ಬಿಬಿಎಂಪಿ: ಮೊದಲ ದಿನವೇ 2 ಲಕ್ಷಕ್ಕೂ ಅಧಿಕ ಮೂರ್ತಿಗಳ ವಿಸರ್ಜನೆ

ganesha imression
Published on

ಬೆಂಗಳೂರು: ಗೌರಿ ಗಣೇಶ ಹಬ್ಬದ ಹಿನ್ನೆಲೆ ಬಿಬಿಎಂಪಿಯು ಮೂರ್ತಿಗಳ ವಿಸರ್ಜನೆಗೆ ವಿಶೇಷ ವ್ಯವಸ್ಥೆ ಕಲ್ಪಿಸಿದ್ದು, ಬರೋಬರಿ 2.19 ಲಕ್ಷ ಸಂಖ್ಯೆಯಷ್ಟು ಗಣಪತಿ ಮೂರ್ತಿಗಳನ್ನು ವಿವಿಧ ಕಲ್ಯಾಣಿಗಳಲ್ಲಿ ವಿಸರ್ಜಿಸಲಾಗಿದೆ.

ಗಣಪತಿ ಹಬ್ಬದ ಮೊದಲೇ ದಿನವೇ ನಗರದ ವಿವಿಧೆಡೆ ಹೆಚ್ಚಿನ ಸಂಖ್ಯೆಯ ಮುರ್ತಿಗಳನ್ನು ಸಾರ್ವಜನಿಕರು ವಿಸರ್ಜಿಸಿದ್ದಾರೆ. ಇವುಗಳಲ್ಲಿ ಹೆಚ್ಚಿನವು ಮನೆಗಳಲ್ಲಿ ಪೂಜಿಸಿದ್ದ ಮೂರ್ತಿಗಳಾಗಿವೆ.

ಪಾಲಿಕೆಯಿಂದ 41 ಕೆರೆಗಳ ಬಳಿ ಕಲ್ಯಾಣಿಗಳು ಹಾಗೂ ವಿವಿಧ ಬಡಾವಣೆಗಳಲ್ಲಿ 489 ಸಂಖ್ಯೆಯಷ್ಟು ತಾತ್ಕಾಲಿಕ ಸಂಚಾರಿ ವಾಹನಗಳನ್ನು ಕಲ್ಪಿಸಲಾಗಿದೆ. ಬುಧವಾರ ಮಳೆ ಬಂದ ಕಾರಣ ಸಂಜೆ ಬಳಿಕ ವಿಸರ್ಜನೆ ಮಾಡಲಾಯಿತು. ಕಲ್ಯಾಣಿಗಳ ಬಳಿ ಪಾಲಿಕೆ ನುರಿತ ಈಜುಗಾರರನ್ನು ನೇಮಿಸಿತ್ತು. ಪೊಲೀಸ್ ಬಂದೋಬಸ್ತ್ ಕೂಡ ಏರ್ಪಡಿಸಲಾಗಿದೆ.

ಸ್ಯಾಂಕಿ ಕೆರೆ, ರಾಚೇನಹಳ್ಳಿ ಕೆರೆ, ಯಡಿಯೂರು ಕೆರೆ, ಕೆಂಪಾಂಬುಧಿ ಕೆರೆಗಳ ಬಳಿ ಸ್ಥಾಪಿಸಿರುವ ಕಲ್ಯಾಣಿಗಳಲ್ಲಿ ಹೆಚ್ಚಿನ ಮೂರ್ತಿಗಳು ವಿಸರ್ಜನೆಯಾಗಿವೆ.

ಈ ಬಗ್ಗೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್, ಪಾಲಿಕೆಯಿಂದ ವಿವಿಧೆಡೆ ಗಣಪತಿ ಮೂರ್ತಿಗಳ ವಿಸರ್ಜನೆಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ಜತೆಗೆ ವಿವಿಧ ರೀತಿಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಸಾರ್ವಜನಿಕರು ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನೇ ಪೂಜಿಸಬೇಕು. ಆದರೂ, ಕೆಲವರು ಪಿಒಪಿ ಮೂರ್ತಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದು, ಅವುಗಳನ್ನು ವಿಸರ್ಜನೆಗೆ ತಗಾದೆ ಬಂದಿದೆ. ನಾಗರಿಕರ ಭಾವನೆ ಅರ್ಥ ಮಾಡಿಕೊಂಡು ಕೆಲವೆಡೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ವಲಯವಾರು ಮೂರ್ತಿಗಳ ವಿಸರ್ಜನೆ ವಿವರ:

ವಲಯ ಮೂರ್ತಿಗಳ ಸಂಖ್ಯೆ

ಪೂರ್ವ 44,000

ಪಶ್ಚಿಮ 60,703

ದಕ್ಷಿಣ 79,039

ಬೊಮ್ಮನಹಳ್ಳಿ 7,028

ದಾಸರಹಳ್ಳಿ ವಲಯ 1,104

ಮಹದೇವಪುರ 5,690

ಆರ್‌ಆರ್‌ ನಗರ 13,097

ಯಲಹಂಕ 8,492

ಒಟ್ಟು 2,19,153

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net