

ಬೆಂಗಳೂರು: ಬಿಬಿಎಂಪಿಯು 2025-26ನೇ ಸಾಲಿನ ಕರಡು ಆಯವ್ಯಯದ ತಯಾರಿಕೆಯ ಸಿದ್ಧತೆ ಕಾರ್ಯ ಆರಂಭಿಸಿದ್ದು, ಅದಕ್ಕಾಗಿ ನಾಗರಿಕರಿಂದ ಸಲಹೆ - ಸೂಚನೆ ಪಡೆಯಲು ಮುಂದಾಗಿದೆ. ಫೆ.10ರೊಳಗೆ ಕಾಲಾವಕಾಶ ನೀಡಿದ್ದು, ಉತ್ತಮವಾದದನ್ನು ಆಯವ್ಯಯಕ್ಕೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.
ನಗರದ ನಾಗರಿಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (ಆರ್‌ಡಬ್ಲ್ಯುಎ) ಹಾಗೂ ಸಂಘ-ಸಂಸ್ಥೆಗಳು ತಮ್ಮ ಸಲಹೆ/ಸೂಚನೆಗಳನ್ನು ಸಲ್ಲಿಸಬಹುದಾಗಿದೆ. ಇದಕ್ಕಾಗಿ ಪಾಲಿಕೆಯ ಕೇಂದ್ರ ಕಚೇರಿಯ ಮುಖ್ಯ ದ್ವಾರದ ಬಳಿ ಸಲಹಾ ಪೆಟ್ಟಿಗೆ ಇರಿಸಿದ್ದು, ಇಲ್ಲಿಯೇ ಸಲಹೆಗಳನ್ನು ಸಲ್ಲಿಸಬಹುದಾಗಿದೆ ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಡಾ. ಕೆ.ಹರೀಶ್‌ಕುಮಾರ್ ಶುಕ್ರವಾರ ತಿಳಿಸಿದ್ದಾರೆ.
ಸಾರ್ವಜನಿಕರು ಪಾಲಿಕೆಯ ಇ-ಮೇಲ್ ಮೂಲಕವೂ ಸಲಹೆಗಳನ್ನು ಸಲ್ಲಿಸಬಹುದಾಗಿದೆ. ಸಂಸ್ಥೆಯು ನೀಡಿರುವ ಈ ಅವಕಾಶವನ್ನು ನಾಗರಿಕರು, ಸಂಘ-ಸಂಸ್ಥೆಗಳು ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.