

ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಒಎಫ್ಸಿ ಕೇಬಲ್‌ಗಳನ್ನು ತೆರವು ಮಾಡಲು ಈ ತಿಂಗಳಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲು ಬಿಬಿಎಂಪಿ ನಿರ್ಧರಿಸಿದ್ದು, ಸೋಮವಾರದಿಂದಲೇ ಅಭಿಯಾನದ ರೀತಿ ಚಾಲನೆ ನೀಡಲಾಗಿದೆ.
ಪಾಲಿಕೆಯ ಎಲ್ಲ 8 ವಲಯಗಳಲ್ಲಿನ ವಾರ್ಡ್ ವ್ಯಾಪ್ತಿಯ ರಸ್ತೆಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ಕೇಬಲ್‌ಗಳನ್ನು ತೆರವುಗೊಳಿಸಬೇಕು. ಇದರ ಹೊಣೆಯನ್ನು ವಾರ್ಡ್‌ಗಳ ಸಹಾಯಕ ಮತ್ತು ಕಿರಿಯ ಅಭಿಯಂತರರಿಗೆ ವಹಿಸಲಾಗಿದೆ. ಸಹಾಯಕ ಕಾರ್ಯಪಾಲಕ ಅಭಿಯಂತರರು ಒಎಫ್ಸಿ ತೆರವು ಕಾರ್ಯಾಚರಣೆಯ ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡುವಂತೆ ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ವಲಯ ವ್ಯಾಪ್ತಿಯಲ್ಲಿ ಮರ, ವಿದ್ಯುತ್ ಕಂಬಗಳ ಮೇಲೆ ಅನಧಿಕೃತ ಕೇಬಲ್‌ಗಳನ್ನು ಅಳವಡಿಸಿದ್ದು, ನೆಲದ ಮೇಲ್ಮಟ್ಟದಲ್ಲಿ ಕಾಣುವ ರೀತಿಯಲ್ಲಿರುವ ಕಾರಣ ನಗರದ ಸೌಂದರ್ಯ ಕೂಡಾ ಹಾಳಾಗುತ್ತದೆ. ಹೀಗಾಗಿ ಅಂತಹ ಕೇಬಲ್‌ಗಳನ್ನು ಗುರುತಿಸಿ ತೆರವುಗೊಳಿಸಬೇಕು. ಅನಧಿಕೃತ ಕೇಬಲ್ ತೆರವು ಮಾಡಿದ ಬಳಿಕ ಒಎಫ್ಸಿ ಕಂಪನಿಗಳ ನಿರ್ವಹಣಾ ತಂಡಗಳು ಪುನಃ ಅನಧಿಕೃತ ಚಟುವಟಿಕೆಯಲ್ಲಿ ತೊಡಗದಂತೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
2 ವಲಯಗಳಲ್ಲಿ ಕಾರ್ಯಾಚರಣೆಗೆ ಚಾಲನೆ:
ಪ್ರಸ್ತುತ ಮಹದೇವಪುರ ವಲಯ ಹಾಗೂ ಪೂರ್ವ ವಲಯ ವ್ಯಾಪ್ತಿಯಲ್ಲಿ ಮಂಗಳವಾರ ಅನಧಿಕೃತ ಒಎಫ್ಸಿ ಕೇಬಲ್‌ಗಳನ್ನು ತೆರವುಗೊಳಿಸಲಾಯಿತು. ಮಹದೇವಪುರ ವಲಯದ ಮಾರತಹಳ್ಳಿ ಮುಖ್ಯರಸ್ತೆ, ಕಗ್ಗದಾಸಪುರ, ದೊಡ್ಡನೆಕ್ಕುಂದಿ ಹಾಗೂ ಪೂರ್ವ ವಲಯದಲ್ಲಿ ಹಲಸೂರು ವ್ಯಾಪ್ತಿಯ ಸುತ್ತಮುತ್ತಲಿನ ರಸ್ತೆಗಳಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಇತರ ವಲಯಗಳಲ್ಲಿಯೂ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.