ಬಿಬಿಎಂಪಿಯಿಂದ 75 ಜಂಕ್ಷನ್‌ಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ

bbmp office
Published on

ಬೆಂಗಳೂರು: ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಪ್ರಮುಖ ಸ್ಥಳಗಳಲ್ಲಿರುವ 75 ಜಂಕ್ಷನ್‌ಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆ ರೂಪಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪಾಲಿಕೆಯ ಪಶ್ಚಿಮ ವಲಯದ ಮಾಗಡಿ ಮುಖ್ಯರಸ್ತೆಯ ಕಾಮಾಕ್ಷಿ ಪಾಳ್ಯದಿಂದ ಸುಮನಹಳ್ಳಿ ವಿದ್ಯುತ್ ಚಿತಾಗಾರದ ವೆರೆಗೆ ಶುಕ್ರವಾರ ನಡಿಗೆಯ ಮೂಲಕ ಪರಿಶೀಲನೆ ನಡೆಸುವ ವೇಳೆ ಅವರು ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು.

ಪ್ರಸ್ತುತ ‘ಸುರಕ್ಷ ಯೋಜನೆ’ ಅಡಿಯಲ್ಲಿ 75 ಜಂಕ್ಷನ್‌ಗಳ ಅಭಿವೃದ್ಧಿಪಡಿಸುವ ಕೆಲಸ ಪ್ರಗತಿಯಲ್ಲಿದೆ. ಪಾದಚಾರಿಗಳಿಗೆ ರಸ್ತೆ ದಾಟಲು ಮತ್ತು ಸಂಚರಿಸಲು ಸುರಕ್ಷಿತ ವಾತಾವರಣ ಸೃಷ್ಟಿಸುವುದು, ಜಂಕ್ಷನ್‌ಗಳ ಮರುವಿನ್ಯಾಸಗೊಳಿಸಿ ಸಂಚಾರ ಸಿಕ್ಕು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಪಾಲಿಕೆಯ ಟ್ರಾಫಿಕ್ ಇಂಜಿನಿಯರಿಂಗ್ ಸೆಲ್ ವಿಭಾಗದಿಂದ ಜಂಕ್ಷನ್‌ಗಳ ಅಭಿವೃದ್ಧಿಗೆ ಸ್ಪಷ್ಟ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಸುಮನಹಳ್ಳಿ ಜಂಕ್ಷನ್‌ನಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಜೀಬ್ರಾ ಕ್ರಾಸಿಂಗ್ ಸ್ಥಳಗಳ ನಿರ್ಮಾಣ, ಐಲ್ಯಾಂಡ್ ರಚನೆ, ಬಸ್ ಬೇ ಸೇರಿ ಇತರ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು, ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು. ಜಂಕ್ಷನಲ್ಲಿರುವ ಪಾದಚಾರಿ ಮಾರ್ಗದಲ್ಲಿ ಗ್ರಿಲ್ ಅಳವಡಿಸಿದ್ದು, ನಾಗರಿಕರು ಈ ಮಾರ್ಗವನ್ನು ಬಳಸದೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾರೆ. ಈ ಸಮಸ್ಯೆ ನಿವಾರಿಸಲು ಗ್ರಿಲ್ಗಳನ್ನು ತೆರವುಗೊಳಿಸಿ ಬೇರೆಡೆ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಾಣಿಗಳ ವಿದ್ಯುತ್ ಚಿತಾಗಾರ ಪರಿಶೀಲನೆ:

ಸುಮನಹಳ್ಳಿ ಬಳಿಯಿರುವ ಪ್ರಾಣಿಗಳ ವಿದ್ಯುತ್ ಚಿತಾಗಾರದ ಕಾಮಗಾರಿ ಪ್ರಗತಿಯಲ್ಲಿದ್ದು, ಆ ಸ್ಥಳಕ್ಕೆ ಮುಖ್ಯ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದಲ್ಲಿ ಒಂದೇ ಪ್ರಾಣಿ ಚಿತಾಗಾರವಿದ್ದು, ಅದು ದುರಸ್ತಿಯಲ್ಲಿರುವುದರಿಂದ ಪ್ರಾಣಿಗಳು ಮೃತಪಟ್ಟರೆ ಅವುಗಳ ಅಂತ್ಯಕ್ರಿಯೆಗೆ ಸಾಕಷ್ಟು ಸಮಸ್ಯೆ ಆಗಲಿದೆ. ಹಾಗಾಗಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿದೇಶನ ನೀಡಿದರು.

ಚಿತಾಗಾರದ ಆವರಣದಲ್ಲಿ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವ ಕೇಂದ್ರವಿದ್ದು, ಅದನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ. ಕಾಮಗಾರಿ ಪೂರ್ಣಗೊಮಡ ತಕ್ಷಣ ಕಾರ್ಯಾರಂಭ ಮಾಡುವಂತೆ ಅಧಿಕಾರಿಗಳಿಗೆ ಮಹೇಶ್ವರ್ ರಾವ್ ಸೂಚಿಸಿದರು.

ತಪಾಸಣೆ ವೇಳೆ ಪಶ್ಚಿಮ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ಜಂಟಿ ಆಯುಕ್ತ ಸಂಗಪ್ಪ, ಮುಖ್ಯ ಅಭಿಯಂತರ ಶಶಿಕುಮಾರ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ವೃಷಭಾವತಿ ಕಣಿವೆಯಲ್ಲಿ ಹೂಳೆತ್ತಲು ಸೂಚನೆ:

ಸುಮನಹಳ್ಳಿ ಜಂಕ್ಷನ್ ಬಳಿಯ ವೃಷಭಾವತಿ ವ್ಯಾಲಿಯಲ್ಲಿ ಹೆಚ್ಚಿನ ಹೂಳು ತುಂಬಿಕೊಂಡಿದೆ. ಅದನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸ್ವಚ್ಚಗೊಳಿಸಬೇಕು. ಜತೆಗೆ ಕಣಿವೆಗೆ ಒಳಚರಂಡಿ ನೀರನ್ನು ನೇರವಾಗಿ ಬಿಟ್ಟಿದ್ದರೆ ಅದನ್ನು ತಡೆದು ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net