ಬಿಬಿಎಂಪಿ ಅಖಂಡವೋ ತುಂಡು-ತುಂಡೋ?: ವಿಭಜನೆಗೆ ಕೈ-ಕಮಲ ಫೈಟ್​

bbmp vibhajane
Published on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜಿಸಿ ಮೂರು ಅಥವಾ ಐದು ಪಾಲಿಕೆಯನ್ನಾಗಿ ರಚಿಸುವ ಪ್ರಸ್ತಾಪಕ್ಕೆ ಮತ್ತೆ ಮುನ್ನೆಲಗೆ ಬಂದಿದೆ. ಆದರೆ, ಈ ವಿಚಾರದಲ್ಲಿ ಪರ-ವಿರೋಧದ ನಿಲುವು ವ್ಯಕ್ತವಾಗಿದೆ. ಸರ್ಕಾರದ ನಿಲುವಿಗೆ ಕಾಂಗ್ರೆಸ್ ಶಾಸಕರು ಸಹಮತ ವ್ಯಕ್ತಪಡಿಸಿದ್ದರೆ, ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ನವರು ಆಕ್ತೀಷೇಪದ ದನಿ ಎತ್ತಿದ್ದಾರೆ.

ಬಿಬಿಎಂಪಿಗೆ ಚುನಾವಣೆ ನಡೆದು 4 ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ ಚುನಾಯಿತ ಸರ್ಕಾರ ಸ್ಥಾಪಿಸಬೇಕೆಂಬ ಒತ್ತಾಯದ ಮಧ್ಯೆ ವಿಭಜನೆ ಪ್ರಸ್ತಾಪ ಮತ್ತೊಮ್ಮೆ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಸಾರ್ವಜನಿಕರ ವಲಯದಲ್ಲಿ ಹೆಚ್ಚಿನ ಮಂದಿ ವಿರೋಧ ವ್ಯಕ್ತವಾಗುತ್ತಿದ್ದು, ಕೆಲ ಸಂಘಟನೆಗಳು ಆಡಳಿತ ದೃಷ್ಟಿಯಿಂದ ಸಣ್ಣ ಪಾಲಿಕೆಗಳು ಅಸ್ತಿತ್ವಕ್ಕೆ ಬರುವುದು ಸೂಕ್ತ ಎಂಬ ಅಭಿಪ್ರಾಯವನ್ನು ಮುಂದಿಟ್ಟಿವೆ.

ಈ ನಿಟ್ಟಿನಲ್ಲಿ ಇತ್ತೀಚಿಗೆ ಸರ್ಕಾರ ಮತ್ತೊಮ್ಮೆ ವಿಭಜನೆ ಮಂತ್ರವನ್ನು ಜಪಿಸಿರುವುದು ಚುನಾಯಿತ ಜನಪ್ರತಿನಿಧಿಗಳ ನಿಲುವು ಪ್ರಾಮುಖ್ಯತೆ ಪಡೆಯಲಿದೆ. ಆದರೆ ಶಾಸಕರು ತಮ್ಮ ಪಕ್ಷಗಳು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗುವ ನಿಲುವಿಗೆ ಅಂಟಿಕೊಂಡಿದ್ದಾರೆ. ಹಾಗಾಗಿ ಆಡಳಿತಾರೂಢ ಪಕ್ಷ ವಿಭಜನೆ ಮಾಡಲೇಬೇಕು ಎಂದು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಇದಕ್ಕೆ ಅಷ್ಟೇ ವಿರೋಧ ವ್ಯಕ್ತಪಡಿಸುತ್ತಿರುವ ಪ್ರತಿಪಕ್ಷದ ಶಾಸಕರು ಬೆಂಗಳೂರಿನ ಇಮೇಜ್‌ಗೆ ಧಕ್ಕೆ ತರುವ ಹಾಗೂ ಇಲ್ಲಿನ ಕನ್ನಡಿಗರನ್ನು ಒಡೆದು ಆಳುವ ನೀತಿಗೆ ಕಾಂಗ್ರೆಸ್ ಮಣೆ ಹಾಕಿದೆ ಎಂಬುದಾಗಿ ಆರೋಪಗಳ ಸುರಿಮಳೆ ಸುರಿಸುತ್ತಿದ್ದಾರೆ.

ಭವಿಷ್ಯದ ಅಭಿವೃದ್ಧಿಗೆ ವಿಭಜನೆ ಅಗತ್ಯ:

ಬೃಹತ್ ಆಗಿ ಬೆಳವಣಿಗೆ ಹೊಂದಿರುವ ಬೆಂಗಳೂರು ತನ್ನ ಖ್ಯಾತಿಗೆ ತಕ್ಕಂತೆ ಮೂಲಸೌಕರ್ಯ ಹೊಂದಿಲ್ಲ ಎಂಬುದನ್ನು ನಾಗರಿಕರು ಪದೇ ಪದೆ ಹೇಳುತ್ತಿದ್ದಾರೆ. ಬಿಬಿಎಂಪಿ ಕೂಡ ತನ್ನ ಈಗಿನ ಆಡಳಿತಶೈಲಿಯಲ್ಲಿ ನಗರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ವಿಲವಾಗಿದೆ. ಭ್ರಷ್ಟಾಚಾರ ಪ್ರಮಾಣ ಹೆಚ್ಚುತ್ತಿದೆ. ಜನರ ಆಶೋತ್ತರ ಕೂಡ ಈಡೇರಿಸಲು ಕೂಡ ಸಾಧ್ಯವಾಗುತ್ತಿಲ್ಲ. ಮುಂದಿನ ಸವಾಲುಗಳನ್ನು ಎದುರಿಸಲು ಸ್ಪಷ್ಟ ಗುರಿ ಹೊಂದಿಲ್ಲ. ಪಾಲಿಕೆ ಒಂದು ರಸ್ತೆಗೆ ಡಾಂಬರು ಹಾಕಿದರೆ ಅದರ ಮರುದಿನವೇ ಇತರ ಸಂಸ್ಥೆಗಳನ್ನು ಕೇಬಲ್ ಅಥವಾ ಕೊಳವೆ ಅಳವಡಿಸಲು ರೋಡ್ ಕಟ್ಟಿಂಗ್ ಮಾಡುತ್ತಾರೆ. ಇದರಿಂದ ಸರ್ಕಾರಿ ಸಂಸ್ಥೆಗಳ ಮಧ್ಯೆ ಸಮನ್ವಯ ಕೊರತೆ ಕಾಡುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಸ್ಪಷ್ಟ ಹಾಗೂ ಶಾಶ್ವತ ಪರಿಹಾರ ಒದಗಿಸಲು ಈಗಿರುವ ಬಿಬಿಎಂಪಿಯನ್ನು 3 ಅಥವಾ 5 ಪಾಲಿಕೆಯನ್ನಾಗಿ ವಿಂಗಡಿಸಿ ಉತ್ತಮ ಆಡಳಿತ ನೀಡುವ ಯತ್ನ ನಡೆದಿದೆ. ಇದಕ್ಕಾಗಿ ರಚಿಸಿರುವ ಸಮಿತಿ ಕೂಡ ಭವಿಷ್ಯದ ಬೆಂಗಳೂರು ಬೆಳವಣಿಗೆಯ ದೃಷ್ಟಿಕೋನವನ್ನು ಇಟ್ಟುಕೊಂಡು ವಿಭಜನೆ ಮಾಡಿ ಸರ್ಕಾರಕ್ಕೆ ತನ್ನ ಶಿಾರಸು ನೀಡಲಿದೆ. ಮುಖ್ಯವಾಗಿ ಜನರಿಗೆ ವಾರ್ಡ್ ಮಟ್ಟದಲ್ಲೇ ಸರ್ಕಾರಿ ಸೌಲಭ್ಯಗಳು ಸಿಗುವ ರೀತಿ ಆಡಳಿತ ವಿಕೇಂದ್ರೀಕರಣ ಮಾಡುವ ಅಂಶಗಳಿರಲಿವೆ. ಇದರ ಸಾಧಕ-ಬಾಧಕಗಳನ್ನು ಪರಾಮರ್ಶಿಸಿ ವಿಭಜನೆ ಕಾರ್ಯಕ್ಕೆ ಸ್ಪಷ್ಟ ರೂಪ ನೀಡಲಾಗುತ್ತದೆ. ಇದರಿಂದ ಖಂಡಿತವಾಗಿಯೂ ಬೆಂಗಳೂರು ನಗರ ಭವಿಷ್ಯದ ಸವಾಲುಗಳನ್ನು ಮೆಟ್ಟಿನಿಂತು ಅಭಿವೃದ್ಧಿಯತ್ತ ಸಾಗಲಿದೆ ಎಂಬ ವಿಶ್ವಾಸ ಇದೆ.

- ರಿಜ್ವಾನ್ ಅರ್ಷದ್, ಶಿವಾಜಿನಗರ ಕ್ಷೇತ್ರದ ಶಾಸಕ

ವೈಜ್ಞಾನಿಕ ಚರ್ಚೆಯಾಗಲಿ:

ಬಿಬಿಎಂಪಿಯನ್ನು 3 ಅಥವಾ 5 ಪಾಲಿಕೆಯನ್ನಾಗಿಸುವ ವಿಚಾರದಲ್ಲಿ ಮೊದಲು ವಿಸ್ತೃತ ಚರ್ಚೆಯಾಗಬೇಕು. ಅದರಲ್ಲೂ ವೈಜ್ಞಾನಿಕವಾಗಿ ಚರ್ಚೆ ಕೈಗೊಂಡು ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ನೀಡಬೇಕು. ಈಗಿನ ಸ್ಥಿತಿಯಲ್ಲಿ ಪಾಲಿಕೆಯ ಆಡಳಿತ ವಿಕೇಂದ್ರೀಕರಣ ಆಗಬೇಕು ಎಂಬುದು ನಿಜ. ಆದರೆ, ಇದೇ ನೆಲೆಗಟ್ಟಿನಲ್ಲಿ ಹಿಂದೊಮ್ಮೆ ದೆಹಲಿ ಪಾಲಿಕೆಯನ್ನು ಮೂರು ವಿಭಾಗ ಮಾಡಿ ಕೆಲ ವರ್ಷಗಳ ಬಳಿಕ ಸಮಸ್ಯೆ ಉದ್ಭವಿಸಿತೆಂದು ಒಂದೇ ಪಾಲಿಕೆಯನ್ನಾಗಿ ಮಾಡಲಾಗಿದೆ. ಇಂತಹ ಸ್ಥಿತಿ ನಮ್ಮ ಬಿಬಿಎಂಪಿಗೆ ಬಾರದಿರಲಿ. ಹಾಗಾಗಿ ಸಾರ್ವಜನಿಕರನ್ನು ಒಳಗೊಂಡಂತೆ ಎಲ್ಲರೂ ತಮ್ಮ ನಿಲುವು ಕೈಗೊಳ್ಳಲು ಮುಕ್ತ ವೇದಿಕೆ ಕಲ್ಪಿಸಬೇಕಿದೆ. ಇಲ್ಲದಿದ್ದಲ್ಲಿ ವಿಭಜನೆ ವಿಚಾರದಲ್ಲಿ 2 ಹೆಜ್ಜೆ ಮುಂದೆ ಇಟ್ಟು 3 ಹೆಜ್ಜೆ ಹಿಂದೆ ಬರುವಂತಹ ಸ್ಥಿತಿ ಆಗಬಾರದು. ಮುಖ್ಯವಾಗಿ ನಗರದಲ್ಲಿ ಬೆಂಗಳೂರಿನವರು ಮೈನಾರಿಟಿಗೆ ಇಳಿದುಬಿಡುತ್ತಾರೇನೋ ಎಂಬ ಶಂಕೆ ವ್ಯಕ್ತವಾಗಿದೆ. ಈ ವಿಚಾರವನ್ನು ಲಘವಾಗಿ ಪರಿಗಣಿಸದೆ ಚರ್ಚೆಯನ್ನು ಉಪಯುಕ್ತತೆ ರೀತಿ ಕೈಗೊಳ್ಳಬೇಕಿದೆ. ಪ್ರಸ್ತುತ ಆಡಳಿತ ಪಕ್ಷ್ವವು ಎಲೆಕ್ಷನ್ ಗೆಲ್ಲಲು ವಿಭಜನೆ ಅಸವನ್ನಾಗಿ ಮಾಡಿಕೊಂಡಿರುವಂತಿದೆ. ಇದು ಸಲ್ಲದು. ಏನೇ ಆದರೂ ವಿಭಜನೆ ವಿಚಾರದಲ್ಲಿ ನಗರ ಹಾಗೂ ಇಲ್ಲಿನ ಜನರಿಗೆ ಒಳಿತಾಗಬೇಕು. ಈ ಕಾರಣಕ್ಕಾಗಿ ಸರ್ಕಾರ ವಿಭಜನೆ ಬಗ್ಗೆ ವಿವರವಾದ ಚರ್ಚೆಗೆ ಅವಕಾಶ ಕಲ್ಪಿಸಬೇಕು.

- ಎಸ್.ಸುರೇಶ್‌ಕುಮಾರ್, ರಾಜಾಜಿನಗರ ಕ್ಷೇತ್ರದ ಶಾಸಕ

ಅಖಂಡ ಬೆಂಗಳೂರು ಆಗಿಯೇ ಮುಂದುವರಿಯಲಿ:

ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಉದ್ದೇಶದಿಂದ ಆಡಳಿತರೂಢ ಕಾಂಗ್ರೆಸ್ ಸರ್ಕಾರ ವಿಭಜನೆ ಮಂತ್ರವನ್ನು ಜಪಿಸುತ್ತಿದೆ. ಆದರೆ, ಎಲ್ಲ ದೃಷ್ಟಿಯಿಂದಲೂ ಅಖಂಡ ಬೆಂಗಳೂರು ಆಗಿಯೇ ಮುಂದುವರಿಯುವುದು ಸೂಕ್ತ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಕಳೆದಿದ್ದರೂ, ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಮರಿಚಿಕೆಯಾಗಿದೆ. ಒಂದು ಗುದ್ದಲಿಪೂಜೆ, ಶಂಕುಸ್ಥಾಪನೆ ಅಥವಾ ಕಾರ್ಯಕ್ರಮವೊಂದರ ಉದ್ಘಾಟನೆ ಮಾಡಿಲ್ಲ. ಇದರಿಂದಾಗಿ ನಗರವು ಅನಾಥವಾಗಿದೆ. ಶಾಸಕರ ಕ್ಷೇತ್ರಗಳಿಗೆ ಬೋರ್‌ವೆಲ್ ಕೊರೆಯಿಸಲು ಅನುದಾನ ಬಿಡುಗಡೆ ಮಾಡಿಲ್ಲ. ಸಚಿವರು ಮಾತ್ರ ತಮ್ಮ ಸ್ವಕ್ಷೇತ್ರ, ವೈಯಕ್ತಿಕ ಕೆಲಸಕ್ಕೆ ಸೀಮಿತವಾಗಿದ್ದಾರೆ. ಇದರಿಂದಾಗಿಯೇ ಕಾಂಗ್ರೆಸ್ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ನಗರದ ನಾಲ್ಕೂ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದೆ. ಈಗ ಬಿಬಿಎಮಪಿ ಚುನಾವಣೆ ನಡೆದರೂ ಕಾಂಗ್ರೆಸ್ ಸೋಲುವುದು ನಿಶ್ಚಿತ. ಈ ಉದ್ದೇಶದಿಂದಾಗಿಯೇ ಕಾಂಗ್ರೆಸ್ ಸರ್ಕಾರ ಪಾಲಿಕೆಗೆ ಚುನಾವಣೆ ನಡೆಸುವ ಬದಲು ವಿಭಜನೆ ಜಪ ಮಾಡುತ್ತಿದೆ. ಇದನ್ನು ಜನರು ಕೂಡ ಅರ್ಥೈಸಿಕೊಂಡಿದ್ದಾರೆ. ಒಂದು ವೇಳೆ ಬಿಬಿಎಂಪಿ ಚುನಾವಣೆ ನಡೆದರೂ ಕಾಂಗ್ರೆಸ್ ಸೋಲಿಸಲು ಜನತೆ ನಿರ್ಧರಿಸಿದ್ದಾರೆ. ವಿಭಜನೆ ಬದಲು ಹಾಲಿ ವ್ಯವಸ್ಥೆಯಲ್ಲೇ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಿ ವಲಯಗಳಿಗೆ ಹೆಚ್ಚಿನ ಅನುದಾನ, ಆದ್ಯತೆ ನೀಡಲಿ. ಇದನ್ನು ಮಾಡಲು ಸಬೂಬು ಹೇಳುವ ಸರ್ಕಾರ ವಿಭಜನೆ ತಂತ್ರಗಾರಿಕೆಯನ್ನು ಕೈಬಿಟ್ಟು ಚುನಾವಣೆ ನಡೆಸಲು ಮುಂದಾಗಲಿ.

- ಬೈರತಿ ಬಸವರಾಜ್, ಕೆ.ಆರ್.ಪುರ ಕ್ಷೇತ್ರದ ಶಾಸಕ

ಕಾಂಗ್ರೆಸ್ ನಿಲುವೇನು?:

* ವಿಭಜನೆಯಿಂದ ಆಡಳಿತ ವಿಕೇಂದ್ರೀಕರಣಗೊಂಡು ಜನರಿಗೆ ಉತ್ತಮ ಸೌಲಭ್ಯ ನೀಡಬಹುದು.

* ಸಣ್ಣ ಪಾಲಿಕೆಗಳಿದ್ದಲ್ಲಿ ಆಡಳಿತ ಸುಲಭ, ಜನರಿಗೂ ಹೆಚ್ಚು ಮೂಲಸೌಕರ್ಯ ಒದಗಿಸಬಹುದು.

* ಸಣ್ಣ ವಾರ್ಡ್‌ಗಳಿದ್ದಲ್ಲಿ ಕಾರ್ಪೊರೇಟರ್‌ಗಳು ಜನರೊಟ್ಟಿಗೆ ಸೇರಿ ಕೆಲಸ ಮಾಡಬಹುದು.

* ಸ್ಥಳೀಯ ಮಟ್ಟದಲ್ಲೇ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದು ಸುಲಭ.

* ಭವಿಷ್ಯದ ಬೆಂಗಳೂರನ್ನು ವ್ಯವಸ್ಥಿತವಾಗಿ ಪುನರ್ ರೂಪಿಸಲು ಅನುಕೂಲ.

ಬಿಜೆಪಿ, ಜೆಡಿಎಸ್ ನಿಲುವೇನು?:

* ಬೆಂಗಳೂರು ಅಖಂಡವಾಗಿರಲು ಬಿಬಿಎಂಪಿ ಅಸ್ತಿತ್ವ ಮುಂದುವರಿಯಬೇಕು.

* ವಿಕೇಂದ್ರೀಕರಣ ನೆಪದಲ್ಲಿ ನಗರವನ್ನು ವಿಭಾಗಿಸಿದರೆ ಅಭಿವೃದ್ಧಿಗೆ ಧಕ್ಕೆಯಾಗಲಿದೆ.

* ರಾಜಧಾನಿಯಲ್ಲಿರುವ ಕನ್ನಡಿಗರ ಭಾವನೆಗಳನ್ನು ಘಾಸಿಗೊಳಿಸಿ ವಿಭಜನೆ ಸಲ್ಲ.

* ವಿಭಜನೆಗೆ ಬದಲು ಅಧಿಕಾರ ವಿಕೇಂದ್ರೀಕರಣ ಮಾಡುವುದು ಉತ್ತಮ ನಿರ್ಧಾರ.

* ವಿಭಜನೆ ಮಾಡಿಯೇ ತೀರುತ್ತೇವೆ ಎಂದಾದಲ್ಲಿ ಮೊದಲು ಸಾರ್ವಜನಿಕ ಚರ್ಚೆಯಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net