ಮಳೆಗಾಲಕ್ಕೆ ಮುಂಜಾಗ್ರತಾ ಕ್ರಮ; ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ

BBMP
Published on

ಬೆಂಗಳೂರು: ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಂಬಂಧ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದರು. ಆಯಾ ವಲಯ ವ್ಯಾಪ್ತಿಯ ಅಧಿಕಾರಿಗಳು ಮಳೆಗಾಲದ ವೇಳೆ ಎಲ್ಲಿಯೂ ಸಮಸ್ಯೆಯಾಗದಂತೆ ಕ್ರಮವಹಿಸಬೇಕು. ನಮ್ಮ ಮೆಟ್ರೋ ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಮಳೆ ನೀರಿನ ಸರಾಗ ಹರಿವಿಗೆ ಸಮಸ್ಯೆ ಆಗಲಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸಮಸ್ಯೆ ಕಂಡುಬಂದಲ್ಲಿ ಮೆಟ್ರೋ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಲು ತಿಳಿಸಿದರು.

ರಾಜಕಾಲುವೆ ಹಾಗೂ ರಸ್ತೆ ಬದಿ ಚರಂಡಿಗಳಲ್ಲಿ ತುಂಬಿರುವ ಹೂಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಬೇಕು. ಪ್ರವಾಹಪೀಡಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಜೋರು ಮಳೆಯಾಗುವ ಸಂದರ್ಭದಲ್ಲಿ ರಸ್ತೆಗಳ ಮೇಲೆ ಹೆಚ್ಚು ನೀರು ನಿಂತು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಈ ನಿಟ್ಟಿನಲ್ಲಿ ರಸ್ತೆ ಮೇಲೆ ಬೀಳುವ ನೀರು ಚರಂಡಿಗಳಿಗೆ ಸಮರ್ಪಕವಾಗಿ ಹರಿದು ಹೋಗಲು ಶೋಲ್ಡರ್​ ಡೆನ್​ಗಳ ಬಳಿ ಸ್ವಚ್ಚತೆ ಕಾಪಾಡಲು ಸೂಚಿಸಿದರು.

ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿರಬೇಕು:

ಪಾಲಿಕೆಯ 8 ವಲಯಗಳು ಹಾಗೂ ಕೇಂದ್ರ ಕಚೇರಿ ಸೇರಿ 9 ಶಾಶ್ವತ ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಜತೆಗೆ ತಾತ್ಕಾಲಿಕವಾಗಿ 63 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿಕೊಂಡು, ಅಗತ್ಯವಿರುವ ಪಂಪ್​ಸೆಟ್​, ಸಲಕರಣೆಗಳು, ಗ್ಯಾಂಗ್ಸ್​ಗಳನ್ನು ಸನ್ನದ್ಧವಾಗಿಟ್ಟುಕೊಳ್ಳಬೇಕು ಎಂದು ತುಷಾರ್​ ಗಿರಿನಾಥ್​ ಹೇಳಿದರು.

ಮಳೆಗಾಲದಲ್ಲಿ ಬಿದ್ದಂತಹ ಮರಗಳು ಹಾಗೂ ರೆಂಬೆ/ಕೊಂಬೆಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸುವ ಸಲುವಾಗಿ 28 ತಂಡಗಳು ಕಾರ್ಯನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ 6 ತಂಡಗಳನ್ನು ನಿಯೋಜಿಸಿಕೊಳ್ಳಲಾಗಿದೆ. ಜತೆಗೆ ರಸ್ತೆಗಳಲ್ಲಿ ಬಿದ್ದಂತಹ ಮರಗಳನ್ನು ಕೂಡಲೇ ತೆರವುಗೊಳಿಸಿ ಸಂಚಾರದಟ್ಟಣೆ ನಿಯಂತ್ರಿಸುವ ದೃಷ್ಠಿಯಿಂದ ವಲಯವಾರು 8 ದ್ವಿಚಕ್ರ ವಾಹನಗಳ ತಂಡಗಳನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತದೆ. ಮರ, ರೆಂಬೆ/ಕೊಂಬೆ ತೆರವು ಕಾರ್ಯಾಚರಣೆಗಾಗಿ 8 ಟ್ರಾ$್ಯಕ್ಟರ್​, 2 ಜೆಸಿಬಿ, 2 ಕ್ರೇನ್​, ಅವಶ್ಯಕ ಸಲಕರಣೆಗಳು ಹಾಗೂ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಇದೇ ವೇಳೆ ತ್ವರಿತ ವಿಲೇವಾರಿಗಾಗಿ ಆಯಾ ವಲಯಗಳಲ್ಲಿ ಡಂಪಿಂಗ್​ ಯಾರ್ಡ್​ ವ್ಯವಸ್ಥೆ ಮಾಡಿಕೊಳ್ಳಲು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚನೆ ನೀಡಿದರು.

ಅಗ್ನಿಶಾಮಕ/ಎಸ್​ಡಿಆರ್​​ಎಫ್​ನೊಂದಿಗೆ ಸಂಪರ್ಕ

ಮಳೆಗಾಲದ ವೇಳೆ ಪಾಲಿಕೆಯ ಜೊತೆ ಅಗ್ನಿಶಾಮಕ ಠಾಣೆ ಹಾಗೂ ಎಸ್​ಡಿಆರ್​​ಎಫ್​ ಇಲಾಖೆಗಳು ಕೈಜೋಡಿಸಲಿದ್ದಾರೆ. ಈ ಸಂಬಂಧ ಆಯಾ ವಲಯ ಆಯುಕ್ತರು ಅಗ್ನಿಶಾಮಕ ಠಾಣೆ ಸ್ಥಳಗಳಿಗೆ ಭೇಟಿ ನೀಡಿ ಸದರಿ ಇಲಾಖೆಗಳ ಜತೆ ನಿತ್ಯ ಸಂಪರ್ಕದಲ್ಲಿರಬೇಕು. ತುರ್ತು ಪರಿಸ್ಥಿತಿಯ ವೇಳೆ ಸದರಿ ಇಲಾಖೆಗಳ ಸಹಾಯ ಪಡೆದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೆಂದು ಸೂಚನೆ ನೀಡಿದರು.

ಯೋಜನಾ ವಿಭಾಗದ ವಿಶೇಷ ಆಯುಕ್ತ ಡಾ.ಕೆ. ಹರೀಶ್​ ಕುಮಾರ್​, ವಿಪತ್ತು ನಿರ್ವಹಣೆಯ ವಿಶೇಷ ಆಯುಕ್ತ ಸುರೋಳ್ಕರ್​ ವಿಕಾಸ್​ ಕಿಶೋರ್​, ಎಲ್ಲ ವಲಯ ಆಯುಕ್ತರು, ಎಲ್ಲಾ ವಲಯ ಜಂಟಿ ಆಯುಕ್ತರು, ಪ್ರಧಾನ ಅಭಿಯಂತರರು, ವಲಯ ಮುಖ್ಯ ಅಭಿಯಂತರರು ಸೇರಿ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ವ್ಯಾಟ್ಸ್​ಆ್ಯಪ್​ ಗ್ರೂಪ್​ಗಳನ್ನು ರಚಿಸಿ

ನಾಗರಿಕರ ಸಮಸ್ಯೆಗೆ ಕೂಡಲೆ ಸ್ಪಂದಿಸುವ ನಿಟ್ಟಿನಲ್ಲಿ ಪಾಲಿಕೆ, ಬೆಸ್ಕಾಂ, ಜಲಮಂಡಳಿ ಸೇರಿ ಇನ್ನಿತರೆ ಇಲಾಖೆಗಳನ್ನು ಒಳಗೊಂಡಂತೆ ಆಯಾ ವಲಯದ ಉಪ ವಿಭಾಗವಾರು ವ್ಯಾಟ್ಸ್​ಆ್ಯಪ್​ ಗ್ರೂಪ್​ಗಳನ್ನು ರಚಿಸಿಕೊಂಡು, ಅದರ ಮೂಲಕ ಬಂದಂತಹ ದೂರು, ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ತುಷಾರ್​ ಗಿರಿನಾಥ್​ ನಿರ್ದೇಶಿಸಿದರು.

ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿದರೆ ದಂಡ

ನಗರದ ರಸ್ತೆಬದಿ, ಇಕ್ಕೆಲಗಳಲ್ಲಿ, ರಾಜಕಾಲುವೆಗಳಲ್ಲಿ/ ರಾಜಕಾಲುವೆಗಳ ಪಕ್ಕ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಅವಶೇಷಗಳನ್ನು ಸುರಿದರೆ ದಂಡ ವಿಧಿಸಬೇಕು. ಈ ಸಂಬಂಧ ಕಟ್ಟಡ ತ್ಯಾಜ್ಯಗಳನ್ನು ವಿಲೇವಾರಿ ಮಾಡುವವರ ಮೇಲೆ ನತ್ಯಾಜ್ಯ ವಿಭಾಗವು ಸಕ್ರಿಯವಾಗಿ ನಿಗಾ ವಹಿಸಿ ಅನಧಿಕೃತ ಸ್ಥಳದಲ್ಲಿ ಸುರಿಯುವಂತಹವರಿಗೆ ದಂಡ ವಿಧಿಸಬೇಕೆಂದು ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net