ಪಿಒಪಿ ಗಣೇಶ ಮೂರ್ತಿ ತಯಾರಕರ ವಿರುದ್ಧ ಕ್ರಮಕ್ಕೆ ಬಿಬಿಎಂಪಿ ಹಿಂದೇಟು

pop
Published on

ಬೆಂಗಳೂರು: ಪರಿಸರಕ್ಕೆ ಮಾರಕವಾಗುವ ಪಿಒಪಿ ಗಣೇಶ ಮೂರ್ತಿ ತಯಾರಕರು ಹಾಗೂ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬಿಬಿಎಂಪಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ವರ್ಷದಿಂದ ವರ್ಷಕ್ಕೆ ಸಮಸ್ಯೆಯಾಗುತ್ತಿರುವ ಪಿಒಪಿ ಮೂರ್ತಿಗಳ ವಿಲೇವಾರಿ ಪಾಲಿಕೆಗೂ ಭಾರವೆನಿಸಿದೆ. ರಾಸಾಯನಿಕ ವಸ್ತುಗಳನ್ನು ಬಳಸಿ ತಯಾರಿಸಿರುವ ಇಂತಹ ಪಿಒಪಿ ಮೂರ್ತಿಗಳು ನೀರಿನಲ್ಲಿ ಮುಳುಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಂಪೂರ್ಣ ನಿಷೇಧ ಹೇರಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಮಂತಳಿ (ಎನ್‌ಜಿಟಿ) ಆದೇಶಿಸಿದೆ. ಈ ಆದೇಶವನ್ನು ಹೈಕೋರ್ಟ್ ಕೂಡ ಎತ್ತಿಹಿಡಿದಿದ್ದು, ನಿಯಮ ಉಲ್ಲಂಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪಾಲಿಕೆಗೆ ಸೂಚಿಸಿದೆ.

ಈ ಆದೇಶಗಳ ಜತೆಗೆ ಇತ್ತೀಚಿಗೆ ಅರಣ್ಯ ಹಾಗೂ ಪರಿಸರ ಸಚಿವರು ಪಿಒಪಿ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ಸಾಗಣೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ದನಿಗೂಡಿಸಿದ್ದರು. ಯಾವ ಮುಲಾಜಿಗೂ ಒಳಗಾಗದೆ ಕೇವಲ ಕಾನೂನು ವ್ಯಾಪ್ತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿ ವರ್ಗಕ್ಕೆ ತಾಕೀತು ಮಾಡಿದ್ದರು. ಈ ಸೂಚನೆ ಹೊರತಾಗಿಯೂ ಹೆಚ್ಚಿನ ಅಧಿಕಾರಿಗಳು ಕ್ರಮ ಕೈಗೊಳ್ಳಲು ಆಸಕ್ತಿಯನ್ನೇ ತೋರುತ್ತಿಲ್ಲ. ಇದರಿಂದ ನಗರದ ಹಲವೆಡೆ ಪಿಒಪಿ ಮೂರ್ತಿಗಳು ದೊಡ್ಡ ಸಂಖ್ಯೆಯಲ್ಲಿ ತಯಾರಾಗಿ ಮಾರಾಟಕ್ಕೆ ಅಣಿಗೊಂಡಿವೆ.

ಹೊರ ರಾಜ್ಯದವರಿಂದ ತಯಾರಿಕೆ:

ಬೆಂಗಳೂರು ನಗರದಲ್ಲಿ ದಶಕಗಳ ಹಿಂದೆ ಮಣ್ಣಿನಿಂದ ತಯಾರಿಸುವ ಗಣಪನ ಮೂರ್ತಿಗಳನ್ನಿಟ್ಟು ಪೂಜಿಸುವ ಪದ್ಧತಿ ಇದೆ. ಆದರೆ, ಕೆಲ ವರ್ಷಗಳಿಂದ ಒಡಿಶಾ, ಪಶ್ಚಿಮ ಬಂಗಾಳ, ಬಿಹಾರದ ಮೂರ್ತಿ ತಯಾರಕರು ನಗರಕ್ಕೆ ಆಗಮಿಸಿ ಪಿಒಇ ಮೂರ್ತಿಗಳ ತಯಾರಿಕೆಯಲ್ಲಿ ತಲ್ಲೀನರಾಗಿದ್ದಾರೆ. ಇವರಿಗೆ ಕೆಲ ಮಾರಾಟಗಾರರು ಬೆಂಬಲವಾಗಿ ನಿಂತಿರುವುದರಿಂದ ಮೂರ್ತಿ ತಯಾರಿಕೆಗೆ ಕಡಿವಾಣ ಬಿದ್ದಿಲ್ಲ. ಹೊಸ ವಿನ್ಯಾಸ, ಅಲಂಕಾರ ಹಾಗೂ ಸುಲಭವಾಗಿ ಕೊಂಡೊಯ್ಯುವ ಕಾರಣದಿಂದಾಗಿ ಪಿಒಪಿ ಗಣಪತಿ ಮೂರ್ತಿಗಳು ಯುವಜನರನ್ನು ಆಕರ್ಷಿಸಿವೆ. ಆರಂಭದಲ್ಲಿ ಕೆಲವರಷ್ಟೇ ಬಳಸುತ್ತಿದ್ದ ಇಂತಹ ಮೂರ್ತಿಗಳು ಈಗ ಎಲ್ಲೆಡೆ ಸಾರ್ವಜನಿಕ ಗಣೇಶೋತ್ಸವದ ಐಕಾನ್ ಆಗಿ ಬದಲಾಗಿದೆ.

ವಿಶೇಷವೆಂದರೆ ಪಿಒಪಿ ಮೂರ್ತಿಗಳು ಮೆರವಣಿಗೆ ವೇಳೆ ಹಾನಿಗೊಳ್ಳದು. ಈ ಕಾರಣದಿಂದಲೂ ಬೀದಿಗಳಲ್ಲಿ ಪೂಜಿಸುವ ಗಣಪತಿ ಮಂಡಳಿಗಳು ಪಿಒಪಿ ಮೂರ್ತಿಗಳತ್ತ ದೃಷ್ಟಿ ಹರಿಸಿದ್ದಾರೆ. ಕೆರೆ, ಕಲ್ಯಾಣಿಗಳಲ್ಲಿ ವಿಸರ್ಜಿಸುವ ವೇಳೆ ಪಿಒಪಿ ಮೂರ್ತಿಗಳನ್ನು ಮುಳುಗಿಸಲು ಪ್ರಯಾಸಪಡಬೇಕಿದೆ. ಜತೆಗೆ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ್ದನ್ನು ನೀರಿನಲ್ಲಿ ವಿಸರ್ಜಿಸಿದ್ದಲ್ಲಿ ಕೆರೆ, ಕಲ್ಯಾಣಿಗಳು ಮಲಿನವಾಗುತ್ತಿವೆ. ಇದು ಜಲಚರಗಳಿಗೆ ಅಪಾಯವನ್ನು ತಂದೊಡ್ಡಿವೆ. ಈ ಕಾರಣದಿಂದಾಗಿ ಪಿಒಪಿ ಮೂರ್ತಿ ತಯಾರಿಕೆ ಹಾಗೂ ಮಾರಾಟಕ್ಕೆ ಬಿಬಿಎಂಪಿ ನಿಷೇಧ ಹೇರಿದೆ.

ಲಕ್ಷ ಸಂಖ್ಯೆಯಲ್ಲಿ ಮೂರ್ತಿಗಳ ತಯಾರಿಕೆ: ಭಾದ್ರಪದ ಮಾಸದಲ್ಲಿ ಗಣೇಶ ಹಬ್ಬ ಬರುವುದಿದ್ದರೂ, ಎರಡು ತಿಂಗಳು ಮುನ್ನವೇ ಪಿಒಪಿ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಅದರಲ್ಲೂ ಪಾಲಿಕೆ ಗಡಿ ಪ್ರದೇಶದಲ್ಲಿರುವ ಜಾಗಗಳಲ್ಲೇ ಹೆಚ್ಚಾಗಿ ತಯಾರಿಸಲಾಗುತ್ತಿದೆ. ಆ ಸಮಯದಲ್ಲಿ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಯಾರಿಕೆ ವಸ್ತುಗಳನ್ನು ಜಪ್ತಿ ಮಾಡುವುದಿಲ್ಲ. ಈ ಅವಕಾಶ ಬಳಸಿಕೊಂಡು ತಯಾರಕರು ದೊಡ್ಡ ಸಂಖ್ಯೆಯಲ್ಲಿ ಮೂರ್ತಿಗಳನ್ನು ತಯಾರಿಸಿ ಇಡೀ ನಗರದೆಲ್ಲೆಡೆ ಮಾರಾಟಕ್ಕೆ ರವಾನಿಸುತ್ತಾರೆ. ಇನ್ನೇನು ಹಬ್ಬ ಆರಂಭವಾಗುವ ಕೆಲ ದಿನಗಳ ಮುನ್ನ ನೆಪ ಮಾತ್ರಕ್ಕೆ ಅಧಿಕಾರಿಗಳು ಸಭೆ ನಡೆಸಿ ಎಚ್ಚರಿಕೆ ನೀಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಹೀಗಾಗಿ ಪಿಒಪಿ ಮೂರ್ತಿಗಳ ತಯಾರಿಕೆ, ಮಾರಾಟಕ್ಕೆ ತಡೆ ಹಾಕಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಗಣೇಶೋತ್ಸವ ಸಮಿತಿಯ ಪದಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net