಮಿಸಲು ಅವಕಾಶವಿದ್ದು, ಸರ್ಕಾರಕ್ಕೆ ಸೇರಿದ 161 ಎಕರೆ ಜಮೀನು ಲಭ್ಯವಿರುವುದನ್ನು ಗುರುತಿಸಲಾಗಿದೆ. ಆಯವ್ಯಯದಲ್ಲಿ 100 ಕೋಟಿ ರೂ. ಅನುದಾನ ಮೀಸಲಿಟ್ಟಿರುವುದರಿಂದ ಕಾಮಗಾರಿ ಕೈಗೊಳ್ಳಲು ಯಾವುದೇ ತೊಂದರೆ ಇಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಒತ್ತುವರಿ ತೆರವು ಸವಾಲು:
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆರೆ ಸಹಿತ ಇತರ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸುವಿಕೆ ಕಗ್ಗಂಟಾಗಿದೆ. ಹೆಚ್ಚಿನ ಕಡೆಗಳಲ್ಲಿ ಕಟ್ಟಡಗಳು ತಲೆಯೆತ್ತಿರುವ ಕಾರಣ ತೆರವು ಕಷ್ಟವೆಂದು ಪಾಲಿಕೆ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಇಂತಹದೇ ಸ್ಥಿತಿ ರಾಜಕಾಲುವೆ ಬದಿಯ ಬಫರ್ ವಲಯದಲ್ಲಿರುವ ಜಾಗವನ್ನು ತೆರವುಗೊಳಿಸಲು ಸವಾಲು ಎದುರಾಗಿದೆ. ಹೊರವಲಯಗಳಲ್ಲಿ ರಾಜಕಾಲುವೆಗಳ ಗುರುತು ದೃಡೀಕರಿಸುವಿಕೆ ನಗರ ಜಿಲ್ಲಾಡಳಿತ ಪೂರ್ಣಗೊಳಿಸಿಲ್ಲ. ಹಾಗಾಗಿ ತೆರವು ಕಾರ್ಯಾಚರಣೆ ನಡೆಸದೆ ರಸ್ತೆ ನಿರ್ಮಾಣ ಸಾಧ್ಯವಾಗದು ಎಂಬ ಮಾತು ಕೇಳಿಬಂದಿದೆ.
ಸೇನಾ ಜಾಗ ಸ್ವಾಧೀನ ಕಷ್ಟ?:
ಪ್ರಸ್ತುತ ಪಾಲಿಕೆ ಗುರುತಿಸಿರುವ ಬಫರ್ ಜಾಗದಲ್ಲಿನ ರಸ್ತೆಯು ಹೆಬ್ಬಾಳ ಕೆರೆಗೆ ಹೊಂದಿಕೊಂಡಂತೆ ಮಿಲಿಟರಿ ಫಾರ್ಮ್ (ಸೇನಾ ಜಾಗ) ಇದೆ. ಸೇನಾ ಜಾಗವನ್ನು ಬಳಸಿಕೊಂಡು ರಸ್ತೆ ನಿರ್ಮಿಸುವುದು ಕಠಿಣವಾಗಲಿದೆ. ಮೂಲಸೌಕರ್ಯ ಯೋಜನೆಗಳಿಗೆ ಮಿಲಿಟರಿ ಜಾಗ ಪಡೆಯುವುದು ಅತಿಕಷ್ಟದ ಆಗಲಿದ್ದು, ಉದ್ದೇಶಿತ ರಸ್ತೆ ನಿರ್ಮಾಣ ಸಲವಾಗಲಿದೆಯೆ ಎಂಬ ಪ್ರಶ್ನೆ ಎದ್ದಿದೆ. ಹೆಬ್ಬಾಳ ಕೆರೆಯಿಂದ ಮುಂದಕ್ಕೆ ಬರ್ ವಲಯದಲ್ಲಿ ಸಮಸ್ಯೆ ಇಲ್ಲದಿರುವುದು ಅಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬಹುದಾಗಿದೆ.