ಬಿಬಿಎಂಪಿ: ಪಾರ್ಕಿಂಗ್ ತೆರಿಗೆ ಇನ್ನಷ್ಟು ಕಡಿತ ಸಾಧ್ಯತೆ

Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ವಸತಿ ಕಟ್ಟಡಗಳಲ್ಲಿನ ಪಾರ್ಕಿಂಗ್ ಸ್ಥಳಕ್ಕೆ ಘಟಕವಾರು ಪ್ರದೇಶ ಮೌಲ್ಯ (ಯುಎವಿ) ಮಾದರಿಯಲ್ಲಿ ತೆರಿಗೆ ನಿಗದಿ ಸಂಬಂಧ ಇನ್ನಷ್ಟು ಕಡಿತ ಮಾಡುವ ಸಾಧ್ಯತೆ ಇದೆ.

ಇತ್ತೀಚಿಗಷ್ಟೇ ಪಾಲಿಕೆಯು ವಸತಿ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ವಾಹನ ನಿಲುಗಡೆ ಸಂಬಂಧ ಆಸ್ತಿತೆರಿಗೆ ವೇಳೆ ಶುಲ್ಕ ಸಂಗ್ರಹಿಸಲು ಕರಡು ಅಧಿಸೂಚನೆ ಹೊರಡಿಸಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ಕೆಲ ಆಕ್ಷೇಪಣೆ ಹಾಗೂ ಸಲಹೆಗಳು ಸಲ್ಲಿಕೆಯಾಗಿವೆ. ಇವುಗಳನ್ನು ಪರಿಶೀಲಿಸಿ ವಸತಿಗೆ ಮಾತ್ರ ಅನ್ವಯವಾಗುವಂತೆ ಇನ್ನಷ್ಟು ಶುಲ್ಕ ಕಡಿತ ಮಾಡಬಹುದು ಎಂಬ ಪ್ರಸ್ತಾವನೆಯನ್ನು ಪಾಲಿಕೆಯು ಸರ್ಕಾರಕ್ಕೆ ಸಲ್ಲಿಸಿದೆ.

ಕರಡು ಅಧಿಸೂಚನೆಯಲ್ಲಿ ವಾಣಿಜ್ಯ ಕಟ್ಟಡಗಳ ಮಾಲೀಕರಿಗೆ ಅನುಕೂಲವಾಗುವ ರೀತಿ ಶುಲ್ಕ ಪರಿಷ್ಕರಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಸಮಜಾಯಿಷಿ ನೀಡಿದ್ದ ಪಾಲಿಕೆ ಆಯುಕ್ತರು, ವಸತಿ ಕಟ್ಟಡಗಳಿಗೆ ವಲಯವಾರು ಇದ್ದ ಶುಲ್ಕವನ್ನು ಒಂದೇ ಸ್ಲಾಬ್ ಮಾಡಿದ್ದು, ಒಂದು ವಲಯದಲ್ಲಿನ ಸ್ವತ್ತುಗಳಿಗೆ ಮಾತ್ರ ಶುಲ್ಕ ತುಸು ಹೆಚ್ಚಳವಾಗಿದೆ. ಇನ್ನುಳಿದ ವಲಯಗಳಿಗೆ ಕಡಿಮೆ ಶುಲ್ಕ ನಿಗದಿಯಾಗಿದೆ ಎಂದು ಹೇಳಿದ್ದರು. ಆದರೂ, ವಾಣಿಜ್ಯ ಕಟ್ಟಡಗಳಿಗೆ ಗಣನೀಯ ಪ್ರಮಾಣದ ಶುಲ್ಕ ಕಡಿತದಿಂದ ಪಾಲಿಕೆಗೆ ಆದಾಯ ಖೋತಾ ಆಗಲಿದೆ ಎಂಬುದನ್ನು ಮುಖ್ಯ ಆಯುಕ್ತರು ಒಪ್ಪಿಕೊಂಡಿದ್ದರು.

ಕರಡು ಅನ್ವಯ ವಸತಿ ಕಟ್ಟಡಗಳಿಗೆ ಪ್ರತಿ ಚದರ ಅಡಿಗೆ 2 ರೂ. ಶುಲ್ಕ ನಿಗದಿಯಾಗಿದೆ. ಇದರಲ್ಲಿ ಇನ್ನೂ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ. ಅಂತಿಮ ಅಧಿಸೂಚನೆ ಹೊರಡಿಸುವ ವೇಳೆ ಶುಲ್ಕ ಕಡಿತ ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ ಎಂಬುದಾಗಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸುಳಿವು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net