ಬಿಬಿಎಂಪಿ: ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವಿಗೆ ಸೂಚನೆ

bbmp office
Published on

ಬೆಂಗಳೂರು: ಮಹಾನಗರದಲ್ಲಿ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿ ಸೋಮವಾರ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಾಹೀರಾತು ಅಳವಡಿಸುವ ವಿಚಾರವಾಗಿ ಡಿಸಿಎಂ ಅವರು ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಆದರೂ, ಇತ್ತೀಚಿನ ದಿನಗಳಲ್ಲಿ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದನ್ನು ನಿಯಂತ್ರಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಅನಧಿಕೃತ ಜಾಹೀರಾತು ಅಳವಡಿಸುವವರ ಮೇಲೆ ಕ್ರಮ ಕೈಗೊಳ್ಳಲು ಹೊಸದಾಗಿ ಸುತ್ತೋಲೆ ಹೊರಡಿಸಲಾಗುತ್ತಿದೆ. ಅದರಲ್ಲಿ ವಾರ್ಡ್ ವ್ಯಾಪ್ತಿಗೆ ಬರುವ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ), ಸಹಾಯಕ ಇಂಜಿನಿಯರ್ (ಎಇ) ಹಾಗೂ ಕಿರಿಯ ಇಂಜಿನಿಯರ್‌ಗೆ (ಜೆಇ) ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸುವ ಹಾಗೂ ಎಫ್​ಐಆರ್ ದಾಖಲಿಸುವ ಅಧಿಕಾರ ನೀಡಲಾಗುವುದು. ಜತೆಗೆ ತೆರವುಗೊಳಿಸುವ ವೆಚ್ಚವನ್ನೂ ವಸೂಲಿ ಮಾಡುವುದು, ದುಪ್ಪಟ್ಟು ದಂಡ ವಿಧಿಸುವ ಜವಾಬ್ದಾರಿ ನೀಡಲಾಗುವುದು ಎಂದರು.

ರಸ್ತೆ ಗುಂಡಿಗಳನ್ನು ಮುಚ್ಚಿ:

ಬಿಬಿಎಂಪಿ ವ್ಯಾಪ್ತಿ ರಸ್ತೆ ಗುಂಡಿಗಳನ್ನು ಕೂಡ ಮುಚ್ಚಬೇಕಿದ್ದು, ಆಯಾ ವಲಯಗಳಲ್ಲಿ ರಸ್ತೆಗುಂಡಿಗಳನ್ನು ಗುರುತಿಸಿ ಕೂಡಲೇ ಮುಚ್ಚುವ ಕಾರ್ಯ ಮಾಡಲು ಸೂಚಿಸಿದರು.

ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಡಾ. ಕೆ. ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತರಾದ ಸತೀಶ್, ರಮೇಶ್, ರಮ್ಯಾ, ಕರೀಗೌಡ, ದಿಗ್ವಿಜಯ್ ಬೋಡ್ಕೆ, ನವೀನ್‌ಕುಮಾರ್, ಪ್ರಧಾನ ಅಭಿಯಂತರ ಪ್ರಹ್ಲಾದ್ ಉಪಸ್ಥಿತರಿದ್ದರು.

ಮಳೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ:

ರಾಜಕಾಲುವೆಗಳಲ್ಲಿ ವಾರ್ಷಿಕ ನಿರ್ವಹಣೆ ಅಡಿಯಲ್ಲಿ ಸ್ವಚ್ಛತೆ ಕೈಗೊಳ್ಳುವ ಕಾರ್ಯವನ್ನು ಸಕ್ರಿಯವಾಗಿ ಮಾಡಿ ಹೂಳನ್ನು ತೆರವುಗೊಳಿಸಬೇಕು. ವಾರ್ಡ್ ರಸ್ತೆ ಹಾಗೂ ಪ್ರಮುಖ ರಸ್ತೆಗಳಲ್ಲಿ ಬರುವ ಸೈಡ್ ಡ್ರೈನ್‌ಗಳನ್ನು ಶಿಲ್ಟ್ ಆ್ಯಂಡ್ ಟ್ರ್ಯಾಕ್ಟರ್ ಬಳಸಿ ಹೂಳೆತ್ತುವ ಕೆಲಸ ಮಾಡಬೇಕು. ಮಳೆಗಾಲ ಆರಂಭಕ್ಕೂ ಮುಂಚಿತವಾಗಿ ಆದ್ಯತೆ ಮೇರೆಗೆ ಸ್ವಚ್ಛತಾ ಕಾರ್ಯ ನಡೆಸಿ ಎಲ್ಲಿಯೂ ಸಮಸ್ಯೆಯಾಗದಂತೆ ಕ್ರಮವಹಿಸಲು ಮುಖ್ಯ ಆಯುಕ್ತರು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net