ಬಿಬಿಎಂಪಿಯಿಂದ ವೃಕ್ಷ ತಪಾಸಕರ ನೇಮಕಕ್ಕೆ ಶೋಧ

bbmp office
Published on

ಬೆಂಗಳೂರು: ನಗರದಲ್ಲಿ ರಸ್ತೆಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶಿಥಿಲಗೊಂಡಿರುವ ಮತ್ತು ಅಪಾಯ ಸ್ಥಿತಿಯಲ್ಲಿರುವ ಮರಗಳು, ರೆಂಬೆ-ಕೊಂಬೆಗಳನ್ನು ಗುರುತಿಸಿ ತೆರವುಗೊಳಿಸುವ ಹಿನ್ನೆಲೆಯಲ್ಲಿ ವೃಕ್ಷ ತಪಾಸಕರನ್ನು ನೇಮಿಸಿಕೊಳ್ಳಲು ಬಿಬಿಎಂಪಿ ಮುಂದಾಗಿದೆ.

ಇತ್ತೀಚಿಗೆ ನಗರದಲ್ಲಿ ಆಗಾಗ್ಗೆ ಮರಗಳು ಸೇರಿ ರೆಂಬೆ-ಕೊಂಬೆಗಳು ಧರೆಗುರುಳುತ್ತಿವೆ. ಇವುಗಳಿಂದ ನಾಗರಿಕರು ಹಾಗೂ ವಾಹನಗಳಿಗೆ ಹಾನಿ ಸಂಭವಿಸುತ್ತಿದ್ದು, ಬೀಳುವ ಸ್ಥಿತಿಯಲ್ಲಿರುವ ಮರಗಳ ತೆರವು ಕಾರ್ಯ ವಿಳಂಬವಾಗುತ್ತಿದೆ. ಪಾಲಿಕೆಯ ಅರಣ್ಯ ವಿಭಾಗದಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲದ ಕಾರಣ ದೂರು ಆಧರಿಸಿ ಮರ ತೆರವು ಮಾಡಲಾಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಾತ್ಕಾಲಿಕವಾಗಿ 10 ಮಂದಿ ವೃಕ್ಷ ತಪಾಸಕರನ್ನು ನಿಯೋಜಿಸಿಕೊಳ್ಳಲು ನಿರ್ಧರಿಸಲಾಗಿದೆ.

ಈ ವೃಕ್ಷ ತಪಾಸಕರು ಪಾಲಿಕೆ ಎಂಟೂ ವಲಯಗಳಲ್ಲಿ ಸಂಚರಿಸಿ ಅಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ಗುರುತಿಸಿ ವರದಿಯನ್ನು ಸಿದ್ಧಪಡಿಸಲಿದ್ದಾರೆ. ರಸ್ತೆಬದಿ, ಸಾರ್ವಜನಿಕ ಸ್ಥಳ, ಒಣಗಿದ ಮರಗಳು, ರೋಗಗ್ರಸ್ಥ ಮರಗಳು, ವಾಹನ ಸಂಚಾರಕ್ಕೆ ಅಡ್ಡಿಯಾಗಬಹುದಾದ ಮರ, ರೆಂಬೆ-ಕೊಂಬೆಗಳಿರುವ ಸ್ಥಳಗಳಿಗೆ ಖುದ್ದು ತೆರಳಿ ದತ್ತಾಂಶ ಸಂಗ್ರಹಿಸಲಿದ್ದಾರೆ. ಪ್ರತಿ ವಾರ ಈ ಮಾಹಿತಿಯನ್ನು ವಲಯ ಅಧಿಕಾರಿಗಳಿಗೆ ಸಲ್ಲಿಸಿದ ಬಳಿಕ ಸಮಗ್ರ ಮಾಹಿತಿಯನ್ನು ಕಲೆಹಾಕಲಾಗುತ್ತದೆ. ಸೆಪ್ಟೆಂಬರ್‌ನಿಂದ ಎರಡು ತಿಂಗಳು ಈ ದತ್ತಾಂಶ ಸಂಗ್ರಹ ಕಾರ್ಯ ನಡೆಸಲು ಪಾಲಿಕೆ ಅರಣ್ಯ ವಿಭಾಗ ಸಿದ್ಧತೆ ನಡೆಸಿದೆ.

ಸಹಾಯವಾಣಿಗೆ ದೂರು:

ನಗರದಲ್ಲಿ ಮಳೆ ಬಂದಾಗ ಹಲವೆಡೆ ಹತ್ತಾರು ಮರಗಳು ಧರೆಗುರುಳುತ್ತವೆ. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಧರೆಗುರುಳಿದ್ದನ್ನು ಜನರು ಪಾಲಿಕೆ ಗಮನಕ್ಕೆ ತ್ವರಿತವಾಗಿ ತರುತ್ತಿಲ್ಲ. ಇದರಿಂದ ತೆರವು ಕಾರ್ಯ ನಿಧಾನವಾಗುತ್ತಿದೆ. ಪ್ರತಿ ವಲಯದಲ್ಲೂ ಮರಗಳ ತೆರವಿಗೆ ಪ್ರತ್ಯೇಕ ತಂಡವನ್ನು ಅಗತ್ಯ ಉಪಕರಣಗಳು ಹಾಗೂ ವಾಹನದೊಂದಿಗೆ ಸಜ್ಜುಗೊಳಿಸಲಾಗಿರುತ್ತದೆ. ಹಾಗಾಗಿ ನಾಗರಿಕರು ಮರ ಬಿದ್ದಾಗ ಆ ಮಾಹಿತಿಯನ್ನು ಕಂಟ್ರೋಲ್ ರೂಂಗೆ ತಿಳಿಸಿದರೆ ಕಾಲಮಿತಿಯೊಳಗೆ ತೆರವುಗೊಳಿಸಲಾಗುತ್ತದೆ ಎಂದು ಆರಣ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net