

ಬೆಂಗಳೂರು: ಸ್ವತ್ತಿನ ಮಾಲೀಕರಿಗೆ ತಿಳಿಯದ ಹಾಗೆ ನಕಲಿ ದಾಖಲೆ ಬಳಸಿ ಅನ್ಯರಿಗೆ ಮಾರಾಟ ಮಾಡಿದ್ದ ನಿವೇಶನಕ್ಕೆ ಬಿ ಖಾತೆ ನೀಡಿದ್ದ ಪಾಲಿಕೆ ಅಧಿಕಾರಿಗಳು, ಈಗ ತಮ್ಮ ತಪ್ಪನ್ನು ಸರಿಪಡಿಸದೆ ಕೋರ್ಟ್‌ನತ್ತ ಬೆಟ್ಟು ಮಾಡಿ ಕರ್ತವ್ಯದಿಂದ ನುಣುಚಿಕೊಳ್ಳುತ್ತಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಇತ್ತೀಚಿಗೆ ನಗರದಲ್ಲಿ ನಗರದಲ್ಲಿ ಸೈಟ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಪಾಲಿಕೆಯು ತನ್ನಲ್ಲಿರುವ ದಾಖಲೆ ಅನ್ವಯ ಸ್ವತ್ತುದಾರರಿಗೆ ಖಾತಾ ನೀಡಲು ವಿಳಂಬ ಮಾಡುತ್ತಿದೆ. ಜತೆಗೆ ನೈಜ ಸ್ವತ್ತುದಾರರ ಅಹವಾಲು ಆಲಿಸದೆ ಅನ್ಯ ಇಲಾಖೆಯತ್ತ ಸಾಗಹಾಕುತ್ತಿರುವುದು ನಕಲಿ ದಾಖಲೆ ಸೃಷ್ಟಿಸುವವರಿಗೆ ಪರೋಕ್ಷವಾಗಿ ಬೆಂಬಲ ನೀಡಿದಂತಾಗಿದೆ. ಇಂತಹ ಪ್ರಕರಣಗಳು ಪದೇ ಪದೆ ಮರುಕಳಿಸುತ್ತಿದ್ದರೂ, ಪಾಲಿಕೆ ಕಂದಾಯ ವಿಭಾಗವು ಮೂಲ ಸ್ವತ್ತುದಾರರಿಗೆ ನ್ಯಾಯ ಕೊಡಿಸದೆ ಕೇವಲ ಆಸ್ತಿತೆರಿಗೆ ಪಾವತಿಸಿಕೊಳ್ಳುವುದಕ್ಕಷ್ಟೇ ಸೀಮಿತವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಉಪನೋಂದಣಾಧಿಕಾರಿ ಪತ್ರಕ್ಕಿಲ್ಲ ಕಿಮ್ಮತ್ತು:
ಬಿಬಿಎಂಪಿಯ ಯಲಹಂಕ ವಲಯದ ರಾಚೇನಹಳ್ಳಿ ಗ್ರಾಮದಲ್ಲಿ 5,500 ಚದರ ಅಡಿ ವಿಸ್ತೀರ್ಣ ಸೈಟ್‌ಅನ್ನು ಕೆ.ಎನ್.ಹನುಮಂತರಾಯಪ್ಪ ಮಾಲೀಕತ್ವ ಹೊಂದಿದ್ದರು. ಸುಂಕ ಮತ್ತು ಕೇಂದ್ರೀಯ ಅಬಕಾರಿ ಸಹಕಾರ ಲೇಔಟ್‌ನಲ್ಲಿ ವರ್ಷಗಳ ಹಿಂದೆಯೇ ಎ ಖಾತಾ ದಾಖಲೆಯೊಂದಿಗೆ ನೋಂದಣಿಯಾಗಿತ್ತು. ಆದರೆ, ಕಳೆದ ವರ್ಷ ಖಾಸಗಿ ವ್ಯಕ್ತಿಯೊಬ್ಬರು ಈ ಸೈಟ್‌ಗೆ ನಕಲಿ ದಾಖಲೆಗಳನ್ನು ಬಳಸಿಕೊಂಡು ಬಿದರಹಳ್ಳಿ ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿ ಸ್ವತ್ತು ತನ್ನದಾಗಿಸಿಕೊಂಡಿದ್ದರು. ಈ ಅಕ್ರಮ ತಡವಾಗಿ ಅರಿವಿಗೆ ಬಂದೊಡನೆ ಸಬ್‌ರಿಜಿಸ್ಟರ್ ಕಚೇರಿಗೆ ದೂರು ನೀಡಿದರು. ದೂರು ಆಲಿಸಿ ಸೈಟ್ ದಾಖಲೆ ಪರಾಮರ್ಶೆಗೆ ಪಾಲಿಕೆ ಕಚೇರಿಗೆ ಕಳುಹಿಸಿ ನಕಲಿ ನೋಂದಣಿಯಾಗಿರುವುದನ್ನು ದೃಢಪಡಿಸಿಕೊಂಡಿದ್ದರು. ಜತೆಗೆ ತಪ್ಪಿತಸ್ಥರ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿ ನಕಲಿ ನೋಂದಣಿಯನ್ನು ರದ್ದುಪಡಿಸಲು ಐಜಿಆರ್‌ಗೆ ಪತ್ರ ಬರೆದಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ ನಕಲು ಮಾಡಿದ್ದ ವ್ಯಕ್ತಿ ಹೈಕೋರ್ಟ್‌ಗೆ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು. ವಿಚಾರಣೆ ಬಳಿಕ ತಡೆಯಾಜ್ಞೆ ತೆರವುಗೊಳಿಸಿ ತಪ್ಪು ನಡೆದಿರುವುದಕ್ಕೆ ಕಾನೂನು ಪ್ರಕಾರ ದೂರು ದಾಖಲಿಸಲು ಆದೇಶಿಸಿತ್ತು. ಇದರನ್ವಯ ಮತ್ತೆ ಠಾಣೆಯಲ್ಲಿ ದೂರು ನೀಡಿ ಎಫ್ಐಆರ್ ದಾಖಲಾಗಿದೆ. ಇದೇ ವೇಳೆ ಯಲಹಂಕ ವಲಯದ ಕಂದಾಯ ವಿಭಾಗದ ಅಧಿಕಾರಿಗಳು ಸೈಟ್ ಸಾಚಾತನ ಸಂಬಂಧ ಎರಡನೇ ಬಾರಿ ತಮ್ಮ ವರದಿಯನ್ನು ಮೇಲಾಧಿಕಾರಿಗೆ ಸಲ್ಲಿಸಿದ್ದರು. ಇದರಲ್ಲಿ ಸದರಿ ಸೈಟ್ ಬಿ ವಹಿಯಲ್ಲಿದ್ದು ಅಧಿಕಾರಿಯ ಸಹಿ ಇಲ್ಲವೆಂದು ತಿಳಿಸಿದ್ದರು. ಇದನ್ನಾಧರಿಸಿ ನಕಲಿ ದಾಖಲೆ ಮೂಲಕ ನೋಂದಣಿ ಆಗಿದ್ದನ್ನು ರದ್ದುಪಡಿಸುವ ಬದಲು ವಲಯ ಉಪ ಆಯುಕ್ತರು ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಆದೇಶಿಸಿದ್ದಾರೆ.
ಸಿಬ್ಬಂದಿ ರಕ್ಷಣೆಗೆ ಅಧಿಕಾರಿ ವರ್ಗ?:
ಬಿಬಿಎಂಪಿಯ ಹೊಸ ವಲಯಗಳಲ್ಲಿ ಸೈಟ್‌ಗಳನ್ನು ನಕಲಿ ದಾಖಲೆ ಬಳಸಿ ಕಬ್ಜ ಮಾಡುವ ಪ್ರಕರಣಗಳು ನಡೆಯುತ್ತಿವೆ. ಇಂತಹ ಪ್ರಕರಣಗಳು ಯಲಹಂಕ, ಮಹದೇವಪುರ ಹಾಗೂ ಆರ್.ಆರ್.ನಗರ ವಲಯಗಳಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಇತ್ತೀಚಿಗೆ ಸರ್ಕಾರ ಸ್ವತ್ತುಗಳಿಗೆ ಇ-ಖಾತಾ ಕಡ್ಡಾಯಗೊಳಿಸುವ ಸಂದರ್ಭದಲ್ಲಿ ನೂರಾರು ನಿವೇಶನಗಳನ್ನು ಅನ್ಯರ ಹೆಸರನ್ನು ಕಂದಾಯ ದಾಖಲೆಯಲ್ಲಿ ನಮೂದಿಸಿ ವಂಚಿಸಲಾಗಿದೆ. ಇದರ ವಿರುದ್ಧ ತನಿಖೆ ನಡೆಸುವುದಾಗಿ ಹೇಳಿದ್ದ ಕಂದಾಯ ವಿಭಾಗದ ಮುಖ್ಯಸ್ಥರು ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳದಿರುವುದು ನಕಲಿ ಪ್ರಕರಣಗಳು ಹೆಚ್ಚಲು ಅವಕಾಶ ಮಾಡಿಕೊಟ್ಟಿದೆ ಎಂದು ನಾಗರಿಕರು ದೂರಿದ್ದಾರೆ.