

ಬೆಂಗಳೂರು: ಮಹಾನಗರದಲ್ಲ್ಲಿ ಉಲ್ಬಣಿಸಿರುವ ಕಸದ ಸಮಸ್ಯೆ ನಿವಾರಿಸಲು ಬಿಬಿಎಂಪಿ ಹರಸಾಹಸ ನಡೆಸಿರುವಾಗಲೇ, ಹೈಕೋರ್ಟ್ ಮೆಟ್ಟಿಲೇರಿರುವ ಘನತ್ಯಾಜ್ಯ ವಿಲೇವಾರಿಗೆ ಮರು ಟೆಂಡರ್ ಆಹ್ವಾನಿಸುವ ನಿರ್ಧಾರವನ್ನು ಪಾಲಿಕೆ ಕೈಗೊಂಡಿದೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಈಗಾಗಲೇ ಆಹ್ವಾನಿಸಿದ್ದ ಟೆಂಡರ್ ಪ್ರಶ್ನಿಸಿ ಕೆಲವರು ಹೈಕೋರ್ಟ್ ಮರೆ ಹೋಗಿದ್ದರು. ಟೆಂಡರ್‌ನಲ್ಲಿ ಗುತ್ತಿಗೆದಾರರು ಭಾಗವಹಿಸುವಿಕೆ ಕಡಿಮೆ ಇತ್ತು. ಜತೆಗೆ ತಾಂತ್ರಿಕ ಕಾರಣವೊಡ್ಡಿ ಟೆಂಡರ್‌ನಲ್ಲಿ ಭಾಗವಹಿಸದಿರಲು ಕಾರಣಗಳನ್ನು ಗುರುತಿಸಿ ಹೊಸ ಅಂಶಗಳನ್ನು ಸೇರ್ಪಡೆಗೊಳಿಸಲಾಗಿದೆ. ಹಾಗಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿಯೇ ಮರು ಟೆಂಡರ್ ಕರೆಯಲಾಗುವುದು ಎಂದರು.
4 ಕಡೆ ಸಂಸ್ಕರಣೆಗೆ ಜಾಗ:
ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸವನ್ನು ನಗರದ ಹೊರಭಾಗದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಸ್ಕರಿಸಲು 4 ಕಡೆ ಸ್ಥಳಗಳನ್ನು ಗುರುತಿಸಲಾಗಿದೆ. ಆನೇಕಲ್ ಬಳಿಯ ಗೊಲ್ಲಹಳ್ಳಿಯಲ್ಲಿ 100 ಎಕರೆಯನ್ನು ಸರ್ಕಾರ ಮಂಜೂರು ಮಾಡಿದೆ. ಅದೇ ರೀತಿ ದೊಡ್ಡಬಳ್ಳಾಪುರದ ಬಳಿಯೂ 100 ಎಕರೆ (ಖಾಸಗಿ ಜಮೀನು ಸೇರಿ) ಲಭ್ಯವಾಗಲಿದೆ. ಇದಲ್ಲದೆ ಇನ್ನೂ ಎರಡು ಕಡೆ ಶೀಘ್ರ ಜಮೀನು ಪಾಲಿಕೆ ಸುಪರ್ದಿಗೆ ಬರಲಿದ್ದು, ಆ ವೇಳೆಗೆ ಟೆಂಡರ್ ಅಂತಿಮಗೊಳಿಸಿ ಹೊಸ ಜಾಗಗಳಲ್ಲೇ ತ್ಯಾಜ್ಯ ಸಂಸ್ಕರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಭೂ ಭರ್ತಿ ಕೇಂದ್ರಗಳ ಸುತ್ತ ಅಭಿವೃದ್ಧಿ:
ಯಲಹಂಕ ಬಳಿಯ ಮಿಟ್ಟಗಾನಹಳ್ಳಿ ಹಾಗೂ ಕಣ್ಣೂರು ಭೂ ಭರ್ತಿ ಪ್ರದೇಶದದಲ್ಲಿ ಕಸ ವಿಲೇವಾರಿ ವಿಚಾರವಾಗಿ ಸ್ಥಳೀಯರಿಂದ ಆಗಿದ್ದ ಸಮಸ್ಯೆ ಬಹುತೇಕ ಬಗೆಹರಿಸಲಾಗಿದೆ. ಗುತ್ತಿಗೆದಾರರ ನಡುವೆ ಇದ್ದ ಭಿನ್ನಾಭಿಪ್ರಾಯವನ್ನೂ ನಿವಾರಿಸಲಾಗಿದೆ. ಭೂ ಭರ್ತಿ ಸುತ್ತಲಿನ ಹಳ್ಳಿಗಳಲ್ಲಿ ಮೂಲಸೌಕರ್ಯ ಸೇರಿ ಇತರ ಸೌಲಭ್ಯ ಒದಗಿಸಲು 500 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿದ್ದು, ಶೀಘ್ರವೇ ಕೆಲಸ ಆರಂಭಿಸಲಾಗುವುದು. ಈ ಬಗ್ಗೆ ಹಳ್ಳಿಗರೊಂದಿಗೆ ನಡೆಸಿದ ಮಾತುಕತೆ ಲಪ್ರದವಾಗಿದ್ದು, ಭಾನುವಾರದಿಂದಲೇ ತ್ಯಾಜ್ಯ ವಿಲೇವಾರಿ ಮೊದಲಿನ ಸ್ಥಿತಿಗೆ ಬಂದಿದೆ. ಆದರೂ, ಅಲ್ಲಲ್ಲಿ ಉಂಟಾಗಿದ್ದು, ಕಸದ ಸಮಸ್ಯೆಯನ್ನು ಪೂರ್ಣವಾಗಿ ನಿವಾರಿಸಲಾಗುವುದು ಎಂದು ಹೇಳಿದರು.
ಲಿಚೆಟ್ ಸಂಸ್ಕರಣೆಗೆ ಕ್ರಮ:
ಮಿಟ್ಟಗಾನಹಳ್ಳಿ ಭೂ ಭರ್ತಿ ಘಟಕದಲ್ಲಿ 275 ಕೋಟಿ ಲೀ. ಪ್ರಮಾಣದಷ್ಟು ಲಿಚೆಟ್ ಸಂಗ್ರಹವಾಗಿದ್ದು, ರಾಡಾರ್ ಸರ್ವೆ ಕೈಗೊಳ್ಳಲಾಗಿದೆ. ಅದನ್ನು ಸಂಸ್ಕರಿಸಲು ಸದ್ಯ 50 ಕೆಎಲ್‌ಡಿ ಸಾಮರ್ಥ್ಯದ ಎರಡು ಘಟಕಗಳಿವೆ. ಈ ಘಟಕಗಳಿಂದ ಪೂರ್ಣವಾಗಿ ಸಂಸ್ಕರಿಸಲು ಸಾಧ್ಯವಾಗದ ಕಾರಣ ಹೊಸದಾಗಿ 2 ಎಂಎಲ್‌ಡಿ ಘಟಕ ಸ್ಥಾಪಿಸಿ 3-4 ವರ್ಷಗಳಲ್ಲಿ ಸಮಸ್ಯೆಯನ್ನು ಪೂರ್ಣವಾಗಿ ಬಗೆಹರಿಸಲು 474 ಕೋಟಿ ರೂ. ಮೊತ್ತದ ಟೆಂಡರ್ ಆಹ್ವಾನಿಸಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದರು.