

ಬೆಂಗಳೂರು: ನಗರದಲ್ಲಿರುವ ಕೆರೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಬೇಲಿ ಹಾಕುವ ಕಾರ್ಯಕ್ಕೆ ವೇಗ ನೀಡಲು ಪಾಲಿಕೆ ನಿರ್ಧರಿಸಿದೆ. ಈವರೆಗೆ ಯಾವ ಜಲಮೂಲಗಳಿಗೆ ಬೇಲಿ ಹಾಕಿಲ್ಲವೋ ಅಂತಹವುಗಳನ್ನು ಗುರುತಿಸಿ ಆದ್ಯತೆ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 183 ಕೆರೆಗಳಿವೆ. ಇವುಗಳ ಪೈಕಿ ಅರ್ಧದಷ್ಟು ಕೆರೆಗಳಿಗೆ ಬೇಲಿ ಇಲ್ಲ. ಇದರಿಂದಾಗಿ ಕೆಲವೆಡೆ ಒತ್ತುವರಿಯಾಗಿವೆ. ಒತ್ತುವರಿ ತಡೆಯುವಂತೆ ಸರ್ಕಾರ ಪದೇ ಪದೆ ಸೂಚನೆ ನೀಡಿದ್ದರೂ, ನಾನಾ ನೆಪ ಮಾಡಿ ಪಾಲಿಕೆ ಆ ಕೆಲಸವನ್ನು ನಿಧಾನಗೊಳಿಸಿತ್ತು. ಇದೀಗ ನ್ಯಾಯಾಲಯದ ಸೂಚನೆ ಮೇರೆಗೆ ಕೆರೆ ಸಂರಕ್ಷಣೆ ಜತೆಗೆ ಜಲಮೂಲಗಳ ಪೂರ್ಣ ಜಾಗವನ್ನು ಉಳಿಸಿಕೊಳ್ಳಲು ೆನ್ಸಿಂಗ್ ಮಾಡಲಾಗುತ್ತಿದೆ. ಪಾಲಿಕೆಗೆ ಸೇರಿದ ಹೆಚ್ಚಿನ ಕೆರೆಗಳು ಹೊರ ವಲಯಗಳಲ್ಲೇ ಹೆಚ್ಚಿವೆ. ನಗರದ ಕೇಂದ್ರ ಭಾಗದಲ್ಲಿರುವ ಕೆರೆಗಳಿಗೆ ಬೇಲಿ ಹಾಕಿರುವುದರಿಂದ ಈಗ ಹೊಸ ವಲಯಗಳಲ್ಲಿನ ಎಲ್ಲ ಕೆರೆಗಳನ್ನು ಫೆನ್ಸಿಂಗ್ ಮಾಡಿ ರಕ್ಷಿಸಲಾಗುತ್ತದೆ. ಇದಕ್ಕಾಗಿ ವಾರ್ಷಿಕ ನಿರ್ವಹಣೆ ಕಾರ್ಯದ ಜತೆಗೆ ಫೆನ್ಸಿಂಗ್‌ಗೂ ಅನುದಾನ ಒದಗಿಸಲಾಗುತ್ತಿದೆ.
ಮಹದೇವಪುರ, ಕೆ.ಆರ್.ಪುರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಆರ್.ಆರ್.ನಗರ, ಯಶವಂತಪುರ, ದಾಸರಹಳ್ಳಿ, ಬ್ಯಾಟರಾಯನಪುರ, ಯಲಹಂಕ ವಿಧಾನಸಭಾ ಕ್ಷೇತ್ರಗಳಿಗೆ ಸೇರಿದ ಕೆರೆಗಳಿಗೆ ಬೇಲಿ ಹಾಕಲು ಪಾಲಿಕೆ ವಿಶೇಷ ಕ್ರಮ ಕೈಗೊಂಡಿದೆ. ಇದಕ್ಕಾಗಿ ವಿಧಾನಸಭಾ ಕ್ಷೇತ್ರವಾರು ಟೆಂಡರ್ ಆಹ್ವಾನಿಸಲಾಗುತ್ತಿದೆ. ಪ್ರತೀ ಕ್ಷೇತ್ರಕ್ಕೆ 2-3 ಕೋಟಿ ರೂ. ಅನುದಾನದಲ್ಲಿ ಬೇಲಿ ಕಾರ್ಯ ಕೈಗೊಳ್ಳಲಾಗುತ್ತಿದೆ.
ಒತ್ತುವರಿ ತೆರವು ಬಳಿಕ ಫೆನ್ಸಿಂಗ್‌ಗೆ ಆಗ್ರಹ:
ನಗರದಲ್ಲಿರುವ ಕೆರೆಗಳ ಪೈಕಿ ಅರ್ಧದಷ್ಟು ಒತ್ತುವರಿಗೆ ಒಳಗಾಗಿವೆ. ಇವುಗಳಲ್ಲಿ ಕೆಲವಷ್ಟೇ ಕಡಿಮೆ ವಿಸ್ತೀರ್ಣದ ಒತ್ತುವರಿ ಆಗಿದೆ. ಉಳಿದವು ಹೆಚ್ಚಿನ ಒತ್ತುವರಿ ಆಗಿರುವುದರಿಂದ ಅವುಗಳನ್ನು ತೆರವು ಮಾಡಬೇಕು. ಆ ಬಳಿಕವೇ ಬೇಲಿ ಕಾರ್ಯ ಕೈಗೆತ್ತಿಕೊಳ್ಳಬೇಕು. ಒಮ್ಮೆ ಬೇಲಿ ಹಾಕಿದ ಬಳಿಕ ತೆರವು ಮಾಡದೆ ಉಳಿದ ಭಾಗವನ್ನು ಕೆರೆ ವ್ಯಾಪ್ತಿಗೆ ತರುವುದು ಕಷ್ಟವಾಗುತ್ತದೆ. ಹೀಗಾಗಿ ಒತ್ತುವರಿ ತೆರವು ಮಾಡಿದ ನಂತರವಷ್ಟೇ ಫೆನ್ಸಿಂಗ್ ಮಾಡುವುದು ಸೂಕ್ತ ಎಂದು ಕೆರೆ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸ್ವಯಂಸೇವಾ ಸಂಘಟನೆಗಳ ಪ್ರಮುಖರು ಬಿಬಿಎಂಪಿ ಮುಖ್ಯಸ್ಥರನ್ನು ಆಗ್ರಹಿಸಿದ್ದಾರೆ.