

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೆ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ಹಿರಿಯ ಅಧಿಕಾರಿಗಳೊಂದಿಗೆ ವರ್ಚ್ಯುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡೆಂಘೆ ನಿಯಂತ್ರಣಕ್ಕೆ ಈಗಿನಿಂದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ನಾಗರಿಕರಲ್ಲಿ ಜಾಗೃತಿ ಮೂಡಿಸುವ ಜತೆಗೆ ಸ್ವಚ್ಛತೆ ಕಾಪಾಡದವರಿಗೆ ದಂಡ ವಿಧಿಸುವಂತಹ ಬಿಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಡೆಂಘೆ ಪ್ರಕರಣಗಳನ್ನು ನಿಯಂತ್ರಿಸಲು ಆರೋಗ್ಯ ವಿಭಾಗದ ಜತೆಗೆ ತೋಟಗಾರಿಕಾ, ಅರಣ್ಯ, ಘನತ್ಯಾಜ್ಯ, ಬೃಹತ್ ನೀರುಗಾಲುವೆ, ರಸ್ತೆ ಮೂಲಸೌಕರ್ಯ ವಿಭಾಗ ಸೇರಿ ಇನ್ನಿತರ ವಿಭಾಗಗಳೊಂದಿಗೆ ವಲಯವಾರು ಸಮನ್ವಯ ಸಾಧಿಸಿ ನೀರು ನಿಲ್ಲುವ ಪ್ರದೇಶಗಳನ್ನು ಗುರುತಿಸಿ ನೀರು ನಿಲ್ಲದಂತೆ ಕ್ರಮವಹಿಸಲು ಸೂಚಿಸಲಾಯಿತು.
ಲಾರ್ವಾ ಉತ್ಪತ್ತಿ ತಾಣ ಗುರುತಿಸಿ:
ನಗರದಲ್ಲಿ ಹೆಚ್ಚು ಡೆಂಘೆ ಪ್ರಕರಣಗಳು ಕಂಡು ಬರುವ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಕ್ರಮ ಕೈಗೊಂಡು ಸೊಳ್ಳೆಗಳ ನಿಯಂತ್ರಣ ಮಾಡಬೇಕು. ಲಾರ್ವಾ ಉತ್ಪತ್ತಿಯಾಗುವ ತಾಣಗಳನ್ನು ಗುರುತಿಸಿ ಫಾಗಿಂಗ್ ಮತ್ತು ಕೀಟನಾಶಕ ಸಿಂಪಡಣೆ ಮಾಡಿ ಸೊಳ್ಳೆ ಉತ್ಪತ್ತಿ ನಿಯಂತ್ರಿಸಬೇಕು ಎಂದು ಅವರು ವಿವರಿಸಿದರು.
ಫೀವರ್ ಕ್ಲಿನಿಕ್ ಸ್ಥಾಪಿಸಿ:
ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಮಾತನಾಡಿ, ನಗರದಲ್ಲಿ ಡೆಂಘೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ಲಾರ್ವಾ ಪ್ರದೇಶಗಳನ್ನು ಗುರುತಿಸಿ ಫಾಗಿಂಗ್ ಮಾಡಬೇಕು. ಪ್ರಕರಣಗಳು ಹೆಚ್ಚು ಕಂಡು ಬರುವ ಪ್ರದೇಶಗಳಲ್ಲಿ ಫೀವರ್ ಕ್ಲಿನಿಕ್‌ಗಳನ್ನು ಸ್ಥಾಪಿಸಬೇಕು. ಖಾಲಿ ಸ್ಥಳಗಳು, ಕಟ್ಟಡ ನಿರ್ಮಾಣ ಸೇರಿ ಇನ್ನಿತರ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡದವರಿಗೆ ದಂಡ ವಿಧಿಸಬೇಕು ಎಂದು ಸೂಚಿಸಿದರು.
ಡೆಂಘೆ ಮೇಲ್ವಿಚಾರಣೆಗಾಗಿ ಪ್ರತಿ ವಲಯಕ್ಕೆ ಪ್ರತ್ಯೇಕವಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನಿಯೋಜಿಸಬೇಕು. ಪ್ರತಿ ವಲಯಕ್ಕೆ ಒಬ್ಬರಂತೆ 8 ಕೀಟಶಾಸ್ತ್ರ ತಜ್ಞರನ್ನು ನಿಯೋಜಿಸಿ ಡೆಂಘೆ ಪರೀಕ್ಷಿಸುವ ಸಲುವಾಗಿ ಟೆಸ್ಟ್ ಕಿಟ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಅವರು ವಿವರಿಸಿದರು.
ಸಭೆಯಲ್ಲಿ ಪಾಲಿಕೆಯ ಎಲ್ಲ ವಲಯಗಳ ಆಯುಕ್ತರು, ಮುಖ್ಯ ಆರೋಗ್ಯಾಧಿಕಾರಿ, ವಲಯ ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
ವರ್ಷವಾರು ಡೆಂಘೆ ಪ್ರಕರಣಗಳ ವಿವರ:
2022 2,335
2023 11,136
2024 15,282
2025 329 (ಜ.1-ಮಾ.31)
ನಗರದಲ್ಲಿ 2024ರಲ್ಲಿ 15,282 ಪ್ರಕರಣಗಳು ಕಂಡುಬಂದಿದ್ದು, ವಲಯವಾರು ಸಮಗ್ರ ಯೋಜನೆ ರೂಪಿಸಿ ಡೆಂಘೆ ಹರಡದಂತೆ ನಿಯಂತ್ರಿಸಲಾಗುವುದು. ಕಳೆದ ವರ್ಷ ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರುತಿಸಿ 24 ಲಕ್ಷ ರೂ. ದಂಡ ವಿಧಿಸಲಾಗಿದೆ.
- ಸುರಳ್ಕರ್ ವಿಕಾಸ್ ಕಿಶೋರ್, ಪಾಲಿಕೆಯ ವಿಶೇಷ ಆಯುಕ್ತ (ಆರೋಗ್ಯ ವಿಭಾಗ)