

ಬೆಂಗಳೂರು: ಮಹಾನಗರದಲ್ಲಿ ಪೂರ್ವ ಮುಂಗಾರು ಮಳೆ ಆರಂಭವಾಗಿದ್ದು, ತೀವ್ರ ಗಾಳಿಯಿಂದ ಧರೆಗುರುಳಿರುವ ಮರಗಳ ಅವಶೇಷ ಹಲವು ಬಡಾವಣೆಗಳ ರಸ್ತೆಬದಿ ಬಿದ್ದಿವೆ. ಇವುಗಳನ್ನು ತೆರವು ಮಾಡಬೇಕಿದ್ದ ಬಿಬಿಎಂಪಿ ಕಾರ್ಮಿಕರ ಕೊರತೆಯಿಂದ ಸಮಸ್ಯೆ ಎದುರಿಸುವಂತಾಗಿದೆ.
ಬಿದ್ದ ಮರಗಳನ್ನು ಮರುದಿನವೇ ತೆರವು ಮಾಡಬೇಕೆಂಬ ಪಾಲಿಕೆ ಮುಖ್ಯ ಆಯುಕ್ತರ ಸೂಚನೆ ನೀಡಿದ ಮರುದಿನವೂ ಹಲವೆಡೆ ಮರಗಳ ಅವಶೇಷ ಹಾಗೆಯೇ ಉಳಿದುಕೊಂಡಿವೆ. ಮಳೆಗಾಲದಲ್ಲಿ ತುರ್ತು ಕಾರ್ಯಕ್ಕಾಗಿ ನಿಯೋಜಿಸಿರುವ ತಂಡಗಳಿಗೆ ಉಪಕರಣ ಹೊಂದಿಸಿದ್ದರೂ, ಸಿಬ್ಬಂದಿಯನ್ನು ಪೂರ್ಣವಾಗಿ ನೀಡಿಲ್ಲ. ಇದರಿಂದ ಪ್ರತೀ ತಂಡದಲ್ಲಿ ಕೆಲವರಷ್ಟೇ ಇರುವ ಕಾರಣ ಅವರಿಂದ ಮರಗಳ ಅವಶೇಷವನ್ನು ಸಾಗಿಸಲು ಸಾಧ್ಯವಾಗಿಲ್ಲ. ಈ ಸಮಸ್ಯೆಯಿಂದಾಗಿ ಮರ, ರೆಂಬೆ-ಕೊಂಬೆಗಳ ತ್ಯಾಜ್ಯ ಫುಟ್‌ಪಾತ್‌ನಲ್ಲೇ ಉಳಿದಿವೆ.
ನಗರದಲ್ಲಿ ಭಾನುವಾರ ಸುರಿದ ಬಿರುಗಾಳಿ ಮಳೆಗೆ 120ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಜತೆಗೆ 100 ಮರಗಳ ರೆಂಬೆ-ಕೊಂಬೆಗಳು ನೆಲಕ್ಕುರುಳಿವೆ. ಪಾಲಿಕೆ ವ್ಯಾಪ್ತಿಯ ಪಶ್ಚಿಮ ವಲಯದಲ್ಲಿ ಅತೀ ಹೆಚ್ಚು 42 ಮರಗಳು ಹಾಗೂ 28 ರೆಂಬೆಗಳು ನೆಲಕ್ಕಚಿವೆ. ಪೂರ್ವ ಹಾಗೂ ದಕ್ಷಿಣ ವಲಯದಲ್ಲಿ ಕ್ರಮವಾಗಿ 25 ಮತ್ತು 24 ಮರಗಳು ಧರೆಗುರುಳಿವೆ. ನಗರದ ಕೇಂದ್ರ ಭಾಗದಲ್ಲೇ ಮಳೆಯಿಂದ ಹೆಚ್ಚಿನ ಅನಾಹುತ ಸಂಭವಿಸಿದ್ದರೂ, ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಇದರಿಂದಾಗಿಯೇ ಧರೆಗುರುಳಿದ ಮರಗಳ ತ್ಯಾಜ್ಯ ಹಾಗೆಯೇ ಉಳಿದಿದೆ ಎಂದು ನಾಗರಿಕರು ದೂರಿದ್ದಾರೆ.
ಶಿಥಿಲ ಮರಗಳ ತೆರವಿಗೆ ಬೆನ್ನು:
ಮಳೆಗಾಲಕ್ಕೆ ಮುನ್ನ ಬೇರು ಸಡಿಲಗೊಂಡು ನೆಲಕ್ಕುರಳಲಿರುವ ಹಾಗೂ ಶಿಥಿಲ ಮರಗಳನ್ನು ಗುರುತಿಸಿ ತೆರವು ಮಾಡಬೇಕಾಗುತ್ತದೆ. ಜತೆಗೆ ಸಂಚಾರಕ್ಕೆ ಅಡ್ಡಿಯಾಗುವ, ವಿದ್ಯುತ್ ತಂತಿಗಳಿಗೆ ಅಡ್ಡಿಯಾಗುವ ರೆಂಬೆ-ಕೊಂಬೆಗಳನ್ನು ಟ್ರಿಮ್ ಮಾಡುವ ಪದ್ಧತಿ ಹಿಂದಿನಿಂದಲೂ ಅನುಸರಿಸಿಕೊಂಡು ಬರಲಾಗುತ್ತಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಪದ್ಧತಿಗೆ ಪಾಲಿಕೆಯ ಅರಣ್ಯ ವಿಭಾಗ ಬೆನ್ನು ತಿರುಗಿಸಿದೆ. ಮರಗಳನ್ನು ಕಡಿಯಬಾರದು ಎಂಬ ನೆಪ ಮಾಡಿ ಶಿಥಿಲ ಮರಗಳನ್ನು ತೆರವುಗೊಳಿಸದಿರುವುದು ಅಪಾಯಕ್ಕೆ ಆಸ್ಪದ ನೀಡಿದೆ. ಸಚಿವರು, ಶಾಸಕರು ಹಾಗೂ ಪಾಲಿಕೆ ಮುಖ್ಯ ಆಯುಕ್ತರು ಸೂಚನೆ ನೀಡಿದ್ದರೂ, ಇಂತಹ ಮರಗಳನ್ನು ತೆರವು ಮಾಡಲು ಅರಣ್ಯಾಧಿಕಾರಿಗಳು ಇಲ್ಲದ ನೆಪ ಹೇಳಿ ಕರ್ತವ್ಯವಿಮುಖರಾಗಿದ್ದಾರೆ. ನಾಗರಿಕರ ಪ್ರಾಣ, ಆಸ್ತಿಪಾಸ್ತಿ ರಕ್ಷಣೆ ಮಾಡದಿದ್ದರೆ ಇಂತಹ ಅಧಿಕಾರಿಗಳಿದ್ದು ಏನು ಪ್ರಯೋಜನ ಎಂದು ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೇಗುಲ, ಮನೆ ಮೇಲೆ ಬಿದ್ದ ಮರ:
ಬಸವನಗುಡಿಯ ವಿದ್ಯಾಪೀಠ ಮುಖ್ಯರಸ್ತೆಯ ಬಾಲಾಜಿ ಲೇಔಟ್‌ನಲ್ಲಿರುವ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಬಳಿ ಬೃಹತ್ ಅರಳೀ ಮರವೊಂದು ಧರೆಗುರುಳಿರುವ ಬದಿಯಲ್ಲಿದ್ದ ದೇಗುಲ ಹಾಗೂ ಎರಡು ಮನೆಗಳಿಗೆ ಹಾನಿಯಾಗಿದೆ. ಮರ ಬಿದ್ದ ರಭಸಕ್ಕೆ ದೇಗುಲದ ಗೋಪುರ, ಕಾಂಪೌಂಡ್‌ಗೆ ಭಾರೀ ಹಾನಿಯಾಗಿದೆ.
ಕಳೆದ ಮಾ.22ರಂದು ಇಲ್ಲಿನ ನಾಗರಿಕರು ಅರಳೀ ಮರ ಬೀಳಲಿದ್ದು, ತಕ್ಷಣವೇ ತೆರವು ಮಾಡುವಂತೆ ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದರು. ಜತೆಗೆ ಸ್ಥಳೀಯ ಶಾಸಕರ ಕಚೇರಿಗೂ ಪತ್ರ ತಲುಪಿಸಿದ್ದರು. ಆದರೆ, ಪಾಲಿಕೆ ಸಿಬ್ಬಂದಿ ಮರ ಬೀಳದು, ನಿಮಗೇನು ತೊಂದರೆ ಆಗದೆಂದು ಭರವಸೆ ನೀಡಿ ವಾಪಸಾಗಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಅರಳೀ ಮರದ ಒಂದು ಭಾಗ ಸಮೀಪದ ಮನೆ ಮೇಲೆ ಬಿದ್ದು ಕಟ್ಟಡಕ್ಕೆ ಹಾನಿಯಾಗಿತ್ತು. ಆಗಲೂ ಮರ ತೆರವಿಗೆ ಅರಣ್ಯ ಅಧಿಕಾರಿಗಳು ಸ್ಪಂದಿಸಲಿಲ್ಲ. ಭಾನುವಾರ ಭಾರೀ ಗಾಳಿ ಮಳೆಗೆ ಉಳಿದಿದ್ದ ಮರದ ಭಾಗಗಳು ಧರೆಗುರುಳಿವೆ. ಈ ವೇಳೆ ದೇವಸ್ಥಾನ ಹಾಗೂ ಮನೆಯೊಂದರ ತಾರಸಿಗೆ ಹೆಚ್ಚಿನ ಹಾನಿ ಸಂಭವಿಸಿದೆ. ಬುಧವಾರದವರೆಗೂ ಬಿದ್ದ ಮರದ ಅವಶೇಷವನ್ನು ತೆರವು ಮಾಡಿರಲಿಲ್ಲ. ಮಧ್ಯಾಹ್ನದ ಬಳಿಕ ಸ್ಥಳೀಯರು ಒತ್ತಡ ಹಾಕಿದ ಬಳಿಕ ಜೆಸಿಬಿ ಯಂತ್ರದ ಮೂಲಕ ಧರೆಗುರುಳಿದ ಅರಳೀ ಮರದ ಭಾಗಗಳನ್ನು ಹೊರಹಾಕಲಾಯಿತು. ಎರಡು ಲಾರಿಗಳಲ್ಲಿ ದಿಮ್ಮೆಗಳನ್ನು ತುಂಬಿ ಸಾಗಿಸಿದ್ದು, ಇನ್ನೂ 2-3 ಲೋಡ್ ಆಗುವಷ್ಟು ಮರದ ತ್ಯಾಜ್ಯ ಅಲ್ಲೇ ಉಳಿದಿದೆ. ದೂರು ನೀಡಿದ ಬಳಿಕವೂ ಸ್ಪಂದಿಸದ ಪಾಲಿಕೆ ಅಧಿಕಾರಿಗಳು ನಮ್ಮ ಮನೆಗಳಿಗೆ ಹಾಗಿರುವ ಹಾನಿಯನ್ನು ತುಂಬಿಸಿಕೊಡುವರೇ ಎಂದು ಸ್ಥಳೀಯರು ಪ್ರಶ್ನಿಸಿದರು.
ರಸ್ತೆಯಲ್ಲೇ ದೇಗುಲ ನಿರ್ಮಾಣ?:
ಬಾಲಾಜಿ ಲೇಔಟ್‌ನ 1ನೇ ಮುಖ್ಯರಸ್ತೆಯ 4ನೇ ಅಡ್ಡರಸ್ತೆಯು ವಿದ್ಯಾಪೀಠ ಮುಖ್ಯರಸ್ತೆಗೆ ಕೂಡು ಸ್ಥಳದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಇದರಿಂದ 4ನೇ ಅಡ್ಡರಸ್ತೆಯು ಪೂರ್ಣಗೊಳ್ಳದೆ ದೇಗುಲದ ಬಳಿಯೇ ಕೊನೆಗೊಳ್ಳುತ್ತದೆ. ಈ ಸ್ವತ್ತು ಖಾಸಗಿ ವ್ಯಕ್ತಿಗೆ ಸೇರಿದ್ದು, ದೇವಾಲಯದ ನಿರ್ವಹಣೆಗೆ ಸಮಿತಿಯನ್ನು ರಚಿಸಿಲ್ಲ. ಇಲ್ಲಿನ ಅರ್ಚಕರು ಕೂಡ ಭಕ್ತರ ಸಲಹೆ-ಸೂಚನೆಗೆ ಸೊಪ್ಪು ಹಾಕದೆ ಸ್ವಯಂ ನಿರ್ಣಯ ಕೈಗೊಳ್ಳುತ್ತಿದ್ದಾರೆ. ಆರಳೀಮರದ ಬೇರುಗಳನ್ನು ಆಳಕ್ಕೆ ಕತ್ತರಿಸಿ ಅಲ್ಲಿ ಹೊಸ ಪ್ರಾಂಗಣ ನಿರ್ಮಿಸಲು ಯತ್ನಿಸಿದ್ದೇ ಮರ ಧರೆಗುರುಳಲು ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯರು.