ಕೆಂಪೇಗೌಡ ಜಯಂತಿ ಆಚರಣೆಗೆ ಪಾಲಿಕೆ ನಿರ್ಲಕ್ಷ್ಯ

Vijayavani-Featured-Image
Published on

ಆರ್​​.ತುಳಸಿಕುಮಾರ್​

ಬೆಂಗಳೂರು: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಿಸಲು ಬಿಬಿಎಂಪಿ ಮೀನ-ಮೇಷ ಎಣಿಸುತ್ತಿದೆ. ಜಯಂತಿಗೆ ಒಂದು ವಾರ ಮಾತ್ರ ಬಾಕಿ ಇದ್ದು, ಈವರೆಗೆ ಯಾವುದೇ ಸಭೆ ನಡೆಸಿಲ್ಲ. ಉತ್ಸವ ಆಚರಣೆ ಸಂಬಂಧ ಸಮಿತಿ ಕೂಡ ರಚಿಸದಿರುವುದು ಪಾಲಿಕೆ ವತಿಯಿಂದ 515ನೇ ಕೆಂಪೇಗೌಡ ಜನ್ಮದಿನಕ್ಕೆ ಕೊಕ್ ನೀಡುವ ಸಾಧ್ಯತೆ ಇದೆ.

ಪ್ರಸ್ತುತ ಬಿಬಿಎಂಪಿಯಲ್ಲಿ ಚುನಾಯಿತ ಸರ್ಕಾರ ಅಸ್ತಿತ್ವದಲ್ಲಿ ಇಲ್ಲ. ಅಧಿಕಾರಿಗಳ ಆಡಳಿತದಿಂದಾಗಿ ನಾಡಪ್ರಭುಗಳ ಜಯಂತಿಯನ್ನು ಆಚರಿಸಬೇಕೇ ಬೇಡವೆ ಎಂಬ ಜಿಜ್ಞಾಸೆ ಮೂಡಿದೆ. ಈ ಬಾರಿಯ ಪಾಲಿಕೆ ಬಜೆಟ್‌ನಲ್ಲಿ ಕೆಂಪೇಗೌಡ ಜನ್ಮದಿನ ಆಚರಿಸಲು ಅನುದಾನವನ್ನೇ ನಿಗದಿ ಮಾಡಿಲ್ಲ. ಇದರ ಹೊರತಾಗಿಯೂ ಹಣ ಖರ್ಚು ಮಾಡಿದರೂ, ಅದಕ್ಕೆ ಸರ್ಕಾರದಿಂದ ಒಪ್ಪಿಗೆ ಪಡೆಯಲು ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಸೀಮಿತ ಸಂಪನ್ಮೂಲ ಲಭ್ಯವಿರುವ ಕಾರಣ ಮಿತವ್ಯಯಕ್ಕೆ ಒತ್ತು ನೀಡಿರುವ ಕಾರಣ ಜಯಂತಿಗೆ ಹಣ ಖರ್ಚು ಮಾಡುವುದು ಅನುಮಾನ ಮುಡಿಸಿದೆ.

ಹಿಂದಿನ ವರ್ಷ ಜೂ.27ರಂದು ಸರ್ಕಾರ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಆಚರಿಸಿತ್ತು. ಇದರ ಮರುದಿನದಿಂದ ರಾಜಧಾನಿಯ 28 ಕ್ಷೇತ್ರಗಳಲ್ಲಿ ಎಂಟು ದಿನಗಳ ಕಾಲ ಜಯಂತಿ ಸಂಬಂಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಮಾರೋಪದಂದು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪಾಲಿಕೆ ಮುಖ್ಯ ಆಯುಕ್ತರು ಹೇಳಿದ್ದರು. ಆದರೆ, ವಿವಿಧ ಕಾರಣವೊಡ್ಡಿ ನವೆಂಬರ್‌ವರೆಗೆ 3-4 ಬಾರಿ ದಿನ ನಿಗದಿಯಾದರೂ ಜಯಂತಿ ಆರಿಸಲೇ ಇಲ್ಲ. ನಗರದ ಹಿರಿಯ ಸಚಿವರೊಬ್ಬರ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ಕೂಡ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡದೆ ನೇಪಥ್ಯಕ್ಕೆ ಸರಿಯಿತು. ಈ ಬಾರಿಯೂ ಇಂಥದ್ದೇ ಸ್ಥಿತಿ ನಿರ್ಮಾಣವಾಗಿದ್ದು, ನಾಡಪ್ರಭುಗಳಿಗೆ ಗೌರವ ನೀಡುವ ವಿಚಾರದಲ್ಲಿ ಪಾಲಿಕೆ ಅಸಡ್ಡೆ ತೋರಿಸುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಸೀಮಿತ ಆಚರಣೆಗೆ ಚಿತ್ತ?:

ಸದ್ಯ ಲಭ್ಯವಿರುವ ಮಾಹಿತಿಯಂತೆ ಸರ್ಕಾರ ಆಚರಿಸಲಿರುವ ರಾಜ್ಯ ಮಟ್ಟದ ಕಾರ್ಯಕ್ರಮದ ದಿನದಂದೇ ರಾಜಧಾನಿಯ ಒಂದೆರಡು ಇವೆಂಟ್‌ಗಳನ್ನು ಬಿಬಿಎಂಪಿ ವಹಿಸಿಕೊಳ್ಳುವ ಸಾಧ್ಯತೆ ಇದೆ. ಪಾಲಿಕೆಯ ಕೇಂದ್ರ ಕಚೇರಿ ಎದುರಿನ ಉದ್ಯಾನದಲ್ಲಿರುವ ಕೆಂಪೇಗೌಡ ಪ್ರತಿಮೆ ಇರುವ ಜಾಗ ಹಾಗೂ ನಗರದ 4 ಕಡೆಯಿರುವ ಕೆಂಪೇಗೌಡ ಗೋಪುರ ಬಳಿ ಅಲಂಕಾರ ಕೈಗೊಳ್ಳುವುದಕ್ಕೆ ಸೀಮಿತವಾಗುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಬಿಬಿಎಂಪಿ ವಿಭಜನೆ, ಪಾಲಿಕೆಗೆ ಚುನಾವಣೆ ನಡೆಸುವ ವಿಷಯ ಚರ್ಚೆಗೆ ಗ್ರಾಸ ಒದಗಿಸಿದೆ. ಬೆಂಗಳೂರು ನಿರ್ಮಿಸಿದ್ದ ಕೆಂಪೇಗೌಡರ ನಗರವನ್ನು ಒಡೆದು 5 ಪಾಲಿಕೆ ಮಾಡುವ ಸರ್ಕಾರದ ಪ್ರಸ್ತಾಪಕ್ಕೆ ಸಾರ್ವಜನಿಕವಾಗಿ ಟೀಕೆಯೂ ವ್ಯಕ್ತವಾಗಿದೆ. ಮುಖ್ಯವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಅಧಿಕಾರವಧಿಯಲ್ಲೇ ನಾಡಪ್ರಭುಗಳ ಜಯಂತಿಗೆ ಪಾಲಿಕೆ ನಿರ್ಲಕ್ಷ್ಯ ವಹಿಸಿದರೆ ಸದ್ಯದಲ್ಲೇ ನಡೆಯಲಿರುವ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುವುದಿಲ್ಲವೆ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಿಂದ ಕೇಳಿಬಂದಿದೆ.

‘ಬೆಂಗಳೂರು ಹಬ್ಬ’ ಮತ್ತೆ ಮುನ್ನೆಲೆಗೆ?

ಕಳೆದ ವರ್ಷ ಡಿ.1ರಿಂದ 11ರವರೆಗೆ ಮೊದಲ ಬಾರಿಗೆ ಕಾರ್ಪೊರೇಟ್ ಟಚ್ ಒಳಗೊಂಡಿದ್ದ ‘ಅನ್‌ಬಾಕ್ಸಿಂಗ್ ಬಿಎಲ್‌ಆರ್ ಹಬ್ಬ’ ಹೆಸರಿನ ಬೆಂಗಳೂರು ಹಬ್ಬವನ್ನು ಆಚರಿಸಲಾಗಿತ್ತು. ಕೆಂಪೇಗೌಡ ಜಯಂತಿ ಕೈಗೊಳ್ಳುವ ಬದಲು ಒಂದು ವರ್ಗದ ಜನರು ಮಾತ್ರ ಪಾಲ್ಗೊಳ್ಳಲು ಅವಕಾಶ ಇದ್ದ ಕಾರ್ಯಕ್ರಮಕ್ಕೆ ವಿಶೇಷ ಒತ್ತು ನೀಡಲಾಗಿತ್ತು. ಇದನ್ನು ಉದ್ಘಾಟಿಸಿದ್ದ ಡಿಸಿಎಂ ಪ್ರತೀ ವರ್ಷ ಬಿಎಲ್‌ಆರ್ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ಘೋಷಣೆ ಮಾಡಿದ್ದರು. ಇದೀಗ ಬಿಬಿಎಂಪಿ ವತಿಯಿಂದ ಆಚರಿಸಬೇಕಿದ್ದ ಕೆಂಪೇಗೌಡ ಜಯಂತಿ ಬದಲು ಹೊಸ ಸ್ವರೂಪದಲ್ಲಿ ಬೆಂಗಳೂರು ಹಬ್ಬವನ್ನು ಮುನ್ನೆಲೆಗೆ ತರುವ ಯತ್ನ ತೆರೆಮರೆಯಲ್ಲಿ ನಡೆದಿದೆ. ನಗರದ ಸಂಸ್ಕೃತಿ ಹಾಗೂ ಸೊಗಡು ಇಲ್ಲದ ಬಿಎಲ್‌ಆರ್ ಹಬ್ಬವನ್ನು ಕಾರ್ಪೊರೇಟ್ ಕಂಪನಿಗಳ ಲಾಬಿಗೆ ಒಳಗಾಗಿ ಆಚರಿಸಿದರೆ ಅದು ಕೆಂಪೇಗೌಡ ಜಯಂತಿಗೆ ಪರ್ಯಾಯ ಆಗಲಾರದು ಎಂದು ಮಾಜಿ ಕಾರ್ಪೊರೇಟರ್‌ಗಳು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಸರ್ಕಾರದಿಂದ 8ನೇ ವರ್ಷದ ಆಚರಣೆ:

2017ರಲ್ಲಿ ಮೊದಲ ಬಾರಿಗೆ ರಾಜ್ಯ ಸರ್ಕಾರ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಿಸುವ ಪರಿಪಾಠಕ್ಕೆ ನಾಂದಿಯಾಡಿತು. ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಹಾಗೂ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು ಜಯಂತಿ ಘೋಷಣೆಗೆ ಕಾರಣರಾಗಿದ್ದರು. ಅಲ್ಲಿಂದೀಚಿಗೆ ಸರ್ಕಾರ ಪ್ರತೀ ವರ್ಷ ಜೂ.27ರಂದು ಕೆಂಪೇಗೌಡರ ಜನ್ಮದಿನವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿಯ ಜಯಂತಿ 8ನೇ ವರ್ಷದ್ದಾಗಿರಲಿದೆ.

ಡಿಸಿಎಂ ನೇತೃತ್ವದಲ್ಲಿ ಸಭೆ ಇಂದು:

ಕೆಂಪೇಗೌಡರ 515ನೇ ಜಯಂತಿ ಆಚರಣೆ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಿದ್ದಾರೆ. ರಾಜ್ಯ ಮಟ್ಟದಲ್ಲಿ ಕೈಗೊಳ್ಳಲಿರುವ ಕಾರ್ಯಕ್ರಮಗಳ ಸ್ವರೂಪ, ಪ್ರಶಸ್ತಿ ವಿತರಣೆ ಇತ್ಯಾದಿ ವಿಷಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆಲ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net