ಶಿವರಾತ್ರಿಗೆ ಶಿವನ ದೇವಸ್ಥಾನಗಳಲ್ಲಿ ಭಕ್ತರ ದಂಡು: ಬಿಬಿಎಂಪಿ ಮಾರ್ಷಲ್ಸ್​ಗಳ ನಿಗಾ

Marshalls
Marshalls
Published on

ಬೆಂಗಳೂರು: ಇಂದು ಶಿವರಾತ್ರಿ ಸಂಭ್ರಮದ ಹಿನ್ನಲೆಯಲ್ಲಿ ಬೆಂಗಳೂರು ನಗರದ ಶಿವನ ದೇವಸ್ಥಾನಗಳಿಗೆ ಭಕ್ತರ ದಂಡೇ ಹರಿದು ಬರುತ್ತಿದೆ. ಕೊರೊನಾವೈರಸ್ ಸೋಂಕು ಕಡಿಮೆಯಾಗದಿರುವುದರಿಂದ ದೇವಸ್ಥಾನಗಳಿಗೆ ಆಗಮಿಸುತ್ತಿರುವ ಭಕ್ತರ ಮೇಲೆ ಕಣ್ಣಿಡಲು ಬಿಬಿಎಂಪಿ ಮಾರ್ಷಲ್​ಗಳು ದೇವಸ್ಥಾನಗಳಿಗೆ ತೆರಳುತ್ತಿದ್ದಾರೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳದ, ಮಾಸ್ಕ್ ಧರಿಸದೆ ಬರುವವರ ಮೇಲೆ ನಿಗಾ ಇಡಲು ನಗರದ ಎಲ್ಲಾ ಶಿವನ ದೇವಸ್ಥಾನಗಳಿಗೆ ಮಾರ್ಷಲ್ಸ್​ಗಳು ಭೇಟಿ ನೀಡುತ್ತಿದ್ದಾರೆ. ಚಾಮರಾಜಪೇಟೆ, ಗವಿಪುರಂ ಸೇರಿದಂತೆ ಎಲ್ಲಾ ದೇವಸ್ಥಾನಗಳ ಮೇಲೆ ಮಾರ್ಷಲ್ಸ್ ನಿಗಾ ಇಡುತ್ತಿದ್ದಾರೆ.

ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಕರೊನಾ‌ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಗಂಗಾಧರನ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಬೆಳಿಗ್ಗೆಯಿಂದ

ದೇವಸ್ಥಾನಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ದೇವಸ್ಥಾನದ ಆವರಣದಲ್ಲಿ ಮಾಸ್ಕ್ ಹಾಕಿಕೊಳ್ಳದಿರೋವ್ರಿಗೆ ವಿಬಿಬಿಎಂಪಿ ಮಾರ್ಷಲ್ಸ್ ದಂಡ ವಿಧಿಸುತ್ತಿರುವ ಸನ್ನಿವೇಶ ಕಂಡು ಬಂದಿದೆ.

ಮಲ್ಲೇಶ್ವರಂನ‌ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪುನಸ್ಕಾರಗಳನ್ನು ಶಿವರಾತ್ರಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದೆ. ಕಾಡುಮಲ್ಲೇಶ್ವರನಿಗೆ ಬೆಳಗ್ಗೆಯಿಂದ ಪಂಚಾಮೃತ ಅಭಿಷೇಕ ನಡೆದಿದೆ. ದೇವಸ್ಥಾನದ ಆಡಳಿತ ಮಂಡಳಿ ಈಗ ಭಕ್ತರಿಗೆ ದರ್ಶನಕ್ಕೆ ಅನುವು ಮಾಡಿಕೊಟ್ಟಿದೆ. ಒಬ್ಬೊಬ್ಬರಾಗಿ ಸರತಿ ಸಾಲಿನಲ್ಲಿ ಬಂದು ದರ್ಶನ ಪಡೆಯಲು ಹಾಗೂ ಕರೊನಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ದರ್ಶನಕ್ಕೆ ಅನುವು ಮಾಡಿ ಕೊಡಲಾಗಿದೆ.

ಫ್ರೀಡಂಪಾರ್ಕನಲ್ಲೇ ಶಿವರಾತ್ರಿ: ಈ ಬಾರಿ ಮಹಾ ಶಿವರಾತ್ರಿ ಆಚರಣೆ ಫ್ರೀಡಂಪಾರ್ಕ್ ನಲ್ಲೇ ನಡೆಯಲಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜನ ಸ್ವಾಮೀಜಿ ಹೇಳಿದ್ದಾರೆ. ಬೆಂಗಳೂರಿನ ಫ್ರಿಡಂ ಪಾರ್ಕ್​ನಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಹೋರಾಟದ ಧರಣಿ ಸ್ಥಳದಲ್ಲಿ ಬಸವ ಜಯಮೃತ್ಯುಂಜಯ ಈ ಹೇಳಿಕೆ ನೀಡಿದ್ದಾರೆ. ಪ್ರತಿ ವರ್ಷ ಕೂಡಲಸಂಗಮದಲ್ಲಿ ಭಕ್ತರೊಂದಿಗೆ ಇಷ್ಟಲಿಂಗ ಪೂಜೆ ನೆರವೇರಿಸುತ್ತಿದ್ದೆವು. ಸಿಎಂ ನಮಗೆ ಇಲ್ಲೇ ಪೂಜೆ ಮಾಡುವಂತ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಇಂದು ರಾತ್ರಿ 9 ಗಂಟೆ ಇಂದ ಇಷ್ಟಲಿಂಗ ‌ಪೂಜೆ ಫ್ರೀಡಂ ಪಾರ್ಕ್ ನಲ್ಲೇ ನಡೆಯಲಿದೆ. ಎಲ್ಲರೂ ಫ್ರೀಡಂ ಪಾರ್ಕ್ ನಲ್ಲಿ ಬಂದು ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಸ್ವಾಮೀಜಿ ಕರೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net