

ಬೆಂಗಳೂರು: ಬಿಬಿಎಂಪಿಯ ಎಲ್ಲ ಎಂಟೂ ವಲಯಗಳ ಒಂದೊಂದು ಸ್ಥಳದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಪ್ರಾಯೋಗಿಕ ಯೋಜನೆಗೆ ಪಾಲಿಕೆ ಕಚೇರಿಯಲ್ಲಿ ಗುರುವಾರ ಅಧಿಕೃತ ಚಾಲನೆ ನೀಡಲಾಯಿತು.
ಪಾಲಿಕೆ ಕೇಂದ್ರ ಕಚೇರಿಯ ಡಾ. ರಾಜ್‌ಕುಮಾರ್ ಗಾಜಿನ ಮನೆ ಸಭಾಂಗಣದ ಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ಸಹಬಾಳ್ವೆ ಹಾಗೂ ಒನ್ ಹೆಲ್ತ್ ಭಾಗವಾಗಿ ಬೀದಿ ನಾಯಿಗಳಿಗೆ ಆಹಾರ ನೀಡುವ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ. ಈ ಯೋಜನೆಯಡಿ ಪೌರಕಾರ್ಮಿಕರು, ಪ್ರಾಣಿ ಪ್ರಿಯರು ಮತ್ತು ಆಸಕ್ತ ನಾಗರಿಕರು ಒಟ್ಟಾಗಿ ಹೋಟೆಲ್. ರೆಸ್ಟೋರೆಂಟ್‌ಗಳಿಂದ ಬೀದಿ ನಾಯಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತದೆ. ಸಮುದಾಯ ನಾಯಿಗಳಿಗೆ ಆಹಾರ ದೊರಕದ ಪ್ರದೇಶಗಳಲ್ಲಿ ದಿನಕ್ಕೆ ಒಂದು ಬಾರಿ ಆಹಾರ ನೀಡಲಾಗುವುದು ಯೋಜನೆಯ ಉದ್ದೇಶ ಎಂದರು.
ಸದ್ಯ ಆಹಾರ ನೀಡುವ ಸ್ಥಳಗಳಲ್ಲಿಯೇ ಪ್ರತಿನಿತ್ಯ ಬೀದಿ ನಾಯಿಗಳಿಗೆ ಆಹಾರ ನೀಡಲಾಗುವುದು. ಸ್ಥಳದಲ್ಲಿ ಬೌಲ್, ನೀರು ಹಾಗೂ ಆಹಾರ ನೀಡುವ ಸ್ಥಳ ಎಂಬ ನಾಮಫಲಕದ ವ್ಯವಸ್ಥೆ ಮಾಡಲಾಗಿರುತ್ತದೆ. ಒಂದು ತಿಂಗಳು ಈ ಉಪಕ್ರಮ ಈ ವೇಳೆ ಸಾರ್ವಜನಿಕರ ಸ್ಪಂದನೆ, ಆಹಾರ ನೀಡುವ ಸ್ಥಳ, ಸಮಯ, ಸ್ಥಳೀಯ ಪ್ರದೇಶಗಳಲ್ಲಿ ಬರುವ ಸಲಹೆ-ಸೂಚನೆ ಹಾಗೂ ಆಕ್ಷೇಪಣೆ ಪರಿಶೀಲಿಸಲಾಗುವುದು. ತಪ್ಪುಗಳಿದ್ದಲ್ಲಿ ಅವುಗಳನ್ನು ಸರಿಪಡಿಸಿಕೊಂಡು ಇತರೆಡೆಯೂ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಹೋಟೆಲ್, ರೆಸ್ಟೋರೆಂಟ್‌ಗಳಿಂದ ಸ್ಪಂದನೆ:
ಪಾಲಿಕೆ ವ್ಯಾಪ್ತಿಯ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲಿಕರೊಂದಿಗೆ ಉಳಿಯುವ ಆಹಾರವನ್ನು ಬೀದಿ ನಾಯಿಗಳಿಗೆ ನೀಡುವ ಕುರಿತು ಚರ್ಚಿಸಲಾಗಿದ್ದು, ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಬೀದಿ ನಾಯಿಗಳಿಗೆ ಮಸಾಲೆ, ಎಣ್ಣೆ ಸೇರಿ ರೋಷ ಹೆಚ್ಚಲು ಕಾರಣವಾಗುವ ಅಂಶಗಳಿಲ್ಲದ ಆರೋಗ್ಯಕರ ಮತ್ತು ರುಚಿಕರವಾದ ಆಹಾರ ಒದಗಿಸಲು ಆಯಾ ಪ್ರದೇಶಗಳಲ್ಲಿನ ಹೋಟೆಲ್ಗಳಿಗೆ ತಿಳಿಸಲಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿಯ ಪಶುಸಂಗೋಪನಾ ವಿಭಾಗದ ಜಂಟಿ ನಿರ್ದೇಶಕ ಡಾ. ಚಂದ್ರಯ್ಯ, ಸಹಾಯಕ ನಿರ್ದೇಶಕ ಡಾ. ಮಲ್ಲಪ್ಪ ಬಜಂತ್ರಿ, ವಾಟರ್ ಫಾರ್ ವಾಯ್ಸ್ಲೆಸ್ ಎನ್‌ಜಿಒ ಸಂಸ್ಥೆಗಳ ಪ್ರಮುಖರು ಸೇರಿ ಇನ್ನಿತರರು ಹಾಜರಿದ್ದರು.
ಸಹಬಾಳ್ವೆ ಚಾಂಪಿಯನ್ ಲೊಕಲಿಟೀಸ್ ಅಭಿಯಾನ:
ಪಾಲಿಕೆ ವ್ಯಾಪ್ತಿಯಲ್ಲಿ 2.70 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಇವುಗಳಿಂದ ಜನರನ್ನು ಕಚ್ಚುವ ಸಂಖ್ಯೆ, ಉದ್ರೇಕಗೊಳ್ಳುವದನ್ನು ತಡೆಯಬೇಕಿದೆ. ಈ ಕುರಿತು ಪಶು ವೈದ್ಯರು, ಪರಿಣಿತ ತಜ್ಞರು, ಪ್ರಾಣಿ ಪ್ರಿಯ ಸ್ವಯಂಸೇವಕರೊಂದಿಗೆ ಚರ್ಚಿಸಿದಾಗ ಬೀದಿ ನಾಯಿಗಳಿಗೆ ಆಹಾರ ಸಿಗದಿರುವ ಪರಿಣಾಮ ಇಂತಹ ನಡವಳಿಕೆ ಕಂಡುಬಂದಿವೆ ಎಂಬುದನ್ನು ದೃಢಪಡಿಸಿಕೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿರುವ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಶೀಘ್ರ ‘ಸಹಬಾಳ್ವೆ ಚಾಂಪಿಯನ್ ಲೊಕಲಿಟೀಸ್ ಅಭಿಯಾನ’ ಹಮ್ಮಿಕೊಳ್ಳಲಾಗುವುದು ಎಂದು ಸುರಳ್ಕರ್ ತಿಳಿಸಿದರು.
ಪಾಲಿಕೆಯಿಂದ ಆಹಾರ ನೀಡುವ ವಲಯವಾರು ಸ್ಥಳಗಳ ವಿವರ:
ಪೂರ್ವ: ಪಾಲಿಕೆ ಕೇಂದ್ರ ಕಚೇರಿ, ಎನ್.ಆರ್ ಚೌಕದ ಬಳಿ
ಪಶ್ಚಿಮ: ಗಾಯತ್ರಿನಗರ (ವಿವಿಧ ಸ್ಥಳಗಳಲ್ಲಿ)
ದಕ್ಷಿಣ: ಗುಟ್ಟೇಪಾಳ್ಯ, ಸಿದ್ದಾಪುರ ವಾರ್ಡ್
ಮಹದೇವಪುರ: ಸಾದರಮಂಗಲ ರಸ್ತೆ, ಹೂಡಿಯ ಗ್ರಾಮದೇವತೆ ದೇಗುಲ ಬಳಿ
ಬೊಮ್ಮನಹಳ್ಳಿ: ಗುಬ್ಬಲಾಳ ಮುಖ್ಯರಸ್ತೆ, ಕೋಣನಕುಂಟೆ, ಸುಬ್ರಹ್ಮಣ್ಯಪುರ
ಆರ್.ಆರ್.ನಗರ: ಬಿಸಿಎಂಸಿ ಲೇಔಟ್, ರಾಜರಾಜೇಶ್ವರಿನಗರ
ದಾಸರಹಳ್ಳಿ: ಬಾಗಲಗುಂಟೆ, ಮಂಜುನಾಥನಗರ ಮುಖ್ಯರಸ್ತೆ
ಯಲಹಂಕ: ಟೆಲಿಕಾಂ ಲೇಔಟ್, ಜಕ್ಕೂರು