

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದಾದ್ಯಂತ ವಸತಿ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿನ ಮುಚ್ಚಿದ ಹಾಗೂ ಸ್ಟಿಲ್ಟ್ ಪಾರ್ಕಿಂಗ್ ಪ್ರದೇಶಗಳಿಗೆ ಆಸ್ತಿ ತೆರಿಗೆ ವಿಧಿಸುವ ಲೆಕ್ಕಾಚಾರವನ್ನು ಪರಿಷ್ಕರಿಸಲು ಕರಡು ಅಧಿಸೂಚನೆ ಹೊರಡಿಸಿದೆ.
ಕಳೆದ ಶನಿವಾರವೇ (ಮಾ.29) ಅಧಿಸೂಚನೆ ಹೊರಡಿಸಿದ್ದರೂ, ಮಂಗಳವಾರ ಸಾರ್ವಜನಿಕರಿಗೆ ವಿತರಿಸಲಾಗಿದೆ. ಈ ಕರಡು ಅಧಿಸೂಚನೆಗೆ ಸಲಹೆ/ಆಕ್ಷೇಪಣೆ ಸಲ್ಲಿಸಲು ಶನಿವಾರದವರೆಗೆ (ಏ.5) ಕಾಲಾವಕಾಶ ನೀಡಲಾಗಿದೆ. ತಡವಾಗಿ ಅಧಿಸೂಚನೆ ಕೈಸೇರಿದ್ದರಿಂದ ಆಕ್ಷೇಪಣೆ ಸಲ್ಲಿಸಲು ನಾಲ್ಕು ದಿನ ಮಾತ್ರ ಅವಕಾಶ ಸಿಕ್ಕಿದೆ. ಹಾಗಾಗಿ ಇನ್ನಷ್ಟು ದಿನ ಕಾಲಾವಕಾಶ ನೀಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಪಾಲಿಕೆಯು 2016ರಿಂದಲೇ ಪಾರ್ಕಿಂಗ್ ಮೇಲಿನ ಆಸ್ತಿತೆರಿಗೆಯನ್ನು ಸಂಗ್ರಹಿಸುತ್ತಿದೆ. ಮುಚ್ಚಿದ ಹಾಗೂ ಸ್ಟಿಲ್ಟ್ ಪಾರ್ಕಿಂಗ್ ವಿಸ್ತೀರ್ಣಕ್ಕೆ ಸ್ವತ್ತಿನ ವರ್ಗ ಹಾಗೂ ಅನುಭೋಗ ಆಧಾರದ ಮೇಲೆ ವಿಧಿಸಲಾಗುವ ಪ್ರದೇಶವಾರು ಯೂನಿಟ್ ದರದ ಶೇ.50 ಶುಲ್ಕ ವಸೂಲು ಮಾಡಲಾಗುತ್ತಿತ್ತು. ಇದು ವಸತಿ ಹಾಗೂ ವಸತಿಯೇತರ ಕಟ್ಟಡಗಳಿಗೆ ಪ್ರತ್ಯೇಕ ದರ ವಿಧಿಸುವ ಜತೆಗೆ 6 ವಲಯಗಳಲ್ಲಿ ಶುಲ್ಕ ಲೆಕ್ಕಾಚಾರ ಹಾಕಲಾಗುತ್ತಿತ್ತು. ಈಗ ಈ ನಿಯಮ ಕೈಬಿಟ್ಟು ಕಟ್ಟಡದ ಘಟಕವಾರು ಪ್ರದೇಶ ಮೌಲ್ಯ (ಯುಎವಿ) ರೂಪದಲ್ಲಿ ಶುಲ್ಕ ಸಂಗ್ರಹಿಸುತ್ತಿದೆ. ಅಂದರೆ ವಾಹನ ನಿಲುಗಡೆ ಮಾಡುವ ಜಾಗಕ್ಕೆ ಮಾತ್ರ ಶುಲ್ಕ ಪಾವತಿಸಬೇಕಾಗುತ್ತದೆ.
ಹೊಸ ನಿಯಮ ಪ್ರಕಾರ ವಸತಿ ಕಟ್ಟಡಗಳಿಗೆ ಯುಎವಿ ದರದಂತೆ ಪ್ರತಿ ಚದರ ಅಡಿಗೆ ಮಾಸಿಕ 2 ರೂ. ಹಾಗೂ ವಸತಿಯೇತರ ಕಟ್ಟಡಗಳಿಗೆ ಪ್ರತಿ ಚದರ ಅಡಿಗೆ ಮಾಸಿಕ 3 ರೂ.ನಂತೆ ಶುಲ್ಕ ಅನ್ವಯವಾಗಲಿದೆ. ಹಿಂದೆ ಇದ್ದ ವಲಯವಾರು ಪದ್ಧತಿಯನ್ನು ಪೂರ್ಣವಾಗಿ ಕೈಬಿಟ್ಟು ನಗರದ ಎಲ್ಲ ಪ್ರದೇಶಗಳನ್ನು ಏಕರೂಪಕ್ಕೆ ಒಳಪಡಿಸಲಾಗಿದೆ.
ಸಮಾನ ದರ ವಸೂಲಿಗೆ ನಿಯಮ ಬದಲು:
ಹಾಲಿ ಜಾರಿಯಲ್ಲಿದ್ದ ನಿಯಮದನ್ವಯ ಸ್ವತ್ತುದಾರರು ಪಾರ್ಕಿಂಗ್ ಜಾಗವನ್ನು ಆಸ್ತಿತೆರಿಗೆ ನಮೂನೆಯಲ್ಲಿ ನಮೂದಿಸಲು ಹಿಂದೇಟು ಹಾಕುತ್ತಿದ್ದರು. ಕೆಲವರು ಖಾಲಿ ಜಾಗವೆಂದು, ಇನ್ನೂ ಕೆಲವರು ಕಡಿಮೆ ವಿಸ್ತೀರ್ಣ ತೋರಿಸಿ ಕಡಿಮೆ ಶುಲ್ಕ ಪಾವತಿಸುತ್ತಿದ್ದರು. ಅದರಲ್ಲೂ ಕಾಂಪ್ಲೆಕ್ಸ್, ಮಾಲ್ ಒಳಗೊಂಡ ವಾಣಿಜ್ಯ ಕಟ್ಟಡಗಳಿಗೆ ಅಧಿಕ ಶುಲ್ಕ ಇದ್ದರಿಂದ ಪಾರ್ಕಿಂಗ್ ಜಾಗವನ್ನು ನಮೂದಿಸುತ್ತಿರಲಿಲ್ಲ. ತೆರಿಗೆ ತಪ್ಪಿಸಿಕೊಳ್ಳಲು ವಾಮ ಮಾರ್ಗ ಅನುಸರಿಸಲಾಗುತ್ತಿತು. ಇದಕ್ಕೆ ಕೊನೆಯಾಡಿ ವೈಜ್ಞಾನಿಕವಾಗಿ ಎಲ್ಲರಿಗೂ ಸರಿಹೊಂದುವ ಶುಲ್ಕವನ್ನು ವಸೂಲು ಮಾಡಲು ಯುಎವಿ ಪದ್ಧತಿಯನ್ನು ಪರಿಚಯಿಸಲಾಗಿದೆ. ಇದರಿಂದಾಗಿ ಸ್ವತ್ತುದಾರರು ತಾವು ಬಳಸುವ ಪಾರ್ಕಿಂಗ್ ಜಾಗಕ್ಕೆ ಮಾತ್ರ ಶುಲ್ಕ ಪಾವತಿಸಬೇಕಷ್ಟೇ ಎಂದು ಪಾಲಿಕೆ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
ಹೊಸ ಯುಎವಿ ಲೆಕ್ಕಾಚಾರ ಹೇಗೆ?:
ವಸತಿ ಕಟ್ಟಡ - 150 ಚದರ ಅಡಿಯ ಪಾರ್ಕಿಂಗ್ ಜಾಗಕ್ಕೆ 10 ತಿಂಗಳಿಗೆ ಪ್ರತಿ ಚ. ಅಡಿಗೆ ತಲಾ 2 ರೂ.ನಂತೆ ಲೆಕ್ಕ ಹಾಕಿದರೆ 3,000 ರೂ. ಆಗುತ್ತದೆ. ಇದರ ಶೇ.20 ಭಾಗ (600 ರೂ.) ವಾರ್ಷಿಕ ಶುಲ್ಕವಾಗುತ್ತದೆ.
ವಸತಿಯೇತರ ಕಟ್ಟಡ -150 ಚದರ ಅಡಿಯ ಪಾರ್ಕಿಂಗ್ ಜಾಗಕ್ಕೆ 19 ತಿಂಗಳಿಗೆ ಪ್ರತಿ ಚ. ಅಡಿಗೆ ತಲಾ 3 ರೂ.ನಂತೆ ಲೆಕ್ಕ ಹಾಕಿದರೆ 4,500 ರೂ. ಆಗುತ್ತದೆ. ಇದರ ಶೇ.25 ಭಾಗ (1,125 ರೂ.) ವಾರ್ಷಿಕ ಶುಲ್ಕವಾಗುತ್ತದೆ.
ಈ ವಿಳಾಸಕ್ಕೆ ಆಕ್ಷೇಪಣೆ ಸಲ್ಲಿಸಿ:
ಮುಖ್ಯ ಆಯುಕ್ತರು, ಬಿಬಿಎಂಪಿ, ನರಸಿಂಹರಾಜ ಚೌಕ, ಬೆಂಗಳೂರು-560002 (ಏ.5ರೊಳಗೆ)
ವಾಣಿಜ್ಯೋದ್ಯಮಿಗಳಿಂದ ಲಾಬಿ?:
ಯುಎವಿ ಪದ್ಧತಿಯಡಿ ಪಾರ್ಕಿಂಗ್ ಶುಲ್ಕ ವಸೂಲಾತಿಯಿಂದ ವಸತಿ ಸ್ವತ್ತುದಾರರಿಗೆ ಹೊರೆ ಇರದು. ಆದರೆ, ವಸತಿಯೇತರ ಸ್ವತ್ತುಗಳನ್ನು ಹೊಂದಿವರಿಗೆ ಆರ್ಧಕರ್ಧ ತೆರಿಗೆ ಹಣ ಉಳಿತಾಯವಾಗುವ ರೀತಿ ನಿಯಮ ರೂಪಿಸಲಾಗಿದೆ. ಕಾಂಪ್ಲೆಕ್ಸ್, ಮಾಲ್, ಕಲ್ಯಾಣಮಂಟಪ, ಪಾರ್ಟಿ ಹಾಲ್, ಕೈಗಾರಿಕೆ ಇತ್ಯಾದಿ ವಾಣಿಜ್ಯ ಉದ್ದೇಶ ಹೊಂದಿರುವ ವಾಣಿಜ್ಯೋದ್ಯಮಿಗಳು ತೆರಿಗೆ ಭಾರ ಇಳಿಸಿಕೊಳ್ಳಲು ಸರ್ಕಾರದಲ್ಲಿ ಲಾಬಿ ನಡೆಸಿ ಶುಲ್ಕ ಕಡಿಮೆ ಮಾಡಿಸಿಕೊಂಡಿದ್ದಾರೆ. ಇದರಿಂದ ಪಾಲಿಕೆಗೆ ಹೊಂದಿಷ್ಟು ತೆರಿಗೆ ಹಣ ಕಡಿಮೆ ಆಗಲಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಪಾರ್ಕಿಂಗ್ ಮೇಲಿನ ಆಸ್ತಿತೆರಿಗೆಯನ್ನು ಪ್ರಮಾಣಬದ್ದೀಕರಣಗೊಳಿಸಲಾಗಿದೆ. ನಗರದ ಎಲ್ಲ ಪ್ರದೇಶಗಳಿಗೂ ಏಕರೂಪದ ಶುಲ್ಕ ವಿಧಿಸಿರುವುದರಿಂದ ಜನರಿಗೆ ಅನುಕೂಲ ಆಗಲಿದೆ. ಹೊಸ ನಿಯಮಕ್ಕೆ ಆಕ್ಷೇಪಣೆ ಇದ್ದಲ್ಲಿ ಸ್ಪಷ್ಟ ವಿವರಗಳೊಂದಿಗೆ ಸಲ್ಲಿಸಿದ್ದಲ್ಲಿ ಪರಾಮರ್ಶಿಸಿ ಕ್ರಮ ಕೈಗೊಳ್ಳಲಾಗುವುದು.
- ಮುನೀಶ್ ಮೌದ್ಗಿಲ್, ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ ವಿಭಾಗ)