ಬಿಬಿಎಂಪಿ: ಹವಾಮಾನ ಕ್ರಿಯಾ ಕೋಶಕ್ಕಾಗಿ 7 ಫೆಲೋ ಆಯ್ಕೆ

Vijayavani-Featured-Image
Published on

ಬೆಂಗಳೂರು: ನಗರದಲ್ಲಿ ಹಸಿರು ಮನೆ ಅನಿಲ (ಜಿಎಚ್‌ಜಿ) ಹೊರಸೂಸುವಿಕೆ ಕಡಿಮೆ ಮಾಡಲು ಮತ್ತು ಹವಾಮಾನದಿಂದ ಉಂಟಾಗುವ ಅಪಾಯಗಳಿಗೆ ನಗರದ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಬೆಂಗಳೂರು ಹವಾಮಾನ ಕ್ರಿಯೆ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆ ಅಡಿಯಲ್ಲಿ 7 ಮಂದಿ ಫೆಲೋಗಳನ್ನು ಪಾಲಿಕೆ ಆಯ್ಕೆ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಯೋಜನೆಅನ್ನು ಕಾರ್ಯಗತಗೊಳಿಸಲು ಸಂಸ್ಥಾರೂಪದ ಕಾರ್ಯವಿಧಾನದಲ್ಲಿ ಬೆಂಗಳೂರು ಹವಾಮಾನ ಕ್ರಿಯಾ ಕೋಶವನ್ನು (ಸಿಎಸಿ) ಕಳೆದ ಫೆಬ್ರವರಿಯಲ್ಲಿ ಸ್ಥಾಪಿಸಲಾಗಿದೆ. ಇದರ ಅಧ್ಯಕ್ಷರನ್ನಾಗಿ ಪಾಲಿಕೆಯ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರನ್ನು ಮಾಡಲಾಗಿದೆ. ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮೇಲ್ವಿಚಾರಣೆಯಲ್ಲಿ ಸಿಎಸಿ ಕಾರ್ಯನಿರ್ವಹಿಸುತ್ತಿದೆ.

ಪರೀಕ್ಷೆ, ಸಂದರ್ಶನದ ಬಳಿಕ ಆಯ್ಕೆ:

ಹವಾಮಾನ ಬದಲಾವಣೆ ಹಾಗೂ ನಾಗರಿಕರ ಸಮಸ್ಯೆಗಳನ್ನು ಪರಿಹರಿಸಲು ಹೊಸ ಆಲೋಚನೆ, ಕೌಶಲ ಹಾಗೂ ನಾವೀನ್ಯತೆಗಳಿಂದ ನಗರದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹವಾಮಾನ ಕ್ರಿಯಾ ಕೋಶಕ್ಕೆ ಸಹಾಯ ಪಡೆಯಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಫೆಲೋಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಿದ್ದು, ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನ ಒಳಗೊಡ ಸ್ಪರ್ಧಾತ್ಮಕ ಮತ್ತು ಪಾರದರ್ಶಕ ಪ್ರಕ್ರಿಯೆ ಆಧರಿಸಿ 7 ಫೆಲೋಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇವರೆಲ್ಲರೂ ನವೆಂಬರ್‌ನಿಂದ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.

ಸ್ಥಳೀಯ ಸಮುದಾಯಗಳ ಸಹಯೋಗ:

ಸ್ಥಳೀಯ ಸಮುದಾಯಗಳ ಸಹಯೋಗ ಹಾಗೂ ತಂತ್ರಜ್ಞಾನದೊಂದಿಗೆ ನಗರದಾದ್ಯಂತ ನೀರಿನ ಅಭಾವವನ್ನು ನೀಗಿಸಲು ತೆರೆದ ಬಾವಿಗಳನ್ನು ಮರುಸ್ಥಾಪಿಸುವುದು. ಕೆರೆ, ಉದ್ಯಾನ ಹಾಗೂ ಸಮುದಾಯಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುವುದು. ಅಲ್ಲದೇ ಸಸಿಗಳನ್ನು ನೆಡಲು ಸೂಕ್ತವಾದ ಸ್ಥಳಗಳನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಈ ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ತೆರೆದ ಸ್ಥಳ, ಕೆರೆ-ಉದ್ಯಾನಗಳಲ್ಲಿ 80,000ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net