

ಬೆಂಗಳೂರು: ಬಿಬಿಎಂಪಿಯಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಇನ್ನೆರಡು ದಿನಗಳಲ್ಲಿ ನಿಮ್ಮ ಮುಂದೆ ಇಡುತ್ತೇನೆ. ಯಾವುದೇ ದಾಖಲೆ ಬಿಡುಗಡೆ ಮಾಡುವುದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾನು ಪೆನ್ ಡ್ರೈವ್ ಬಿಡುಗಡೆ ಮಾಡಿದರೆ ನಕಲಿ ಎನ್ನುತ್ತಾರೆ. ಸಿಒಡಿ ಯನ್ನು ಜತೆಯಲ್ಲಿ ಇಟ್ಟುಕೊಂಡಿದ್ದಾರೆ. ದಾಖಲೆ ಬಿಡುಗಡೆ ಮಾಡಿದರೆ ಸಿಒಡಿ ತನಿಖೆ ಎನ್ನುತ್ತಾರೆ. ಅಧಿಕಾರಿಗಳು ಇವರು ಹೇಳಿದ ಹಾಗೆ ವರದಿ ಕೊಡುತ್ತಾರೆ ಎಂದು ತಿಳಿಸಿದರು.
3 ತಿಂಗಳಲ್ಲಿ ಕಾಂಗ್ರೆಸ್ ಬಣ್ಣ ಬಯಲು
ರಾಜ್ಯ ಕಾಂಗ್ರೆಸ್ ಸರ್ಕಾರದ ಲಂಚಾವತಾರದ ನಾಟಕಗಳ ಒಂದೊಂದೇ ಅಂಕ ತೆರೆದುಕೊಳ್ಳುತ್ತಿದೆ. ಸೀಸನ್ 1, ಸೀಸನ್ 2 ಎನ್ನುವ ರೀತಿಯಲ್ಲಿ ಎಲ್ಲವೂ ಬಯಲಾಗುತ್ತಿದೆ ಎಂದು ಮಾಜಿ ಸಿಎಂ ವಾಗ್ದಾಳಿ ನಡೆಸಿದರು. ಈ ಸರ್ಕಾರದ ಲಂಚಾವತಾರಕ್ಕೂ ಅಂತಿಮ ತೆರೆ ಬೀಳುವ ದಿನ ದೂರವಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ನನ್ನ ಪೆನ್ ಡ್ರೈವ್ ಖಾಲಿ ಇಲ್ಲ. ನಾನು ಇಡುವ ಸಾಕ್ಷ್ಯಕ್ಕೆ ಪ್ರತಿಯಾಗಿ ಆರೋಪಿತ ವ್ಯಕ್ತಿಯ ಮೇಲೆ ಕ್ರಮ ಜರಿಗಿಸುವ ಎದೆಗಾರಿಕೆ ಮುಖ್ಯಮಂತ್ರಿಗೆ ಇದೆಯಾ? ಇದ್ದರೆ ಹೇಳಲಿ ಎಂದು ಸವಾಲು ಹಾಕಿದರು.
40 ಪರ್ಸೆಂಟ್ ಡಿಮಾಂಡ್ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರು ಹಾದಿ ಬೀದಿಲಿ ಮಾತನಾಡುತ್ತಿದ್ದರು. ಅವರೇ ಬಾಣಲೆಯಿಂದ ಬೆಂಕಿಗೆ ಬಿದ್ದೆವು ಎಂದು ಮಾಧ್ಯಮಗಳಿಗೇ ಹೇಳಿದರು. ಆದರೆ ಈಗ ಅವರ ವರಸೆಯೇ ಬದಲಾಗಿದೆ ಎಂದು ಲೇವಡಿ ಮಾಡಿದರು.
ಪ್ರತಿದಿನ ನಾವು ಗ್ಯಾರಂಟಿ ಕೊಟ್ಟಿದ್ದೇವೆ ಕೊಚ್ಚಿಕೊಳ್ಳುತ್ತಿದ್ದೀರಿ. ನೀವೇನು ಕಾಂಗ್ರೆಸ್ ಕಚೇರಿಯಿಂದ, ನಿಮ್ಮ ಮನೆ ದುಡ್ಡಿನಿಂದ ಕೊಟ್ಟಿದ್ದೀರಾ..? ಅದಕ್ಕೆ ಬಣ್ಣಬಣ್ಣದ ಕೂಲಿಂಗ್ ಗ್ಲಾಸುಗಳನ್ನು ಹಾಕಿಕೊಂಡು ಜಾಹೀರಾತಿಗೆ ಪೋಸು ಕೊಡುವುದು ಬೇರೆ? ಮೂರೇ ತಿಂಗಳಿಗೇ ನಿಮ್ಮ ಬಣ್ಣ ಬಯಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಕಾವೇರಿ ಬಗ್ಗೆ ಕಾದು ನೋಡೋಣ
ಕಾವೇರಿ ತಗಾದೆಯ ಬಗ್ಗೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ ಎಂದು ಕೇಳಿದ್ದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ಕೋರ್ಟ್ ಏನು ಹೇಳುತ್ತದೆ ಎನ್ನುವುದನ್ನು ಕಾದು ನೋಡೋಣ. ಮೇಕೆದಾಟಿನಿಂದ ಪಾದಯಾತ್ರೆ ಮಾಡಿದ್ದರಲ್ಲವೆ? ಆ ಬಗ್ಗೆ ಏನು ತೀರ್ಮಾನ ಏನು ಮಾಡುತ್ತಾರೆ ಅಂತ ನೋಡೋಣ ಎಂದು ಕುಮಾರಸ್ವಾಮಿ ಉತ್ತರಿಸಿದರು.