ಆರ್.ಆರ್.ನಗರ ಅಕ್ರಮ ಬಿಲ್ ಪಾವತಿ ತನಿಖೆಗೆ ಬಿಬಿಎಂಪಿ ಆದೇಶ

Vijayavani-Featured-Image
Published on

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಮುನಿರತ್ನ ಬಂಧನಕ್ಕೆ ಒಳಗಾಗಿ ಜೈಲು ಪಾಲಾದ ಬೆನ್ನಲ್ಲೇ ಅವರು ಪ್ರತಿನಿಧಿಸುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿನ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವ ವೇಳೆ ನಿಯಮ ಉಲ್ಲಂಘನೆ ಆರೋಪ ಆಧರಿಸಿ ತನಿಖೆಗೆ ಐವರು ಅಧಿಕಾರಿಗಳನ್ನು ಒಳಗೊಂಡ ತನಿಖಾ ಸಮಿತಿ ರಚಿಸಿ ಬಿಬಿಎಂಪಿ ಬುಧವಾರ ಆದೇಶ ಹೊರಡಿಸಿದೆ.

ಸಮಿತಿಗೆ ಪಾಲಿಕೆಯ ಕಂದಾಯ, ಯೋಜನೆ, ಹಣಕಾಸು ವಿಭಾಗಗಳ ವಿಶೇಷ ಆಯುಕ್ತರು, ಗುಣ ಭರವಸೆ ಮತ್ತು ಗುಣ ನಿಯಂತ್ರಣ ವಿಭಾಗದ ಮುಖ್ಯ ಅಭಿಯಂತರರು ಸದಸ್ಯರಾಗಿರುತ್ತಾರೆ. ಟಿವಿಸಿಸಿ ವಿಭಾಗದ ಮುಖ್ಯ ಅಭಿಯಂತರರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ವರದಿಯನ್ನು ತ್ವರಿತವಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಕೆಲ ದಿನಗಳ ಹಿಂದೆ ಆರ್.ಆರ್.ನಗರ ಕ್ಷೇತ್ರಕ್ಕೆ ಸಂಬಂಧಿಸಿ 2020ರ ಸೆ.18ರಿಂದ 2022ರ ಜು.19ರ ಅವಧಿಯಲ್ಲಿ ವಿವಿಧ ಕಾಮಗಾರಿಗಳಿಗೆ 500 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ. ಈ ವೇಳೆ ಪಾಲಿಕೆ ಅಧಿಕಾರಿಗಳೇ ನಿಯಮ ಉಲ್ಲಂಸಿ ದೊಡ್ಡ ಮೊತ್ತದ ಬಿಲ್‌ಅನ್ನು ತರಾತುರಿಯಲ್ಲಿ ಗುರಿತ್ತಿಗೆದಾರರಿಗೆ ಪಾವತಿಸಲಾಗಿತ್ತು. ಈ ಪ್ರಕರಣದಲ್ಲಿ ಪಾಲಿಕೆಯ ಮಹಿಳಾ ಅಧಿಕಾರಿಯೊಬ್ಬರು ಶಾಸಕರ ಸೂಚನೆ ಮೇರೆಗೆ ಬಿಲ್‌ಗಳನ್ನು ತ್ವರಿತವಾಗಿ ಬಿಡುಗಡೆ ಮಾಡಿದ್ದರು ಎಂಬ ಆರೋಪ ಹೊರಿಸಲಾಗಿದೆ.

ಕಳೆದ ಒಂದು ವರ್ಷದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ವಿವಿಧ ಕಾಮಗಾರಿ ಸಂಬಂಧಿತ ಬಿಲ್ ಪಾವತಿಯಾಗದೆ ವಿಳಂಬವಾಗಿದೆ. ಈ ಸಂಬಂಧ ಗುತ್ತಿಗೆದಾರರ ಸಂಘವು ಸರ್ಕಾರದ ಮೊರೆ ಹೋಗಿ ಬಿಲ್ ಪಾವತಿಗೆ ಮನವಿ ಸಲ್ಲಿಸಿದ್ದರು. ಈ ವೇಳೆ ಆರ್.ಆರ್.ನಗರ ಕ್ಷೇತ್ರದಲ್ಲಿ ನಡೆದಿದ್ದ ಹಲವು ಕಾಮಗಾರಿಗಳ ಬಿಲ್‌ಗಳಿಗೆ 500 ಕೋಟಿ ರೂ. ಹಣ ಬಿಡುಗಡೆ ಮಾಡಿರುವ ಬಗ್ಗೆ ದೂರು ಕೇಳಿಬಂದಿದೆ. ಇದನ್ನಾಧರಿಸಿ ತನಿಖೆಗೆ ಆದೇಶ ಹೊರಡಿಸಲಾಗಿದೆ.

ಆರ್.ಆರ್.ನಗರ ಕ್ಷೇತ್ರದ ಕಾಮಗಾರಿ ಬಿಲ್‌ಗಳ ಹಣ ಬಿಡುಗಡೆ ವೇಳೆ ಲೋಪವಾಗಿರುವ ಬಗ್ಗೆ ದೂರು ಕೇಳಿಬಂದಿದೆ. ಬಿಲ್ ಪಾವತಿಯಲ್ಲಿ ನಿಯಮ ಉಲ್ಲಂಘನೆಯಾಗಿದೆಯೇ ಅಥವಾ ಕಳಪೆ ಕಾಮಗಾರಿ ನಡೆದಿದ್ದರೂ, ಹಣ ಬಿಡುಗಡೆಯಾಗಿದೆಯೆ ಎಂಬುದನ್ನು ದೃಢಪಡಿಸಿಕೊಳ್ಳಲು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ. ವರದಿ ಕೈಸೇರಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.

- ತುಷಾರ್ ಗಿರಿನಾಥ್, ಪಾಲಿಕೆ ಮುಖ್ಯ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net