18ಕ್ಕೆ ಸ್ಥಾಯಿ ಸಮಿತಿ ಚುನಾವಣೆ: ಮೂರು ಬಾರಿ ಮುಂದೂಡಲ್ಪಟ್ಟಿರುವ ಆಯ್ಕೆ ಪ್ರಕ್ರಿಯೆ

BBMP vvani
Published on

ಬೆಂಗಳೂರು: ಮೂರು ಬಾರಿ ಮುಂದೂಡಿಕೆಯಾಗಿರುವ ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಚುನಾವಣೆ ಜ.18ರಂದು ನಡೆಯಲಿದೆ. ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆ ಪ್ರಕ್ರಿಯೆ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಅಂದು ಬೆಳಗ್ಗೆ 8ಕ್ಕೆ ಆರಂಭವಾಗಲಿದೆ. 9.30ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತ (ಪ್ರಭಾರ) ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಮುಂದೂಡಿಕೆ: ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆದ ದಿನವೇ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರ ಆಯ್ಕೆ ನಡೆಯಬೇಕಿತ್ತು. ಆದರೆ, ಹಿಂದಿನ ಅವಧಿಯ ಸ್ಥಾಯಿ ಸಮಿತಿಗಳ ಅವಧಿ ಮುಕ್ತಾಯವಾಗದ ಕಾರಣ ನ್ಯಾಯಾಲಯದಿಂದ ಚುನಾವಣೆಗೆ ತಡೆ ತರಲಾಗಿತ್ತು. ಡಿ. 4ರಂದು ಚುನಾವಣೆ ಘೋಷಣೆ ಮಾಡಲಾಗಿತ್ತು. ಆದರೆ, ವಿಧಾನಸಭಾ ಉಪ ಚುನಾವಣೆ ಪ್ರಚಾರದಲ್ಲಿ ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದರಿಂದ ಕೋರಂ ಕೊರತೆ ಉಂಟಾಗಿತ್ತು. ಬಳಿಕ ಡಿ.30ರಂದು ಚುನಾವಣೆ ನಡೆಸಲು ವೇದಿಕೆ ಸಿದ್ಧಗೊಂಡರೂ, ಪೇಜಾವರ ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ಸದಸ್ಯರು ಬರಲಿಲ್ಲ. ಆಗಲೂ ಕೋರಂ ಕೊರತೆ ಹಾಗೂ ನಾಮಪತ್ರ ಸಲ್ಲಿಕೆಯಾಗದ ಕಾರಣ ಚುನಾವಣೆ ಮುಂದೂಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net