

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದ 2.75 ಲಕ್ಷ ಸುಸ್ತಿದಾರರಿಗೆ ಎಲೆಕ್ಟ್ರಾನಿಕ್ ಡಿಮಾಂಡ್ ನೋಟಿಸ್ ಕಳುಹಿಸಲಾಗಿದೆ.
ಬಿಬಿಎಂಪಿಯಿಂದ ಜಿಬಿಎ ವ್ಯವಸ್ಥೆಗೆ ಹೊರಳುತ್ತಿರುವ ಮುನ್ನದಿನವಾದ ಸೋಮವಾರ ಈ ನೋಟಿಸ್‌ಗಳನ್ನು ರವಾನಿಸಲಾಗಿದೆ. ಈ ಎಲ್ಲ ಸ್ವತ್ತುದಾರರಿಗೆ ಈ ಹಿಂದೆಯೇ ಹಲವು ಬಾರಿ ನೋಟಿಸ್ ನೀಡಿದ್ದರೂ, ಟ್ಯಾಕ್ಸ್ ಕಟ್ಟಲು ವಿಲವಾದ ಹಿನ್ನೆಲೆ ಈಗ ಡಿಮಾಂಡ್ ನೋಟಿಸ್ ಕಳುಹಿಸಲಾಗಿದೆ. 2.75 ಲಕ್ಷ ಸುಸ್ತಿದಾರರು 786 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದನ್ನು ಪಾಲಿಕೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ಈವರೆಗೂ ಪಾವತಿಸದ ಆಸ್ತಿ ತೆರಿಗೆಯನ್ನು ಸುಸ್ತಿದಾರರು ಆನ್‌ಲೈನ್‌ನಲ್ಲಿ ಪಾವತಿಸಬೇಕಾಗುತ್ತದೆ. ಇಲ್ಲದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು, ಚರ ಮತ್ತು ಸ್ಥಿರ ಆಸ್ತಿಗಳ ತುರ್ತು ಮಾರಾಟ ಸೇರಿ ವಸೂಲಿ ಮಾಡಲು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ತೆರಿಗೆ ಸುಸ್ತಿದಾರರು ಕಾರಣಗಳೊಂದಿಗೆ ಮೇಲ್ಮನವಿ ಸಲ್ಲಿಸಬಹುದಾಗಿದ್ದು, ಇದರ ಪ್ರತಿ ಆನ್‌ಲೈನ್‌ನಲ್ಲಿ ಲಭ್ಯವಿದೆ.