

ಬೆಂಗಳೂರು : ಬಿಬಿಎಂಪಿಗೆ ಸರ್ಕಾರ ಹೊಸ ಕಾಯ್ದೆ ರಚನೆ ಕುರಿತು ಜಂಟಿ ಸದನ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿದೆ. ಈ ವರದಿಯಲ್ಲಿ ಮೇಯರ್ ಅಧಿಕಾರ 30 ತಿಂಗಳು, ಕಮಿಷನರ್ ಹಾಗೂ ಸ್ಥಾಯಿ ಸಮಿತಿಗೆ 15 ಸದಸ್ಯರನ್ನು ನೇಮಕ ಮಾಡುವಂತೆ ವಿಶೇಷ ಬದಲಾವಣೆ ಮಾಡಲಾಗಿದೆ.
ಪಾಲಿಕೆ ಚುನಾವಣೆ ಬಗ್ಗೆ ಎಲ್ಲರ ಗಮನ ಹರಿಸುತ್ತಿರುವ ವೇಳೆ ಸರ್ಕಾರ ನಗರದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಹೊಸ ಕಾಯ್ದೆಯನ್ನು ಜಾರಿಗೊಳಿಸಲು ಸಿದ್ಧವಾಗಿದೆ. ಈಗಾಗಲೇ ಶಾಸಕ ಎಸ್. ರಘು ಅವರ ನೇತೃತ್ವದ 20 ಸದಸ್ಯರನ್ನು ಒಳಗೊಂಡ ಜಂಟಿ ಸದನ ಸಮಿತಿಯು ಸೋಮವಾರ ಸರ್ಕಾರಕ್ಕೆ ವರದಿ ನೀಡಿದೆ. ಈಗ ವರದಿಯನ್ನು ಕಾನೂನು ಸಚಿವರ ನೇತೃತ್ವದ ಸ್ಕೂಟ್ನಿ ಸಮಿತಿಯು ಪರಿಶೀಲನೆ ನಡೆಸಿ, ಸರ್ಕಾರದ ಎರಡೂ ಸದನಗಳ ಮುಂದೆ ಅಂಗೀಕಾರಕ್ಕೆ ತರಲಿದೆ.
ಅಮೂಲಾಗ್ರ ಬದಲಾವಣೆಗಳು: ಪ್ರಸ್ತುತ ಬಿಬಿಎಂಪಿಯಲ್ಲಿ ಮೇಯರ್ ಅಧಿಕಾರ 1 ವರ್ಷವಿದ್ದು, ಅದನ್ನು 30 ತಿಂಗಳಿಗೆ (ಎರಡೂವರೆ ವರ್ಷ) ಹೆಚ್ಚಳ ಮಾಡಲಾಗಿದೆ. ಇನ್ನು 243 ವಾರ್ಡ್‌ಗಳಿಗೆ ಚುನಾವಣೆ ನಡೆಸಲು ಸರ್ಕಾರ ಬದ್ಧವಾಗಿದ್ದು, ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಿದ್ಧವಾಗಿದೆ. ಹೀಗಾಗಿ, ಸ್ಥಾಯಿ ಸಮಿತಿ ಸದಸ್ಯರ ಸಂಖ್ಯೆಯನ್ನು 15ಕ್ಕೆ ಹೆಚ್ಚಳ ಮಾಡಲಾಗಿದೆ. ವಿಶೇಷವಾಗಿ ಪ್ರತಿ ವಲಯಗಳಿಗೆ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಸಮಿತಿ ರಚನೆಗೆ ಅವಕಾಶ ನೀಡಿದ್ದು, ವಲಯ ಮಟ್ಟದಲ್ಲಿ ಒಬ್ಬರು ಪಾಲಿಕೆ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡಲು ವರದಿಯಲ್ಲಿ ಅವಕಾಶ ನೀಡಲಾಗಿದೆ.
ಕಮೀಷನರ್ ಆಯ್ಕೆ: ಈಗಿನ ಮಾದರಿಯಂತೆ ಸರ್ಕಾರದ ಕಾರ್ಯದರ್ಶಿ ದರ್ಜೆಯ ಅಧಿಕಾರಿಯನ್ನು ಬಿಬಿಎಂಪಿ ಮುಖ್ಯ ಆಯುಕ್ತರನ್ನಾಗಿ ನೇಮಕ ಮಾಡಬೇಕು. ಜತೆಗೆ, ಪ್ರತಿ ವಲಯಕ್ಕೂ ವಿಶೇಷ ಆಯುಕ್ತರು ಕಾರ್ಯನಿರ್ವಹಿಸಬೇಕು.