ಸುರಕ್ಷಿತ ತಂಗುದಾಣಗಳ ನಿರ್ಮಾಣಕ್ಕೆ ಬಿಬಿಎಂಪಿ ಚಿತ್ತ

bus stand
Published on

ಆರ್. ತುಳಸಿಕುಮಾರ್​

ಬೆಂಗಳೂರು: ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಟ್ರಾಫಿಕ್ ಸಮಸ್ಯೆ ಮಧ್ಯೆ ಸಾರ್ವಜನಿಕರು ಬಸ್ ನಿಲ್ದಾಣ ತಲುಪಿ ತಮ್ಮ ಗಮ್ಯ ತಲುಪಲು ಹರಸಾಹಸಪಡಬೇಕಿದೆ. ಹೆಚ್ಚಿನ ಕಡೆಗಳಲ್ಲಿ ಬಸ್ ಶೆಲ್ಟರ್‌ಗಳೇ ಇಲ್ಲ. ಕೆಲವೆಡೆ ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು ಸೂಕ್ತ ತಂಗುದಾಣಗಳಿಲ್ಲದ ಹಾಗೂ ಪ್ರಯಾಣಿಕ ಸ್ನೇಹಿ ಸೌಲಭ್ಯಗಳ ಅಭಾವವೂ ಇದೆ. ಈ ಸಮಸ್ಯೆ ನಿವಾರಿಸಲು ಮಹಿಳೆಯರು-ಮಕ್ಕಳು ಹಾಗೂ ಹಿರಿಯ ನಾಗರಿಕರು ಸುಲಭವಾಗಿ ಸಂಚರಿಸಲು ಸುರಕ್ಷಿತ ತಂಗುದಾಣಗಳನ್ನು ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ.

ಹಾಲಿ ಕಾರ್ಯಾಚರಿಸುತ್ತಿರುವ ತಂಗುದಾಣಗಳು ಪ್ರಯಾಣಿಕರು ಬಸ್ ಹತ್ತಿ ಇಳಿಯಲಷ್ಟೇ ಸೌಲಭ್ಯ ಒದಗಿಸುತ್ತಿವೆ. ಇದಕ್ಕಿಂತಹ ಹೆಚ್ಚಿನ ಸೌಕರ್ಯ ಹಾಗೂ ವ್ಯವಸ್ಥಿತವಾಗಿ ನಿರ್ವಹಿಸುವ ಬಸ್ ಶೆಲ್ಟರ್‌ಗಳಾಗಿ ಬದಲಾವಣೆಗೆ ತೆರೆದುಕೊಳ್ಳಲಿವೆ. ಅದರಲ್ಲೂ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಪ್ರಸ್ತುತ ಕಾರ್ಯಾಚರಿಸುತ್ತಿರುವ ತಂಗುದಾಣಗಳನ್ನೇ ಸುರಕ್ಷಿತ ಸ್ಥಳವಾಗಿ ಪರಿವರ್ತನೆ ಮಾಡಲಾಗುತ್ತದೆ. ಇದಕ್ಕಾಗಿ ತಂಗುದಾಣಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ, ದೀಪದ ವ್ಯವಸ್ಥೆ, ಕುಳಿತುಕೊಳ್ಳಲು ಉತ್ತಮ ಆಸನ, ಕುಡಿಯುವ ನೀರು, ಬಸ್ ಮಾರ್ಗಗಳ ಲಕ ಇರಲಿವೆ. ಜತೆಗೆ ತಂಗುದಾಣಗಳನ್ನು ಸ್ವಚ್ಚ ಸುಂದರವಾಗಿ ರೂಪಾಂತರಿಸಲಾಗುತ್ತದೆ. ಮುಖ್ಯವಾಗಿ ತಂಗುದಾಣಗಳ ಸ್ಥಳದಲ್ಲೇ ಬಸ್‌ಗಳು ನಿಲುಗಡೆಯಾಗಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಅಥವಾ ಇಳಿಸುವ ವ್ಯವಸ್ಥೆ ಮಾಡಲಾಗುತ್ತದೆ.

3 ಸ್ಥಳಗಳಲ್ಲಿ ಪ್ರಾಯೋಗಿಕ ಜಾರಿ:

ಪ್ರಯಾಣಿಕರಿಗೆ ಉತ್ತಮ ಸೌಲಭ್ಯವಿರುವ ಸುರಕ್ಷಿತ ತಂಗುದಾಣಗಳನ್ನು ಶೀಘ್ರವೇ ಪ್ರಾಯೋಗಿಕವಾಗಿ ಕೆ.ಆರ್.ಸರ್ಕಲ್, ೆರಂ ಮಾಲ್ ಹಾಗೂ ಕಾಡುಬೀಸನಹಳ್ಳಿ ಬಸ್ ನಿಲುಗಡೆ ಸ್ಥಳದಲ್ಲಿ ಜಾರಿ ಮಾಡಲಾಗುತ್ತದೆ. ಇದಕ್ಕೆ ತಗುಲುವ ವೆಚ್ಚವನ್ನು ಸಿಎಸ್‌ಆರ್ ನಿಧಿ ಅಡಿಯಲ್ಲಿ ಭರಿಸಲಾಗುತ್ತದೆ. ಇವುಗಳ ಸಾಧಕ-ಬಾಧಕವನ್ನು ಗಮನಿಸಿದ ಬಳಿಕ ಇನ್ನಿತರ ಸ್ಥಳಗಳಿಗೂ ವಿಸ್ತರಿಸಲು ಪಾಲಿಕೆ ಮುಂದಾಗಲಿದೆ.

ಹೊಸ ಬಗೆಯ ತಂಗುದಾಣ ಏಕೆ?:

ನಗರದಲ್ಲಿ ಸುಮಾರು 7 ಸಾವಿರ ಬಸ್ ನಿಲ್ದಾಣಗಳಿದ್ದು, ಈ ಪೈಕಿ ಶೇ.20 ಪ್ರಮಾಣದಷ್ಟು ‘ರಿಕ್ವೆಸ್ಟ್ ಸ್ಟಾಪ್’ಗಳಾಗಿ ಕಾರ್ಯಾಚರಿಸುತ್ತಿವೆ. ಇವುಗಳಲ್ಲಿ ಅರ್ಧದಷ್ಟು ಕಡೆಗಳಲ್ಲಿ ತಂಗುದಾಣಗಳು ಇಲ್ಲ. ಹೆಚ್ಚಿನ ಜನಸಂದಣಿ ಇರುವೆಡೆ ಬಸ್ ಶೆಲ್ಟರ್‌ಗಳಿದ್ದರೂ, ಹೆಚ್ಚು ಮಂದಿಗೆ ಆಶ್ರಯ ನೀಡುವಂತಿಲ್ಲ. ನಗರದ ಮಧ್ಯ ಭಾಗ ಹಾಗೂ ಪ್ರಮುಖ ರಸ್ತೆಗಳಲ್ಲಿ ತಂಗುದಾಣಗಳು ಉತ್ತಮವಾಗಿದ್ದರೂ, ರಾತ್ರಿ ವೇಳೆ ಒಂಟಿ ಪ್ರಯಾಣಿಕರಿಗೆ ಸುರಕ್ಷೆಯ ಕೊರತೆ ಕಾಡುತ್ತಿದೆ. ಈ ವಿಚಾರವಾಗಿ ಬಿ-ಪ್ಯಾಕ್ ಸಂಘಟನೆಯು ಮಹದೇವಪುರ, ಮಲ್ಲೇಶ್ವರ, ದಾಸರಹಳ್ಳಿ, ಹೆಬ್ಬಾಳ ಹಾಗೂ ಶಿವಾಜಿನಗರ ಮತಕ್ಷೇತ್ರಗಳಲ್ಲಿ ನಡೆಸಿದ ಸರ್ವೆಯಲ್ಲಿ ಶೇ.93 ಸ್ಥಳಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದನ್ನು ನಾಗರಿಕರು ಅಭಿಪ್ರಾಯ ದಾಖಲಿಸಿದ್ದರು. ಇದನ್ನಾಧರಿಸಿ ಇತರ ಸೌಲಭ್ಯಗಳ್ನು ಒದಗಿಸುವಂತೆ ಬಿಬಿಎಂಪಿಗೆ ಮನವಿ ನೀಡಲಾಗಿತ್ತು. ಈ ವಿಚಾರವಾಗಿ ಪಾಲಿಕೆ ಮುಖ್ಯ ಆಯುಕ್ತರು ಕೆಳ ಹಂತದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಹೊಸದಾಗಿ ನಿರ್ಮಿಸುವ ಬಸ್ ಶೆಲ್ಟರ್‌ಗಳನ್ನು ಸುರಕ್ಷಿತ ತಂಗುದಾಣಗಳಾಗಿ ನಿರ್ಮಿಸಲು ಒಪ್ಪಿಗೆ ಸೂಚಿಸಿದ್ದಾರೆ.

ಸರ್ವೆಯಲ್ಲಿ ಕಂಡುಬಂದ ಅಂಶಗಳಿವು:

* ಶೇ.93 ನಿಲ್ದಾಣಗಳಲ್ಲಿ ಸುರಕ್ಷತೆ ಮಾಹಿತಿ ಅಲಭ್ಯ

* ಶೇ.93 ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮರಾ ಅಗತ್ಯ

* ಶೇ.70 ನಿಲ್ದಾಣಗಳಲ್ಲಿ ಮಾರ್ಗ ನಕ್ಷೆ ಕೊರತೆ

* ಶೇ.77 ತಂಗುದಾಣಗಳಲ್ಲಿ ಗುಣಮಟ್ಟದ ಆಸನಗಳಿಲ್ಲ

* ಶೇ.55 ತಂಗುದಾಣಗಳಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ಅಗತ್ಯ

* ಶೇ.28 ತಂಗುದಾಣಗಳ ಹಿಂಭಾಗದ ಜಾಗ ಅನೈರ್ಮಲ್ಯ

3 ವರ್ಷದಲ್ಲಿ 1,136 ತಂಗುದಾಣ ನಿರ್ಮಾಣ:

ಮಹಾನಗರ ವ್ಯಾಪ್ತಿಯಲ್ಲಿ ತಂಗುದಾಣಗಳ ಅಗತ್ಯತೆಗೆ ಅನುಗುಣವಾಗಿ ನಿರ್ಮಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಬಿಎಂಟಿಸಿ ಸಲಹೆ ಆಧರಿಸಿ ಒಟ್ಟು 2,212 ಕಡೆಗಳಲ್ಲಿ ತಂಗುದಾಣಕ್ಕೆ ಒಪ್ಪಿಗೆ ಸಿಕ್ಕಿದ್ದು, 3 ವರ್ಷದಲ್ಲಿ 1,076 ಬಸ್ ಶೆಲ್ಟರ್‌ಗಳನ್ನು ನಿರ್ಮಿಸಲಾಗಿದೆ. ಇನ್ನೂ 1,136 ತಂಗುದಾಣಗಳನ್ನು ನಿರ್ಮಿಸಬೇಕಿದ್ದು, 250 ಅನುಷ್ಠಾನಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಬಿಬಿಎಂಪಿ ಟಿಇಸಿ ಕೋಶ (ಟ್ರಾಫಿಕ್ ಇಂಜಿನಿಯರಿಂಗ್ ಸೆಲ್) ಅಧಿಕಾರಿಗಳು ತಿಳಿಸಿದ್ದಾರೆ.

ತಂಗುದಾಣ ನಿರ್ಮಾಣಕ್ಕೆ ನಾಗರಿಕರ ಸಲಹೆಗಳಿವು:

* ಬಸ್ ನಿಲ್ದಾಣಗಳಲ್ಲಿ ಅನ್ಯ ವಾಹನಗಳು ನಿಲುಗಡೆ ಮಾಡದಂತೆ ನಿಗಾ ವಹಿಸಬೇಕು.

* ಬಸ್ ಶೆಲ್ಟರ್‌ಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸಲು ಆದ್ಯತೆ ನೀಡಬೇಕು.

* ಮುಂಜಾನೆ, ರಾತ್ರಿ ವೇಳೆ ಕೆಲ ಕಾಲ ಹೊಯ್ಸಳ-ಚೀತಾ ಗಸ್ತು ಪೊಲೀಸರ ಭೇಟಿ.

* ಪ್ರಯಾಣಿಕರು ಮಳೆಯಿಂದ ಆಶ್ರಯ ಪಡೆಯಲು ವಿಸ್ತಾರವಾದ ತಂಗುದಾಣ ಅಗತ್ಯ.

* ಶಿಥಿಲಾವಸ್ಥೆಯ ಬಸ್ ಶೆಲ್ಟರ್ ಬದಲಾವಣೆ, ಹೊಸ ಸ್ಥಳಗಳಲ್ಲೂ ತಂಗುದಾಣ ನಿರ್ಮಾಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net