

ಬೆಂಗಳೂರು: ಬಿಬಿಎಂಪಿಗೆ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಷಲ್‌ಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಲಿ ಕಾರ್ಯನಿರ್ವಹಿಸುತ್ತಿರುವವರ ನಿಖರ ಮಾಹಿತಿಯನ್ನು ಒದಗಿಸುವಂತೆ ಪಾಲಿಕೆಯ ಕೇಂದ್ರ ಕಚೇರಿಯಿಂದ ಎಲ್ಲ ವಿಭಾಗಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.
ಆರಂಭದಲ್ಲಿ ಘನತ್ಯಾಜ್ಯ ಕೇಂದ್ರಗಳು, ಬೆಳ್ಳಂದೂರು-ವರ್ತೂರು ಕೆರೆಗಳ ಭದ್ರತೆಗೆ ನಿಯೋಜಿತರಾಗಿದ್ದ ಮಾರ್ಷಲ್ ಸೇವೆಯನ್ನು ಕೋವಿಡ್ ಅವಧಿಯಲ್ಲೂ ಆಸ್ಪತ್ರೆ, ಇಂದಿರಾ ಕ್ಯಾಂಟೀನ್ ಹಾಗೂ ಇನ್ನಿತರ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಆನಂತರ ಇವರ ಸಂಖ್ಯೆ ಹೆಚ್ಚಾಗಿದ್ದು, ಅನುಮೋದನೆ ಪಡೆದುಕೊಳ್ಳದೆ ವಿವಿಧೆಡೆ ನಿಯೋಜನೆ ಮಾಡಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಇತ್ತೀಚಿಗೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಡಿಸಿಎಂಗೆ ಪತ್ರ ಬರದು ಬಿಬಿಎಂಪಿಯಲ್ಲಿ ಮಾರ್ಷಲ್‌ಗಳ ಸಂಖ್ಯೆ ಹೆಚ್ಚಿದ್ದು, ವಾರ್ಷಿಕ ಕೋಟ್ಯಂತರ ರೂ. ಪಾಲಿಕೆಗೆ ಹೊರೆಯಾಗುತ್ತಿದೆ. ಇದರಿಂದ ಬಿಬಿಎಂಪಿ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಅಗತ್ಯ ಇಲ್ಲದಿದ್ದರೂ ಮಾರ್ಷಲ್‌ಗಳನ್ನು ನೇಮಿಸಲಾಗುತ್ತಿದೆ. ಜತೆಗೆ ಇವರ ಸೇವೆಯನ್ನು ಪಡೆದುಕೊಳ್ಳದೆ ಸುಳ್ಳು ಮಾಹಿತಿ ನೀಡಿ ಪಾಲಿಕೆಯಿಂದ ಕೋಟ್ಯಂತರ ರೂ. ಬಿಲ್ ಪಡೆಯಲಾಗುತ್ತಿದೆ ಎಂದು ದೂರು ಕೇಳಿಬಂದಿತ್ತು.
ಅಲ್ಲದೆ, ಮಾರ್ಷಲ್‌ಗಳು ಹಾಗೂ ಮುಖ್ಯಸ್ಥರ ಮಾಸಿಕ ಬಟವಾಡೆ 2.01 ಕೋಟಿ ರೂ.ನಂತೆ ವಾರ್ಷಿಕ 24.18 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. 2017ರಿಂದ ಈವರೆಗೆ 157.19 ಕೋಟಿ ರೂ. ಮೊತ್ತವನ್ನು ಪಾಲಿಕೆ ಭರಿಸಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಹಾಲಿ ಪಾಲಿಕೆಯ ಆರ್ಥಿಕ ಸ್ಥಿತಿ ಸರಿಯಿಲ್ಲದಿದ್ದರೂ ಅನಗತ್ಯವಾಗಿ ಮಾರ್ಷಲ್‌ಗಳ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ. ಕೋವಿಡ್ ಸ್ಥಿತಿಯಲ್ಲಿದ್ದ ಪರಿಸ್ಥಿತಿ ಈಗ ಇಲ್ಲ ಎಂಬ ವಾಸ್ತವ ಸಂಗತಿ ಗೊತ್ತಿದ್ದರೂ, ಪಾಲಿಕೆ ಅಧಿಕಾರಿಗಳ ಬೇಕೆಂದೇ ಮಾರ್ಷಲ್‌ಗಳ ಸೇವೆಯನ್ನು ದೊಡ್ಡ ಮಟ್ಟದಲ್ಲಿ ಮುಂದುವರಿಸುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ.
ಕಟ್ಟಡ ನಿರ್ಮಾಣ ನಿಗಾಕ್ಕೆ ಬಳಕೆ:
ಬಿಬಿಎಂಪಿಯಲ್ಲಿ ಹೆಚ್ಚುವರಿ ಮಾರ್ಷಲ್‌ಗಳು ಇದ್ದಾರೆಂಬ ಆರೋಪ ಹಿನ್ನೆಲೆಯಲ್ಲಿ ಕೆಲಸ ಇಲ್ಲದ ಕೆಲವರನ್ನು ಬಡಾವಣೆಯೊಂದರಲ್ಲಿ ಬಡಾವಣೆಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣವನ್ನು ಪತ್ತೆ ಹಚ್ಚಲು ಬಳಸಿಕೊಳ್ಳಲಾಗುತ್ತಿದೆ. ವೈಟ್‌ಫೀಲ್ಡ್ ಬಳಿಯ ಲೇಔಟ್ ಒಂದರಲ್ಲಿ ಈ ಸೇವೆ ಮೂಲಕ ಸ್ಥಳಿಯರು 10ಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆಂಬ ಮಾಹಿತಿ ದೊರೆತಿದೆ.
ಬಿಬಿಎಂಪಿಯಲ್ಲಿ ಮಾರ್ಷಲ್ ಗಳ ವಿವರ:
ಮಾರ್ಷಲ್ (ಸಾಮಾನ್ಯ) - 684
ಮಾರ್ಷಲ್ (ಭೂಭರ್ತಿ ಕೇಂದ್ರ) - 24
ಮಾರ್ಷಲ್ (ಕೆರೆ) - 42
ಜೆಸಿಒ - 18
ಹೆಚ್ಚುವರಿ ವಾರ್ಡ್ ಸೂಪರ್‌ವೈಸರ್ - 9
ಒಟ್ಟು ಮಾರ್ಷಲ್, ಮೇಲ್ವಿಚಾರಕರು - 777