ಬಿಬಿಎಂಪಿಗೆ ಖಾಸಗಿ ರಸ್ತೆಗಳ ಮಾಹಿತಿ ಕೊರತೆ

bbmp office
Published on

ಬೆಂಗಳೂರು: ಮಹಾನಗರ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಗೇಟೆಡ್ ಕಮ್ಯುನಿಟಿ ಸಹಿತ ಖಾಸಗಿ ಲೇಔಟ್‌ಗಳಲ್ಲಿರುವ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳೆಂದು ಘೋಷಿಸಲು ಸರ್ಕಾರಿ ಆದೇಶ ಪ್ರಕಟವಾಗಿದ್ದರೂ, ಇಂತಹ ಎಷ್ಟು ಸಂಖ್ಯೆಯ ರೋಡ್‌ಗಳಿವೆ ಎಂಬ ದತ್ತಾಂಶ ಕೊರತೆಯನ್ನು ಬಿಬಿಎಂಪಿ ಎದುರಿಸುತ್ತಿದೆ.

ರಸ್ತೆ ಸಂಪರ್ಕ ಜಾಲ ವೃದ್ಧಿ ಹಾಗೂ ಸಾರ್ವಜನಿಕರ ಸುಲಭ ಸಂಚಾರಕ್ಕಾಗಿ ಸರ್ಕಾರ ಇಂಥದ್ದೊಂದು ಉತ್ತಮ ನಿರ್ಧಾರವನ್ನು ಕೈಗೊಂಡಿದೆ. ಇದಕ್ಕೆ ನಾಗರಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಕೆಲ ಲೇಔಟ್‌ಗಳು ದ್ವೀಪಗಳಾಗಿ ಪ್ರತ್ಯೇಕವಾಗಿ ವಾಸಿಸುವ ಇಚ್ಛೆಯಿಂದಾಗಿ ಸುತ್ತಲೂ ಕಾಂಪೌಂಡ್ ಹಾಕಿ ಹೊರಗಿನವರ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗುತ್ತಿತ್ತು. ಇದರಿಂದ ನೆರೆ ಹೊರೆ ಪ್ರದೇಶಗಳಲ್ಲಿ ಕೆಲ ಸಮಸ್ಯೆಗಳು ಉದ್ಭವಿಸಿದ್ದವು. ನೀರು, ಒಳಚರಂಡಿ, ವಿದ್ಯುತ್ ಪಡೆದ ನಂತರ ಆ ಬಡಾವಣೆಯನ್ನು ಅಲ್ಲಿನವರ ಉಪಯೋಗಕ್ಕೆ ಮಾತ್ರ ಬಳಸಿಕೊಳ್ಳುವ ಅಲಿಖಿತ ನಿಯಮ ಚಾಲ್ತಿಯಲ್ಲಿದೆ. ಇದಕ್ಕೆ ತಡೆಹಾಕುವ ಉದ್ದೇಶದಿಂದ ಖಾಸಗಿ ರಸ್ತೆಗಳು ಸಾರ್ವಜನಿಕ ಆಸ್ತಿ ಎಂದು ವಿಧಾನಮಂಡಲದಲ್ಲಿ ಒಪ್ಪಿಗೆ ಪಡೆದ ವಿಧೇಯಕ ಕೂಡ ದನಿಗೂಡಿಸಿದೆ.

ಆದರೆ, ಗೇಟೆಡ್ ಕಮ್ಯುನಿಟಿ ಹಾಗೂ ಖಾಸಗಿ ಲೇಔಟ್‌ಗಳಲ್ಲಿ ಎಷ್ಟು ಸಂಖ್ಯೆ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳನ್ನಾಗಿ ಘೋಷಿಸಬೇಕು ಎಂಬ ನಿಖರ ಮಾಹಿತಿ ಲಭ್ಯವಿಲ್ಲ. ಜತೆಗೆ ಖಾಸಗಿ ವ್ಯಕ್ತಿಗಳು ನಿರ್ಮಿಸಿರುವ ಬಡಾವಣೆಗಳಿಂದ ರಸ್ತೆಗಳನ್ನು ನೇರವಾಗಿ ಪಾಲಿಕೆ ತೆಕ್ಕೆಗೆ ತೆಗೆದುಕೊಳ್ಳಲು ಕೆಲವೊಂದು ನಿಯಮಗಳ ಅಡ್ಡಿಯಾಗಿವೆ ಎಂಬ ಮಾತು ಕೇಳಿಬಂದಿದೆ. ಮುಖ್ಯವಾಗಿ ಖಾಸಗಿ ರಸ್ತೆಗಳನ್ನು ಸುಪರ್ದಿಗೆ ಪಡೆಯಲು ಸ್ಪಷ್ಟ ಮಾರ್ಗಸೂಚಿ ಇಲ್ಲವೆಂದು ಅಧಿಕಾರಿ ವರ್ಗ ಸಬೂಬು ನೀಡುತ್ತಿದ್ದಾರೆ. ಈ ನಡೆಯಿಂದಾಗಿ ಸರ್ಕಾರದ ಆಶಯ ಅನುಷ್ಠಾನ ಹಂತದಲ್ಲೇ ತೆವಳುವಂತಾಗಿದೆ.

ವಲಯ ಆಯುಕ್ತರಿಗೆ ಅಧಿಕಾರ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 8 ವಲಯಗಳಿವೆ. ಇವುಗಳಲ್ಲಿ ಹೊಸ ವಲಯಗಳಾದ ಯಲಹಂಕ, ಮಹದೇವಪುರ, ಬೊಮ್ಮನಹಳ್ಳಿ, ಆರ್‌ಆರ್‌ನಗರ ಹಾಗೂ ದಾಸರಹಳ್ಳಿ ವಲಯಗಳಲ್ಲೇ ಅತ್ಯಧಿಕ ಸಂಖ್ಯೆ ಖಾಸಗಿ ರಸ್ತೆಗಳಿವೆ. ಇಂತಹ ರಸ್ತೆಗಳನ್ನು ಗುರುತಿಸಿ ಸಾರ್ವಜನಿಕ ರಸ್ತೆಯನ್ನಾಗಿಸಲು ವಲಯ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ. ಈ ವಿಚಾರವಾಗಿ ಸದ್ಯದಲ್ಲೇ ಮಾಹಿತಿ ಸಂಗ್ರಹಿಸಿ ಕಾಯ್ದೆ ಅನ್ವಯ ಸುಪರ್ದಿಗೆ ಪಡೆಯಲಾಗುವುದು ಎಂಬ ಸಮಜಾಯಿಷಿ ಕೂಡ ವ್ಯಕ್ತವಾಗಿದೆ.

ವೈಟ್‌ಫೀಲ್ಡ್ ಭಾಗದಲ್ಲಿ ಸಮಸ್ಯೆ ಹೆಚ್ಚು:

ಮಹದೇವಪುರ ವಲಯಕ್ಕೆ ಸೇರಿರುವ ವೈಟ್‌ಫೀಲ್ಡ್ ಸುತ್ತಮುತ್ತ ಅಧಿಕ ಸಂಖ್ಯೆಯಲ್ಲಿ ಗೇಟೆಡ್ ಕಮ್ಯುನಿಟಿ ಹಾಗೂ ಖಾಸಗಿ ಲೇಔಟ್‌ಗಳು ತಲೆಯೆತ್ತಿವೆ. ಇಲ್ಲೆಲ್ಲ ವಸತಿ ಮನೆಗಳನ್ನು ನಿರ್ಮಿಸಿಕೊಂಡು ಒಳಗಿನ ರಸ್ತೆಗಳನ್ನು ಹೊರಗಿನವರು ಬಳಸದಂತೆ ನಿರ್ಬಂಧ ವಿಧಿಸಲಾಗಿದೆ. ಇದರಿಂದ ನೆರೆಯ ಬಡಾವಣೆಯಲ್ಲಿ ವಾಸಿಸುವ ಜನರು ಇಂತಹ ಲೇಔಟ್ ಒಳಗಿನಿಂದ ತೆರಳಲಾಗದೆ ಬಳಸು ದಾರಿ ಹಿಡಿಯಬೇಕಿದೆ. ಕೆಲವೊಮ್ಮೆ ತುರ್ತಾಗಿ ತೆರಳಬೇಕಾದಲ್ಲಿ ಅನಗತ್ಯ ಅಡೆತಡೆ ಎದುರಾಗುವುದುಂಟು. ಈ ಸಮಸ್ಯೆಯಿಂದ ವೈಟ್‌ಫೀಲ್ಡ್ ಭಾಗದಲ್ಲಿನ ಕೆಲ ರಸ್ತೆಗಳು ಡೆಡ್ ಎಂಡ್ ಆಗಿ ಮುಂದೆ ಸಾಗಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ ಆ ಭಾಗದಲ್ಲಿ ಟ್ರಾಫಿಕ್ ಜಾಮ್‌ಗೂ ಕಾರಣವಾಗಿದೆ.

ಪಾಲಿಕೆಯಿಂದಲೇ ನಿರ್ವಹಣೆ:

ಗೇಟೆಡ್ ಕಮ್ಯುನಿಟಿ ಹಾಗೂ ಖಾಸಗಿ ಲೇಔಟ್‌ನಲ್ಲಿರುವ ರಸ್ತೆಗಳನ್ನು ಸಾರ್ವಜನಿಕ ಸ್ವತ್ತು ಎಂದು ಘೋಷಿಸಿದ ಬಳಿಕ ಅವುಗಳನ್ನು ಪಾಲಿಕೆ ನಿರ್ವಹಣೆ ಮಾಡಬೇಕಿದೆ. ರಸ್ತೆ ದುರಸ್ತಿ, ಮರುನಿರ್ಮಾಣದ, ಚರಂಡಿಗಳ ಸ್ವಚ್ಛತಾ ಕಾರ್ಯವನ್ನೂ ವಹಿಸಿಕೊಳ್ಳಬೇಕಾಗುತ್ತದೆ. ಅಗತ್ಯವಿದ್ದಲ್ಲಿ ಹೊಸ ಕಾಮಗಾರಿ ಕೈಗೊಳ್ಳಲು ಅನುದಾನ ಕೂಡ ಬಿಡುಗಡೆ ಮಾಡಬೇಕಿದೆ. ಇದಕ್ಕೆ ಪಾಲಿಕೆ ಸಿದ್ಧವಿದ್ದರೂ, ಖಾಸಗಿಯವರಿಂದ ಇಂತಹ ರಸ್ತೆಗಳು ಸುಪರ್ದಿಗೆ ಪಡೆಯಲು ಒಂದು ತಿಂಗಳು ಕಾಲಾವಕಾಶ ನೀಡಿ ಅವರ ಅಹವಾಲು ಆಲಿಸಿದ ಮೇಲೆಯೇ ಸಾರ್ವಜನಿಕ ರಸ್ತೆ ಎಂಬುದಾಗಿ ಘೋಷಿಸಬೇಕಿದೆ.

ಖಾಸಗಿ ಲೇಔಟ್ ನಿರ್ಮಾಣಗೊಂಡಿದ್ದರೂ, ಅಲ್ಲಿನ ರಸ್ತೆಗಳನ್ನು ಕೆಲವರಿಗೆ ಮಾತ್ರ ಸೀಮಿತಗೊಳಿಸುವುದು ಸರಿಯಲ್ಲ. ಎಲ್ಲರೂ ಎಲ್ಲ ರಸ್ತೆಗಳನ್ನು ಉಪಯೋಗಿಸಲು ಕಾನೂನಿನಲ್ಲಿ ಅವಕಾಶ ಇದ್ದರೂ, ಪಾಲಿಕೆ ಈತನಕ ಪ್ರೈವೇಟ್ ಲೇಔಟ್‌ಗಳನ್ನು ದ್ವೀಪಗಳನ್ನಾಗಿಸಿದ್ದು ಏಕೆಂದು ಅರ್ಥವಾಗುತ್ತಿಲ್ಲ. ಈಗಲಾದರೂ ಎಲ್ಲ ಖಾಸಗಿ ರಸ್ತೆಗಳನ್ನು ತ್ವರಿತವಾಗಿ ಗುರುತಿಸಿ ಪಾಲಿಕೆ ಸುಪರ್ದಿಗೆ ಪಡೆಯಲಿ.

- ಶ್ರೀನಿವಾಸ್ ಅಲಿವಿಲ್ಲಿ, ಸಾಮಾಜಿಕ ಕಾರ್ಯಕರ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net