ಬಿಬಿಎಂಪಿ: ಘನತ್ಯಾಜ್ಯ ಸಾಗಣೆಗೆ 3,820 ಕೋಟಿ ಮೊತ್ತದ ಟೆಂಡರ್

bbmp office
Published on

ಬೆಂಗಳೂರು: ರಾಜಧಾನಿಯಲ್ಲಿ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬಿಬಿಎಂಪಿಯು ಖಾಸಗಿ ಸಹಭಾಗಿತ್ವದಡಿ ಘನತ್ಯಾಜ್ಯವನ್ನು ಸಂಗ್ರಹಿಸಿ, ಸಾಗಣೆ ಮಾಡುವ ಜತೆಗೆ ಕಸ ಸಂಸ್ಕರಣಾ ಘಟಕಗಳಿಗೆ ರವಾನಿಸುವ ಬೃಹತ್ ಟೆಂಡರ್ ಆಹ್ವಾನದ ಬೆನ್ನಲ್ಲೇ, ಪ್ರಾಥಮಿಕ ಹಾಗೂ ದ್ವಿತೀಯ ಹಂತದದ ಕಸ ಸಾಗಿಸಲು 33 ಪ್ಯಾಕೇಜ್ ಅಡಿಯಲ್ಲಿ ಟೆಂಡರ್ ಕರೆಯಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿರುವ ವಿಧಾನಸಭಾ ಕ್ಷೇತ್ರವಾರು ಪ್ಯಾಕೇಜ್ ವಿಂಗಡಿಸಲಾಗಿದೆ. ದೊಡ್ಡ ಕ್ಷೇತ್ರಗಳಿಗೆ ಎರಡು ಪ್ಯಾಕೇಜ್ ಮಾಡಿದ್ದು, ವಾರ್ಷಿಕ 545.59 ಕೋಟಿ ರೂ. ಮೊತ್ತವನ್ನು ನಿಗದಿ ಮಾಡಲಾಗಿದೆ. ಒಟ್ಟು ಏಳು ವರ್ಷಕ್ಕೆ ಟೆಂಡರ್ ಅನ್ವಯವಾಗುವುದರಿಮದ ನಿವ್ವಳ ಮೊತ್ತವು 3,820 ಕೋಟಿ ರೂ. ಆಗಲಿದೆ. ಘನತ್ಯಾಜ್ಯ ಸಂಗ್ರಹ, ವಿಲೇವಾರಿ ಹಾಗೂ ಸಂಸ್ಕರಣೆಗೆ ಇಷ್ಟು ದೊಡ್ಡ ಮೊತ್ತದ ಟೆಂಡರ್ ಕರೆದಿರುವುದು ಇದೇ ಪ್ರಥಮವಾಗಿದೆ.

ದಸರಾ ಬಳಿಕ ಹೊಸ ವ್ಯವಸ್ಥೆ:

ಇತ್ತೀಚಿಗೆ ರಾಜ್ಯ ಸರ್ಕಾರ ತನ್ನ ಸಚಿವ ಸಂಪುಟ ಸಭೆಯಲ್ಲಿ ಘನತ್ಯಾಜ್ಯ ವಿಷಯಕ್ಕೆ ಸಂಬಂಧಿಸಿ ಎರಡು ವಿಷಯಗಳಲ್ಲಿ ಪ್ರತ್ಯೇಕ ಟೆಂಡರ್ ಆಹ್ವಾನಿಸಲು ಒಪ್ಪಿಗೆ ನೀಡಿತ್ತು. ಕಳೆದ ವಾರ ಸಂಸ್ಕರಣಾ ಘಟಕಗಳಿಗೆ ಕಸ ಸಾಗಿಸಿ ವೈಜ್ಞಾನಿಕವಾಗಿ ವಿಂಗಡಿಸಿ ಸಂಸ್ಕರಿಸಲು ಟೆಂಡರ್ ಕರೆಯಲಾಗಿತ್ತು. ಇದಕ್ಕೆ ಪೂರಕವಾಗಿ ಕಸ ಉತ್ಪತ್ತಿಯಾಗುವ ಸ್ಥಳಗಳಿಂದ ಸಂಗ್ರಹಿಸಿ ಅವುಗಳನ್ನು ಹೊಸದಾಗಿ ನಿಗದಿ ಮಾಡುವ ಕೇಂದ್ರಗಳಿಗೆ ರವಾನಿಸಲು ಈಗ ಪ್ರತ್ಯೇಕವಾದ ಟೆಂಡರ್ ಕರೆದಿದ್ದು, ಮೂರು ತಿಂಗಳಲ್ಲಿ ಅರ್ಹ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿ ಹೊಸ ವ್ಯವಸ್ಥೆಯಡಿ ಕಸ ವಿಲೇವಾರಿಯನ್ನು ನಿರ್ವಹಿಸಲು ಪಾಲಿಕೆ ನಿರ್ಧರಿಸಿದೆ.

ಪ್ರಸ್ತುತ ನಗರದಲ್ಲಿ ನಿತ್ಯ 5 ಸಾವಿರ ಮೆಟ್ರಿಕ್ ಟನ್ ಪ್ರಮಾಣದಷ್ಟು ಕಸ ಉತ್ಪತ್ತಿಯಾಗುತ್ತಿದೆ. 2030ರ ವೇಳೆಗೆ 7 ಸಾವಿರ ಮೆಟ್ರಿಕ್ ಟನ್‌ಗೆ ಏರಲಿದ್ದು, ಆ ಸಮಯದಲ್ಲಿ ಕಸ ವಿಲೇವಾರಿಗೆ ಹೆಚ್ಚಿನ ವಾಹನ ಹಾಗೂ ಸಿಬ್ಬಂದಿ ಬೇಕಾಗುತ್ತದೆ. ಇದನ್ನು ಗಮನಿಸಿ ಮೂಲದಲ್ಲಿಯೇ ತ್ಯಾಜ್ಯ ಸಂಗ್ರಹಣೆಯನ್ನು ವಿಂಗಡಿಸಿ ಸಂಸ್ಕರಣೆ ಘಟಕಗಳಿಗೆ ಸಾಗಿಸಿ ಅದರಿಂದ ವಿದ್ಯುತ್ ಅಥವಾ ಗೊಬ್ಬರವನ್ನಾಗಿ ತಯಾರಿಸುವ ಚಿಂತನೆ ಬಿಬಿಎಂಪಿ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net