ಬಿಬಿಎಂಪಿ ಆಸ್ತಿತೆರಿಗೆ ರಿಯಾಯಿತಿ ಅವಧಿ ವಿಸ್ತರಣೆ

bbmp office
Published on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಆಸ್ತಿತೆರಿಗೆ ಮೇಲೆ ಶೇ.5 ರಿಯಾಯಿತಿಯೊಂದಿಗೆ ಪಾವತಿಸುವ ಗಡುವನ್ನು ಮೇ 31ರವರೆಗೂ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಪ್ರಸಕ್ತ ಸಾಲಿನ ಮೊದಲ ತಿಂಗಳ ವರೆಗೂ ಶೇ.5 ರಿಯಾಯಿತಿ ಸೌಲಭ್ಯವನ್ನು ಸ್ವತ್ತುದಾರರಿಗೆ ನೀಡಲಾಗಿತ್ತು. ಪ್ರತಿವರ್ಷದಂತೆ ಈ ಬಾರಿಯೂ, ಎರಡನೇ ತಿಂಗಳಲ್ಲೂ ರಿಯಾಯಿತಿ ನೀಡುವ ಸಂಬಂಧ ಪಾಲಿಕೆ ಆಡಳಿತಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದನ್ನು ಪರಿಗಣಿಸಿ ಸರ್ಕಾರವು ನಗರಾಭಿವೃದ್ಧಿ ಇಲಾಖೆ ಮೂಲಕ ಮಂಗಳವಾರ ಆದೇಶ ಪ್ರಕಟಿಸಿದೆ.

ಸರ್ಕಾರದ ಈ ಆದೇಶ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ಸ್ವತ್ತುದಾರರಿಗೆ (ವಸತಿ, ವಾಣಿಜ್ಯವೂ ಸೇರಿ) ಅನ್ವಯವಾಗಲಿದೆ. ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸುವವರಿಗೆ ಶೇ.5 ರಿಯಾಯಿತಿ ಸಿಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಹಿಂದಿನ ಸಾಲಿನಲ್ಲಿ ಒಂದು ಬಾರಿ ಪಾವತಿ ಯೋಜನೆ (ಒಟಿಎಸ್) ಜಾರಿ ಮಾಡಲಾಗಿತ್ತು. ಈ ಯೋಜನೆಯಡಿ ಹೆಚ್ಚಿನ ವರ್ಷಗಳಿಗೆ ಬಾಕಿ ಉಳಿಸಿಕೊಂಡಿದ್ದ ಸ್ವತ್ತುದಾರರು ಅಸಲು ಪಾವತಿಸಿದರೆ ದಂಡದ ಹಣಕ್ಕೆ ಮನ್ನಾ ಮಾಡಲಾಗಿತ್ತು. ಈ ಸೌಲಭ್ಯ ಪಡೆದುಕೊಳ್ಳಲು ವಿವಿಧ ಅವಧಿಗಳಲ್ಲಿ ಮೂರು ಬಾರಿ ಆದೇಶ ಪ್ರಕಟಗೊಂಡು ನವೆಂಬರ್‌ವರೆಗೂ ಸಮಯ ವಿಸ್ತರಿಸಲಾಗಿತ್ತು. ಈ ಸಾಲಿನಲ್ಲಿ ಒಟಿಎಸ್ ಸೌಲಭ್ಯ ಇರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net