ಬಿಬಿಎಂಪಿ ವಲಯವಾರು ಪೌರಕಾರ್ಮಿಕರ ಖಾಯಂ ಪಟ್ಟಿ ಪ್ರಕಟ

bbmp office
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನೇರ ವೇತನ ಪಾವತಿ ವ್ಯವಸ್ಥೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಮೇ 1ರಂದು ಕಾಯಂ ನೇಮಕಾತಿ ಆದೇಶ ಪತ್ರ ವಿತರಿಸಲಿದ್ದು, ಆಯ್ಕೆ ಆದವರ ವಲಯವಾರು ಪಟ್ಟಿಯನ್ನು ಪಾಲಿಕೆಯು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಪೌರಕಾರ್ಮಿಕರ ಒಳಿತಿಗಾಗಿ ಪಾಲಿಕೆ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ 12,692 ನೇರ ವೇತನ ಪೌರಕಾರ್ಮಿಕರನ್ನು ಖಾಯಂ ಮಾಡಿಕೊಳ್ಳುತ್ತಿದ್ದೇವೆ. ಈ ಕಾರ್ಯದಲ್ಲಿ ಪಾಲಿಕೆಯ ವಿವಿಧ ವಿಭಾಗಗಳು ಬಹಳ ಶ್ರಮವಹಿಸಿ ಕೆಲಸ ಮಾಡಿರುವುದು ಅಭಿನಂದನೀಯ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್.ಉಮಾಶಂಕರ್ ಅವರು ಗುರುವಾರ ಹೇಳಿದರು.

ಮೇ 1ರಂದು ನೇಮಕಾತಿ ಆದೇಶ ವಿತರಣೆ:

ಪೌರಕಾರ್ಮಿಕರನ್ನು ಖಾಯಂ ಮಾಡುವ ವೇಳೆ ಸಾಕಷ್ಟು ದೂರು, ಮೋಸ, ದುರುಪಯೋಗಕ್ಕೆ ಯಾವ ಅಧಿಕಾರಿಗಳೂ ಆಸ್ಪದ ನೀಡದೆ ಪ್ರಕ್ರಿಯೆಯನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಖಾಯಂ ಆದ ನಂತರ ಪೌರಕಾರ್ಮಿಕರು ಮುಂದಿನ ದಿನಗಳಲ್ಲಿ ನೆಮ್ಮದಿ ಜೀವನ ಸಾಗಿಸಲು ಅನುಕೂಲವಾಗಲಿದೆ. ಮೇ 1ರಂದು ರಾಜ್ಯ ಸರ್ಕಾರದ ಆಯೋಜಿಸಲಿರುವ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ನೀಡಲಾಗುವುದು ಎಂದು ಅವರು ತಿಳಿಸಿದರು.

ಪ್ರಸ್ತುತ ಪಾಲಿಕೆಯಲ್ಲಿ 15,400 ಪೌರಕಾರ್ಮಿಕರು ನೇರ ವೇತನ ಪಾವತಿ ವ್ಯವಸ್ಥೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ನೇಮಕಾತಿ ಷರತ್ತು ಪೂರೈಸುವ 12,692 ಮಂದಿಗೆ ಕಾಯಂ ಮಾಡಿಕೊಳ್ಳಲಾಗುತ್ತದೆ. ಇವರೆಲ್ಲರ ಅಂತಿ ಪಟ್ಟಿ ಸಿದ್ಧವಾದ ಬಳಿಕ ಪೊಲೀಸ್ ತಪಾಸಣೆ ಹಾಗೂ ಮೀಸಲಾತಿ ಪ್ರಮಾಣಪತ್ರದ ಪರಿಶೀಲನೆ ನಡೆದಿದೆ. ಈವರೆಗೆ ಎಂಟೂ ವಲಯಗಳಲ್ಲಿ 10,290 ಪೌರಕಾರ್ಮಿಕರ ಪ್ರಮಾಣಪತ್ರ ಪರಿಶೀಲನೆ ಮುಗಿದಿದ್ದು, ಬಾಕಿ ಉಳಿದಿರುವುದನ್ನು ಶೀಘ್ರವೇ ಪೂರ್ಣಗೊಳಿಸಲು ಪಾಲಿಕೆ ಅಧಿಕಾರಿಗಳು ಕಸರತ್ತು ನಡೆಸಿದ್ದಾರೆ.

ವಲಯವಾರು ಆಯ್ಕಯಾದವರ ವಿವರ:

ಪೂರ್ವ 2341

ಪಶ್ಚಿಮ 2018

ದಕ್ಷಿಣ 3012

ಯಲಹಂಕ 808

ಮಹದೇವಪುರ 1369

ಬೊಮ್ಮನಹಳ್ಳಿ 1019

ಆರ್‌ಆರ್‌ನಗರ 1118

ದಾಸರಹಳ್ಳಿ 468

ಒಟ್ಟು 10,290

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net