

ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿ ನಡೆಸದೆ ಎರಡು ಬಾರಿ ಹಣ ಬಿಡುಗಡೆ ಮಾಡಿಸಿಕೊಂಡು ಬಿಬಿಎಂಪಿಗೆ 55.32 ಕೋಟಿ ರೂ. ಮೊತ್ತವನ್ನು ವಂಚಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
2022 ಹಾಗೂ 2024ರಲ್ಲಿ ಎರಡೂ ಬಾರಿಯೂ ಯಾವುದೇ ಕೆಲಸ ಕೈಗೊಳ್ಳದೆ ಪಾಲಿಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಷಾಮೀಲಾಗಿ ಅಷ್ಟೂ ಹಣವನ್ನು ಬಿಡುಗಡೆ ಮಾಡಿಸಿಕೊಂಡು ಹಗರಣ ಸೃಷ್ಟಿಸಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆರ್‌ಟಿಐ ಮೂಲಕ ಪಡೆದಿದ್ದು, ಲೋಕಾಯುಕ್ತಕ್ಕೆ ಸಲ್ಲಿಸಿ ತನಿಖೆ ನಡೆಸುವಂತೆ ಅವರು ಬುಧವಾರ ಆಗ್ರಹಿಸಿದರು.
ವಸತಿ ಸಚಿವರೂ ಆದ ಶಾಸಕ ಜಮೀರ್ ಅಹಮದ್ ಖಾನ್ ಪ್ರತಿನಿಧಿಸುವ ಚಾಮರಾಜಪೇಟೆ ಕ್ಷೇತ್ರದಲ್ಲಿ 2020-22ರ ಅವಧಿಯಲ್ಲಿ 47 ಕಾಮಗಾರಿ ನಡೆಸಲಾಗಿದೆ ಎಂದು 27.66 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 2024-25ನೇ ಸಾಲಿನಲ್ಲೂ ಇಷ್ಟೇ ಸಂಖ್ಯೆಯ ಕಾಮಗಾರಿಗಳಿಗೆ ಮತ್ತೆ 27.66 ಕೋಟಿ ರೂ. ಮೊತ್ತವನ್ನು ಗುತ್ತಿಗೆದಾರರು ಬಿಲ್ ಸಲ್ಲಿಸಿ ಹಣ ಪಡೆದಿದ್ದಾರೆ. ಈ ಬೃಹತ್ ಮೊತ್ತವನ್ನು ಬಿಡುಗಡೆ ಮಾಡುವ ಹಿಂದೆ ಕ್ಷೇತ್ರದ ಎಇ, ಎಇಇ ಹಾಗೂ ಇಇ ದರ್ಜೆಯ ಅಧಿಕಾರಿಗಳು ಸೇರಿ ಒಟ್ಟು 12 ಸಿಬ್ಬಂದಿಗಳ ಕೈವಾಡ ಇದೆ. ಜತೆಗೆ 19 ಮಂದಿ ಗುತ್ತಿಗೆದಾರರು ಎರಡೂ ಬಾರಿಯೂ ನಕಲಿ ದಾಖಲೆ ಸಲ್ಲಿಸಿ ಪಾಲಿಕೆಗೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದ್ದಾರೆ.
ವಿಶೇಷವೆಂದರೆ, 2015-16ರಲ್ಲಿ ನಡೆದಿದ ಹಗರಣದಲ್ಲಿ ಅಮಾನತ್ತಾಗಿದ್ದ ಇಬ್ಬರು ಇಂಜಿನಿಯರ್‌ಗಳು ಹಾಲಿ ಪ್ರಕರಣದಲ್ಲೂ ಸಿಲುಕಿದ್ದಾರೆ. ಆಗ ಪಾಲಿಕೆ ಆಯುಕ್ತರಾಗಿದ್ದ ಜಿ.ಕುಮಾರ್ ನಾಯಕ್ ಅವರು ಅಮಾನತುಗೊಳಿಸಿದ್ದರು. ಹಾಲಿ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿಯನ್ನೂ ಸೇವೆಯಿಂದ ಅಮಾನತುಗೊಳಿಸಿ ಇಲಾಖಾ ತನಿಖೆಗೊಳಪಡಿಸಬೇಕು. ಗುತ್ತಿಗೆದಾರರ ವಿರುದ್ಧ ಕಾನೂನು ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ.
‘ಕೈ’ ಮುಖಂಡನಿಂದಲೇ ದೂರು?:
ಚಾಮರಾಜಪೇಟೆ ಕ್ಷೇತ್ರ ವ್ಯಾಪ್ತಿಯ ಆಜಾದ್‌ನಗರ, ಕೆ.ಆರ್.ಮಾರುಕಟ್ಟೆ, ಚಾಮರಾಜಪೇಟೆ ಹಾಗೂ ಛಲವಾದಿಪಾಳ್ಯ ವಾರ್ಡ್‌ಗಳಲ್ಲಿ 3 ವರ್ಷದ ಅವಧಿಯಲ್ಲಿ 70 ಕೋಟಿ ರೂ.ಗೂ ಅಧಿಕ ಮೊತ್ತದ ಬಿಲ್‌ಅನ್ನು ಕಾಮಗಾರಿ ಕೈಗೊಳ್ಳದೆ ಬಿಡುಗಡೆ ಮಾಡಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕರೂ ಆದ ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ಬಿ.ಟಿ.ಶ್ರೀನಿವಾಸಮೂರ್ತಿ ಕಳೆದ ಮಾ.4ರಂದು ಕಾರ್ಯನಿರ್ವಾಹಕ ಇಂಜಿನಿಯರ್‌ಗೆ (ಪಶ್ಚಿಮ ವಿಭಾಗ) ಪತ್ರ ಬರೆದಿದ್ದರು. ಈ ಪತ್ರವನ್ನು ಪಾಲಿಕೆ ಮುಖ್ಯ ಆಯುಕ್ತ ಹಾಗೂ ಲೋಕಾಯುಕ್ತರಿಗೆ ಹಸ್ತಾಂತರಿಸಲಾಗಿದೆ.